ಬೀದರ್

ವಿದ್ಯಾರ್ಥಿಗಳು ಧ್ಯಾನಚಂದ ಅವರ ಕ್ರೀಡಾ ಸ್ಫೂರ್ತಿ ಬೆಳೆಸಿಕೊಳ್ಳಿ – ಶೇಕ್ ಮಸಿಯುದ್ದಿನ್

ಬೀದರ: ಖ್ಯಾತ ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ ಅವರ ಕ್ರೀಡಾಸ್ಫೂರ್ತಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳು ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಂಡು ರಾಜ್ಯ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿ ಕಾಲೇಜಿಗೆ ಹೆಸರು ತರಬೇಕೆಂದು ರಾಷ್ಟ್ರೀಯ ಹಾಕಿ ಕ್ರೀಡಾಪಟು ಹಾಗೂ ಮನ್ನಳ್ಳಿ ಪದವಿ ಕಾಲೇಜಿನ ಉಪನ್ಯಾಸಕ ಶೇಖ್ ಮಸಿಯುದ್ದಿನ್ ತಿಳಿಸಿದರು.
ಕರ್ನಾಟಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕ್ರೀಡಾ ಹಾಗೂ ಎನ್.ಎಸ್.ಎಸ್.ವಿಭಾಗದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡ ಮೇಜರ್ ಧ್ಯಾನಚಂದ ಅವರ 118ನೇ ಜನ್ಮಶತಮಾನೋತ್ಸವದ ಪ್ರಯುಕ್ತ ರಾಷ್ಟ್ರೀಯ ಕ್ರೀಡಾ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಇಂದಿನ ಮಕ್ಕಳು ಯಾಂತ್ರಿಕರಣ ಮತ್ತು ಆಧುನಿಕರಣದ ಭರದಲ್ಲಿ ಮಕ್ಕಳು ಎಲ್ಲಾ ಆಟಗಳನ್ನು ಮೊಬೈಲ್‍ನಲ್ಲಿ ಆಡುತ್ತ ತಮ್ಮ ಶರೀರ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕ್ರೀಡೆಯಿಂದ ಶಾರಿರಿಕ ಸಧೃಢತೆ ಬೆಳೆಯುವುದರ ಜೊತೆಗೆ ಮಾನಸಿಕ ಸ್ಥಿತಿಯನ್ನು ಸಮತೋಲನದಲ್ಲಿ ಇಡುತ್ತದೆ ಎಂದು ಪ್ರತಿಪಾದಿಸಿದರು.
ಅಧ್ಯಕ್ಷತೆ ವಹಿಸಿದ್ದ ಕರಾಶಿ ಸಂಸ್ಥೆಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮಾತನಾಡಿ ನೆಹರೂ ನೆನಪಿಗಾಗಿ ಮಕ್ಕಳ ದಿನಾಚರಣೆ, ಡಾ. ರಾಧಾಕೃಷ್ಣನ್ ಅವರ ನೆನಪಿಗಾಗಿ ಶಿಕ್ಷಕರ ದಿನಾಚರಣೆ ಆಚರಿಸಿದಂತೆ ಮೇಜರ್ ಧ್ಯಾನಚಂದ ಅವರ ಜನ್ಮದಿನೋತ್ಸವವನ್ನು ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಕಾಲೇಜಿನ ಮಕ್ಕಳಿಗೆ ಕ್ರೀಡೆಗೆ ಸಂಬಂಧಪಟ್ಟಂತೆ ಎಲ್ಲಾ ಸೌಲಭ್ಯ ಒದಗಿಸಲಾಗಿದೆ. ಇದನ್ನು ಸದುಪಯೋಗ ಪಡೆದುಕೊಂಡು ಧ್ಯಾನಚಂದರಂತೆ ಹೆಸರು ಮಾಡಬೇಕೆಂದು ತಿಳಿಸಿದರು.
ಕರಾಶಿ ಸಂಸ್ಥೆಯ ಕಾರ್ಯದರ್ಶಿ ಸಿದ್ರಾಮ ಪಾರಾ ಮಾತನಾಡಿ ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿ ಇಂದು ಧ್ಯಾನಚಂದ ಅವರ ಹೆಸರಿನಲ್ಲಿ ನೀಡಲಾಗುತ್ತಿದೆ. ಇದು ನಿಜಕ್ಕೂ ಹೆಮ್ಮೆಯ ವಿಷಯ. ಮೇಜರ್ ಧ್ಯಾನಚಂದ ಅವರು ಮೂರು ಒಲಿಂಪಿಕ್ ಪದಕಗಳನ್ನು ಪಡೆದುಕೊಂಡು ರಾಷ್ಟ್ರಮಟ್ಟದಲ್ಲಿ ಮಿಂಚಿದ್ದರು. ಅವರ ಆದರ್ಶಗಳನ್ನು ಇಂದಿನ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕ್ರೀಡೆಯಲ್ಲಿ ಉನ್ನತಿ ಹೊಂದಬೇಕೆಂದು ತಿಳಿಸಿದರು.
ಇದೇ ವೇಳೆ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನಿಸ್ ಕ್ರೀಡೆಯಲ್ಲಿ ಗುಲಬರ್ಗಾ ವಿಭಾಗಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಾದ ಪ್ರೀತಮ್, ಸೌರಭ ಮೊಟ್ಟಿ ಮತ್ತು ಚೇತನ್ ಇವರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು. ವೇದಿಕೆ ಮೇಲೆ ಸಂಸ್ಥೆಯ ಜಂಟಿ ಕಾರ್ಯದರ್ಶಿ ಸತೀಶ ಪಾಟೀಲ, ಆಡಳಿತ ಮಂಡಳಿ ಸದಸ್ಯರಾದ ವೀರಭದ್ರಪ್ಪ ಬುಯ್ಯಾ, ರವಿ ಹಾಲಹಳ್ಳಿ, ಶ್ರೀನಾಥ ನಾಗೂರೆ ಉಪಸ್ಥಿತರಿದ್ದರು.
ಕು. ಆಶಾ ಅನೀಲಕುಮಾರ ಪ್ರಾರ್ಥಿಸಿದರು. ಡಾ. ದಿಲಿಪಕುಮಾರ ಮಾಲೆ ನಿರೂಪಿಸಿದರು. ದೈಹಿಕ ನಿರ್ದೇಶಕ ಡಾ. ಮಾದಯ್ಯ ಸ್ವಾಮಿ ಸ್ವಾಗತಿಸಿದರು. ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಹಂಗರಗಿ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಸೋಮನಾಥ ಬಿರಾದಾರ, ರಮೇಶ ಪಾಟೀಲ, ಡಾ. ಎಂ.ಎಸ್.ಚೆಲ್ವಾ, ಮಧುಸೂಧನ ಕುಲಕರ್ಣಿ ಸೇರಿದಂತೆ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Ghantepatrike kannada daily news Paper

Leave a Reply

error: Content is protected !!