ವಿಶ್ವವಿದ್ಯಾಲಯ ಮಾಡುವ ಕೆಲಸವನ್ನು ಏಕಾಂಗಿಯಾಗಿ ಹಂಪನಾ ಮಾಡಿದ್ದಾರೆ: ಎಚ್.ಎಸ್. ವೆಂಕಟೇಶಮೂರ್ತಿ
ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಜಯಕರ ಎಂ.ಎಸ್, “ನನಗೆ ಹಂಪನಾ ಅವರೊಂದಿಗಿನ ಒಡನಾಟ ಬಹಳ ವರ್ಷಗಳಿಂದಲೇ ಇದ್ದು, ಅವರಂತಹ ಹಿರಿಯ ಸಾಹಿತಿಗಳು ನಮ್ಮೊಂದಿಗೆ ಇರುವಂತಹದ್ದು ಬಹಳ ಸಂತಸದ ಸುದ್ದಿ. ಇನ್ನು ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು. ಹಿರಿಯರ ಸಮ್ಮುಖದಲ್ಲಿ ಈ ಒಂದು ಕಾರ್ಯಕ್ರಮವನ್ನು ಆಯೋಜಿಸಿರುವುದೇ ಉತ್ತಮವಾಗಿದೆ,” ಎಂದು ತಿಳಿಸಿದರು.
ಹಿರಿಯ ಸಾಹಿತಿ ಕಮಲಾ ಹಂಪನಾ, “ವಿದ್ಯಾರ್ಥಿಗಳನ್ನು ಕಂಡಾಗ ನನ್ನ ಮನಸ್ಸು ಹುಬ್ಬಿ ಹೋಗುತ್ತದೆ. ಹೃದಯ ತುಂಬಿ ಬರುತ್ತದೆ. ಇದಕ್ಕೆ ಕಾರಣ ನನ್ನ ಹಾಗೂ ವಿದ್ಯಾರ್ಥಿಗಳ ಒಡನಾಟ. ಇನ್ನು ಜೈನ ಸಾಹಿತ್ಯವು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪೂರ್ವ. ಜನ್ನ, ರನ್ನ, ಪಂಪರಂತಹ ಕವಿಗಳು ಕನ್ನಡ ಸಾಹಿತ್ಯಲೋಕದ ರತ್ನಗಳು. ಇದುವರೆಗೂ ಬೆಳೆದುಕೊಂಡು ಬಂದ ಸಾಹಿತ್ಯದಲ್ಲಿ ನಾವು ಕಲಿಯುವಂತಹದ್ದು ಬಹಳಷ್ಟಿದೆ,” ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಖ್ಯಾತ ಕವಿ ಹಾಗೂ ಸಂಸ್ಕೃತಿ ಚಿಂತಕ ಎಚ್.ಎಸ್. ಶಿವಪ್ರಕಾಶ್ ಮಾತನಾಡಿ, “ಹಂಪನಾ ಅವರ ವಿದ್ವತ್ತಿನ ಘನತೆ ಬಹಳ ಮಹತ್ತರವಾದದ್ದು. ಇದುವರೆಗೆ ಬಂದಿರುವ ಕನ್ನಡ ಸಾಹಿತ್ಯ ಚರಿತ್ರೆಗಳಲ್ಲಿ ಈ ಕೃತಿಯು ಅಗ್ರಗಣ್ಯ. ವಿಶ್ವವಿದ್ಯಾಲಯ ಮಾಡುವ ಕೆಲಸವನ್ನು ಏಕಾಂಗಿಯಾಗಿ ಹಂಪನಾ ಮಾಡಿದ್ದಾರೆ ಎಂಬುವುದೇ ಹೆಮ್ಮೆ. ಬೇರೆ ಭಾಷೆಗಳಲ್ಲಿ ಇಂತಹ ಪುಸ್ತಕಗಳು ಲಭ್ಯವಿರುವುದಿಲ್ಲ,” ಎಂದರು.
ಹಿರಿಯ ಸಾಹಿತಿ ಹಂಪನಾ ಮಾತನಾಡಿ, “ಕವಿಯಾದವನಿಗೆ ಬರವಣಿಗೆ ಅನ್ನುವಂತಹದ್ದು ಮರುಸೃಷ್ಟಿಯಾಗಿ ಒಲಿಯಬೇಕು. ಅದು ಕವಿಯ ಸೋಪಜ್ಞ ನೆಲೆಯ ಪ್ರತಿಭೆಯಾಗುತ್ತದೆ. ಈ ಒಂದು ಕೃತಿಯು ಮುಂದೆ ಅಧ್ಯಯನ ಮಾಡುವವರಿಗೆ ಕೈದೀವಿಗೆಯಾಗಿದೆ,” ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಮುನಿಯಪ್ಪ, “ಕಮಲಾ ಹಂಪನಾ ಅವರ ಜ್ಞಾನದ ಕುರಿತ ಅವಶ್ಯಕತೆ ನಮ್ಮ ವಿದ್ಯಾರ್ಥಿಗಳಿಗೆ ಬಹಳಷ್ಟಿಸದೆ. ಕನ್ನಡ ಸಾಹಿತ್ಯ ಕ್ಷೇತ್ರದ ಹಿರಿಯ ದಿಗ್ಗಜ್ಜರು ನಮ್ಮ ಸಂಸ್ಥೆಗೆ ಆಗಮಿಸಿದ್ದು, ಹಾಗೂ ನಮ್ಮ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟಕ್ಕೆ ಇದೊಂದು ಕೊಡುಗೆಯಾಗಿದೆ,”ಎಂದರು.
ಕಾರ್ಯಕ್ರಮದಲ್ಲಿ ಹಂಪನಾ ದಂಪತಿಗಳಿಗೆ ಗೌರವವನ್ನು ಸಮರ್ಪಿಸಲಾಯಿತು. ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.