ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಿ _ ಈಶ್ವರ ಖಂಡ್ರೆ
ಭಾಲ್ಕಿ: ಶಿಕ್ಷಕರು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಬೇಕು. ಸರ್ಕಾರದ ಯೋಜನೆಗಳ ಸದ್ಬಳಕೆಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಸರ್ಕಾರಿ ಹಾಗು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಾರದಲ್ಲಿ 6 ದಿನ ಪೌಷ್ಠಿಕ ಆಹಾರ ವಿತರಣೆಯ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರ ವಿದ್ಯಾರ್ಥಿಗಳಿಗಾಗಿ ಹಲವಾರು ಯೋಜನೆಗಳು ರೂಪಿಸಿ, ನಿರಂತರ ಕಲಿಕೆಗೆ ಒತ್ತುನೀಡುತ್ತಿದೆ. ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ, ಉಚಿತ ವಸ್ತ್ರ ಸೇರಿದಂತೆ ವಿದ್ಯಾರ್ಥಿಗಳಲ್ಲಿಯ ಅಪೌಷ್ಟಿಕತೆ ನಿವಾರಣೆಗಾಗಿ ಈ ಮೊದಲು ವಾರದಲ್ಲಿ ಎರಡುದಿನ ಮಾತ್ರ ಪೌಷ್ಠಿಕ ಆಹಾರ ನೀಡಲಾಗುತ್ತಿತ್ತು. ಆದರೆ ಅಜೀಂ ಪ್ರೇಂಜೀ ಸ್ವಯಂ ಸೇವಾ ಸಂಸ್ಥೆಯ ಸಹಕಾರದೊಂದಿಗೆ ವಾರದಲ್ಲಿ 6 ದಿನ ಪೌಷ್ಠಿಕ ಆಹಾರ ನೀಡಲು ನಿರ್ಧರಿಸಿ, 1 ರಿಂದ 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೂ ಪೌಷ್ಠಿಕ ಆಹಾರ ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿ.ಡಿ.ಪಿ.ಐ ಸಲೀಂಪಾಷಾ, ಮದ್ಯಾನ್ಹ ಉಪಹಾರ ಯೋಜನೆ 2002-03 ರಿಂದ ಕರ್ನಾಟಕದ 7 ಜಿಲ್ಲೆಗಳಲ್ಲಿ ಮೊದಲು ಪ್ರಾರಂಭವಾಗಿ, ನಂತರ 2005 ರಲ್ಲಿ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಪ್ರಾರಂಭಿಸಲಾಯಿತು. ಸದರಿ ವರ್ಷದಲ್ಲಿ ರಾಜ್ಯ ಸರ್ಕಾರ ಹಾಗು ಅಜೀಂ ಪ್ರೇಂಜಿಸಹಯೋಗದೊಂದಿಗೆ ವಾರದಲ್ಲಿ 4 ದಿನ ಮೊಟ್ಟೆ ವಿತರಣೆಗೆ ಒಪ್ಪಂದವಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಮಲ್ಲಿನಾಥ ಸಜ್ಜನ, ತಾಲೂಕಿನಲ್ಲಿ ಒಟ್ಟು 278 ಅಡುಗೆ ಕೇಂದ್ರಗಳಿವೆ, 24376 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಒಟ್ಟು ತಾಲೂಕಿನಲ್ಲಿ 678 ಅಡುಗೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿ ಬಸವರಾಜ ಜಿಡ್ಡೆ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ, ಕ್ಷೇತ್ರಶಿಕ್ಷಣಾಧಿಕಾರಿ ವಿಜಯಲಕ್ಷ್ಮಿ.ಬಿ, ಪುರಸಭೆ ಅಧ್ಯಕ್ಷೆ ಶಶಿಕಲಾ ಅಶೋಕ, ಪುರಸಭೆ ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ರಾಜಪ್ಪ ಪಾಟೀಲ, ಸೂರ್ಯಕಾಂತ ಸುಂಟೆ, ದತ್ತು ಕಾಟಕರ, ರಾಜಕುಮಾರ ಜೊಳದಪಕೆ, ಹಣಮಂತ ಕಾರಾಮುಂಗೆ, ವಿಜಯಕುಮಾರ ಚವ್ಹಾಣ, ಅಶೋಕ ತಾಂಬೋಳೆ, ಗೋವಿಂದರಾವ ಬಿರಾದಾರ, ಉತ್ತಮ ಸಿಂಧೆ, ಭೀಮಣ್ಣ ಕೊಂಕಣೆ, ರೋಹಿದಾಸ ರಾಠೋಡ, ಮನೋಹರ ಹೊಳಕರ, ಶಿವಕುಮಾರ ಫುಲಾರಿ ಉಪಸ್ಥಿತರಿದ್ದರು.