ವಿಶ್ರಾಂತಿ ಜೀವನ ಸುಖಕರವಾಗಿರಲಿ – ಶರಣಬಸವ
ಭಾಲ್ಕಿ: ಕೆಲಸಕ್ಕೆ ಸೇರಿದ ದಿನವೆ ನಮ್ಮ ವಿಶ್ರಾಂತಿ ದಿನ ನಿಗದಿಯಾಗಿರುತ್ತದೆ. ಕ್ಷೇತ್ರ ಶಿಕ್ಷಣಾಧಿಕಾರಿ ಮಜಹರ ಹುಸೇನರವರ ವಿಶ್ರಾಂತಿ ಜೀವನ ಸುಖಕರವಾಗಿರಲಿ ಎಂದು ಎಸ್.ಟಿ.ಓ ಶರಣಬಸವರಾಜ ಅಭಿಪ್ರಾಯಪಟ್ಟರು.
ಪಟ್ಟಣದ ಕಾರಂಜಾ ಕಚೇರಿಯ ಹತ್ತಿರದ ರೈತ ಭವನ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಮಜಹರ ಹುಸೇನ ರವರ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಬದುಕಿನಲ್ಲಿ ಅಂಧಕಾರದಿಂದ ಬೆಳಕಿನೆಡೆಗೆ ಕೊಂಡೊಯ್ಯುವವನೇ ಗುರುವಾಗಿದ್ದಾನೆ. ಈ ಗುರುವಿನ ಕಾರ್ಯದಲ್ಲಿ ಹಲವಾರು ಮಜಲುಗಳನ್ನು ದಾಟಿ ಸೇವೆ ಸಲ್ಲಿಸಿದ ಮಜಹರ ಹುಸೇನ್ ರವರು ಎಲ್ಲರ ಮೆಚ್ಚುಗೆಗೆ ಪಾತ್ರ ರಾಗಿದ್ದಾರೆ. ಅವರ ಸೇವೆಯಿಂದ ನಿವೃತ್ತರಾಗಿದ್ದರೂ, ಪ್ರವೃತ್ತಿಯಿಂದ ಕ್ರಿಯಾಶೀಲರಾಗಿದ್ದಾರೆ. ನಿವೃತ್ತಿ ನಂತರವೂ ಅವರ ಸೇವೆ ನಮ್ಮೆಲ್ಲರಿಗೂ ಲಭಿಸುವಂತಾಗಲಿ ಎಂದು ಹೇಳಿದರು.
ಔರಾದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ತುಳಸಿರಾಮ ದೊಡ್ಡೆ ಮಾತನಾಡಿ, ಸೇವೆಗೆ ಸೇರಿದ ನಂತರ ನಿವೃತ್ತಿಯವರೆಗೆ ನಾವು ಮಾಡುವ ಕಾರ್ಯ ಎಲ್ಲರೂ ಮೆಚ್ಚುವಂತಿರಬೇಕು. ಮಜಹರ ಹುಸೇನ್ ರವರು ದಾವಣಗೆರೆಯಿಂದ ಭಾಲ್ಕಿಯ ವರೆಗೆ ಹಲವಾರು ಸ್ಥಳಗಳಲ್ಲಿ ಕಾರ್ಯನಿರ್ವಹಿಸಿ, ಉತ್ತಮ ಸೇವೆ ಸಲ್ಲಿಸಿದ್ದಾರೆ. ಭಾಲ್ಕಿಯಲ್ಲಿ ನಿವೃತ್ತಿ ಹೊಂದುತ್ತಿರುವುದು ಪುಣ್ಯದ ಸಂಗತಿ. ಭಾಲ್ಕಿಯು ಶರಣರ, ಸಂತರ ನಾಡಾಗಿದೆ. ಮಜಹರ ಹುಸೇನ್ ರವರು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೇ ಶಿಕ್ಷಕರ ಕೆಲಸಗಳನ್ನು ತಕ್ಷಣವೇ ಮಾಡಿಕೊಟ್ಟಿರುವುದರಿಂದ ಅವರಿಗೆ ಇಂದು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೀಳ್ಕೊಡಲಾಗುತ್ತಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಪತ್ರಾಂಕಿತ ವ್ಯವಸ್ಥಾಪಕ ಶಿವಕುಮಾರ ಫುಲಾರಿ, ನನ್ನ ಜೀವನದಲ್ಲಿ ಹಲವಾರು ಅಧಿಕಾರಿಗಳನ್ನು ಕಂಡಿದ್ದೇನೆ. ಆದರೆ ಮಜಹರ ಹುಸೇನ್ ರವರಂತಹ ಸಹೃದಯ ವ್ಯಕ್ತಿ ಯಾರಲ್ಲಿಯೂ ಕಂಡಿಲ್ಲ. ಕೆಲಸ ಮುಗಿದಮೇಲು ಮನೆಗೆ ಹೋಗುವಾಗ ಶಿಕ್ಷಕರ ಕೆಲಸ ಪೆಂಡಿಂಗ್ ಇದ್ದರೆ ಕೊಡಿ ಸಹಿ ಮಾಡಿ ಹೋಗುತ್ತೇನೆ ಎಂದು ನಮ್ಮ ಹತ್ತಿರ ಬಂದು ಕೇಳುತ್ತಿದ್ದರು. ಇಂತಹ ಸಹೃದಯ ವ್ಯಕ್ತಿ ಇನ್ನೂ ಹೆಚ್ಚುದಿನ ಸೇವೆಯಲ್ಲಿದ್ದರೆ ಚನ್ನಾಗಿತ್ತು ಎಂದು ಭಾವುಕರಾಗಿ ನುಡಿದರು.
ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ ಕಾರ್ಯಕ್ರಮ ಉದ್ಘಾಟಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ ಹೊಳಕರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಸವಂತರಾಯ ಜಿಡ್ಡೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿದ್ದವೀರಯ್ಯಾ ರುದನೂರ, ಅಖಿಲಾಂಡೇಶ್ವರಿ, ಪ್ರಮುಖರಾದ ರೋಹಿದಾರ ರಾಠೋಡ, ಖುರಶಿದ್ ಖಾದ್ರಿ, ಸಂಗ್ರಾಮಪ್ಪ ಖಂಡಾಳೆ, ಸಯ್ಯದ ಮುಜೀಬ ಶೇಖ್, ರವಿ ಕಲಶೆಟ್ಟಿ, ಸಮಾಜ ಕಲ್ಯಾಣ ಅಧಿಕಾರಿ ಸತೀಶಕುಮಾರ ಸಂಗನ್, ಸಹದೇವ.ಜಿ, ಜಯರಾಮ ಬಿರಾದಾರ, ರೋಹಿದಾಸ ರಾಠೋಡ, ಕುಸುಮಾಕುಮಾರಿ, ಶಕುಂತಲಾ ಸಾಲಮನಿ, ಮಹೇಶ, ವೆಂಕಟೇಶ, ಶಿವಕುಮಾರ ಸಿಂಧೆ, ಸಾಯಿನಾಥ ಸ್ವಾಮಿ, ಸೂರ್ಯಕಾಂತ ಸುಂಟೆ, ದತ್ತು ಕಾಟಕರ, ಮಲ್ಲಿಕಾರ್ಜುನ ಹಲಮಂಡಗೆ ಉಪಸ್ಥಿತರಿದ್ದರು.
ಬಾಕ್ಸ್:
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಬಸವೇಶ್ವರ ವೃತ್ತದ ಮೂಲಕ ಕಾರಂಜಾ ಕಚೇರಿ ಹತ್ತಿರದ ರೈತ ಭವನದ ಕಲ್ಯಾಣ ಮಂಟಪದ ವರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮಜಹರ ಹುಸೇನ್ ರವರಿಗೆ ಕುದರೆಮೇಲೆ ಕೂಡ್ರಿಸಿ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಎಲ್ಲಾ ಶಿಕ್ಷಕರು ಮತ್ತು ಶಿಕ್ಷಕರ ಸಂಘದ ಪದಾಧಿಕಾರಿಗಳು, ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿಯ ಸಿಬ್ಬಂದಿಗಳು ವಾದ್ಯಗಳ ನಾದಕ್ಕೆ ನೃತ್ಯ ಮಾಡುತ್ತ ಸಂತಸ ವ್ಯಕ್ತಪಡಿಸಿದರು. ನಂತರ ಎಲ್ಲಾ ಶಿಕ್ಷಕರು, ಇಲಾಖೆಯ ಸಿಬ್ಬಂದಿಗಳು ಮತ್ತು ಶಿಕ್ಷಕರ ಸಂಘದ ಪದಾಧಿಕಾರಿಗಳು, ಗಣ್ಯರು ಕ್ಷೇತ್ರ ಶಿಕ್ಷಣಾಧಿಕಾರಿ ಮಜಹರ ಹುಸೇನ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಿದರು.
ಕೋಟ್:
ಜೀವನದ ಹಲವಾರು ಮಜಲುಗಳನ್ನು ಕಂಡಿರುವ ನೌಕರರು, ನಿವೃತ್ತಿಯ ನಂತರ ಸುಖ ಜೀವನ ನಡೆಸಲು ಶಿಕ್ಷಣ ಇಲಾಖೆ ಮುಂಚೂಣಿಯಲ್ಲಿದೆ. ಶಿಕ್ಷಕರು ನಿವೃತ್ತಿಯ ನಂತರವೂ ತುಂಬಾ ಸಂತೋಷದಿಂದ ಜೀವನ ಸಾಗಿಸುತ್ತಾರೆ. ಎಲ್ಲಿಯೂ ಸಿಗದ ಮರ್ಯಾದೆ ಶಿಕ್ಷಣ ಕ್ಷೇತ್ರದಲ್ಲಿದೆ. ಶಿಕ್ಷಕನಾಗಿ, ಶಿಕ್ಷಣ ಕ್ಷೇತ್ರದ ಅಧಿಕಾರಿಯಾಗಿ ಮಾಡಿರುವ ಸೇವೆ ತೃಪ್ತಿ ತಂದಿದೆ.