ವಿಜೃಂಭಣೆಯಿAದ ಜರುಗಿದ ಬೀದರ ಜಗನ್ನಾಥ ರಥಯಾತ್ರೆ
ಬೀದರನ ನಿಲಾಚಲ ಧಾಮದಲ್ಲಿ ಪ್ರತಿಷ್ಠಾಪನೆಗೊಂಡ ಜಗನ್ನಾಥ ದೇವರ ರಥಯಾತ್ರೆ ರವಿವಾರ ಜನ ಸಾಗರದ ಮಧ್ಯೆ ಹರ್ಷೋಲ್ಲಾಸದಿಂದ ಜರುಗಿತು. ರಾಂಪೂರೆ ಕಾಲೋನಿಯ ಶ್ರೀ ಲಕ್ಷಿö್ಮ ಸತ್ಯನಾರಾಯಣ ಮಂದಿರದಲ್ಲಿ ಸತ್ಯ ನಾರಾಯಣ ಮಂದಿರದ ಅಧ್ಯಕ್ಷರಾದ ಪ್ರಭಾಕರ ಮೈಲಾಪೂರೆ, ಕಾರ್ಯದರ್ಶಿಯಾದ ನರಸಿಂಹ ದಿಕ್ಷಿತ, ಅಶೋಕ ರೆಜೆಂತಲ್ ರವರು ರಥಯಾತ್ರೆಗೆ ಅರ್ಚನೆ, ಭೋಗ, ಆರತಿ, ಗೋಪೂಜೆ ಗೈದು, ಮಧ್ಯಾಹ್ನ 12 ಗಂಟೆಗೆ ಅದ್ಧೂರಿಯಾಗಿ ಚಾಲನೆ ಕೊಟ್ಟರು. ರಥ ಯಾತ್ರೆ ಮೈಲೂರ್ ಕ್ರಾಸ್, ಬೊಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಭಗತ್ ಸಿಂಗ್ ವೃತ್ತ, ಅಂಬೇಡ್ಕರ ವೃತ್ತ ಚಿಕಪೇಟ ಮೂಲಕ ರಾತ್ರಿ 7.30 ಗಂಟೆಗೆ ನಿಲಾಚಲ ಧಾಮ ತಲುಪಿತು. ಸುಮಾರು 7 ತಾಸುಗಳ ರಥಯಾತ್ರೆಯಲ್ಲಿ ಆಂಧ್ರ, ಮಹಾರಾಷ್ಟç, ಕರ್ನಾಟಕದ ಭಕ್ತರು ಭಕ್ತಿ ಭಾವದಿಂದ ಪಾಲ್ಗೊಂಡರು. ನೃತ್ಯ, ಭಜನೆ, ಕೋಲಾಟ, ಕೀರ್ತನೆ, ಸಂಕೀರ್ತನೆಯಲ್ಲಿ ದೇವರ ನಾಮ ಸ್ಮರಣೆ ಮಾಡುತ್ತಾ ಹೆಜ್ಜೆ ಹಾಕಿದರು.
ಮಹಿಳೆಯರು, ಮಕ್ಕಳು, ಅಬಾಲ ವೃದ್ಧರಾದಿಯಾಗಿ ಮೈಮೆರೆದು ಭಕ್ತಿ-ಭಾವದಿಂದ ಕುಣಿದು ಕುಪ್ಪಳಿಸಿದರು. ಗುಜರಾತಿ, ರಾಜಸ್ಥಾನಿ, ರಜಪೂತ ಹೀಗೆ ಹೊರ ರಾಜ್ಯದಿಂದ ಬಂದು ಬೀದರ ನಿವಾಸಿಯಾದ ಎಲ್ಲಾ ಸಮುದಾಯದ ಜನ
ಕೂಡ ಇದರಲ್ಲಿ ಶೃದ್ಧಾಪೂರ್ವಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಜಗನ್ನಾಥ ರಥ ಯಾತ್ರೆ ವಿವಿಧ ಮಾದರಿಯ ಹೂಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಪುಣೆಯಿಂದ ಆಗಮಿಸಿದ ರಂಗೊಲಿ ಕಲಾವಿದರು, ದಾರಿಯುದ್ದಕ್ಕೂ ಬೃಹತ್ತಾದ ರಂಗೋಲಿಗಳನ್ನು ಬಿಡಿಸಿ, ಗಮನ ಸೆಳೆದರು. ಭಗವಾ ಧ್ವಜ ಹಿಡಿದ ಭಕ್ತರು ರಾಮ, ಕೃಷ್ಣ, ಹನುಮಾನ, ಬಲರಾಮ, ಸುಭದ್ರೆ, ಜಗನ್ನಾಥರ ಜಯಘೋಷ ಮೊಳಗಿಸಿದರು. ಭಕ್ತರ ಮೇಲೆ ಪುಷ್ಪವೃಷ್ಟಿ ಗೈಯಲಾಯಿತು. ರಥದಲ್ಲಿನ ಜಗನ್ನಾಥನಿಗೂ ನೈವೇದ್ಯ, ಫಲ ಪುಷ್ಪಗಳನ್ನು ದಾರಿಯುದ್ದಕ್ಕು ಜನ ಸಮರ್ಪಿಸುತ್ತಾ ಸಾಗಿದ್ದುದು ವಿಶೇಷವಾಗಿತ್ತು. ರಥಯಾತ್ರೆ ದಾರಿಯುದ್ದಕ್ಕು ಬೀದರನ ಗಣ್ಯರು, ಕಸಬರಿಕೆ ಹಿಡಿದು ದಾರಿ ಸ್ವಚ್ಛಗೊಳಿಸಿ, ಭಕ್ತಿ ಭಾವ ಮೆರೆದರು. ನಿಲಾಚಲ ಧಾಮದಲ್ಲಿ ರಾತ್ರಿ 12 ಗಂಟೆಯವರೆಗೂ ಜನ ಸರತಿ ಸಾಲಿನಲ್ಲಿ ನಿಂತು, ಜಗನ್ನಾಥನ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು.
ರಥ ಯಾತ್ರೆಯಲ್ಲಿ ಡಾ. ನೀಲೇಶ ದೇಶಮುಖ ರವರು ಮಾತನಾಡುತ್ತಾ, ಬೀದರನಿಂದ ಪುರಿ ಜಗನ್ನಾಥ 1200 ಕಿ.ಮೀ. ಅಂತರದಲ್ಲಿದೆ, ಅಲ್ಲಿನ ಯಾತ್ರೆಗೆ ಐದಾರು ಲಕ್ಷ ಜನ ಜಗತ್ತಿನಾದ್ಯಂತದಿAದ ಬಂದು ಸೇರುತ್ತಾರೆ. ಹಾಗಾಗಿ ರಥ ಎಳೆಯಲು ಮತ್ತು ದೇವರ ದರ್ಶನ ಹತ್ತಿರದಿಂದ ಮಾಡಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅದರಲ್ಲೂ ದುಡ್ಡು ಇರುವ ಇಲ್ಲಿನ ಶ್ರೀಮಂತರಿಗೆ ಸಮಯ ಇರುವುದಿಲ್ಲ, ಬಡವರ ಹತ್ತಿರ ದುಡ್ಡು ಇರುವುದಿಲ್ಲ, ಮಕ್ಕಳು, ಮಹಿಳೆಯರು ಮತ್ತು ವೃದ್ಧರಿಗೆ ಅಲ್ಲಿಗೆ ಹೋಗಲು ಆಗುವುದಿಲ್ಲ. ಹಾಗಾಗಿ ಈ ರಥ ಯಾತ್ರೆ ಬೀದರನಲ್ಲಿ ಪುರಿಯ ಮಾದರಿಯಲ್ಲಿ ಅಲ್ಲಿನ ಪದ್ಧತಿಯಂತೆ ಜರುಗಿಸುತ್ತಿರುವುದು ಸೌಭಾಗ್ಯದಾಯಕವಾಗಿದೆ. ಪ್ರತಿ ರವಿವಾರಕ್ಕೊಮ್ಮೆ ಸಂಜೆ 6 ಗಂಟೆಯಿAದ 10 ಗಂಟೆಯವರೆಗೆ ನಿಲಾಚಲ ಧಾಮದಲ್ಲಿ ನೃತ್ಯ, ಭಜನೆ, ಸಂಕೀರ್ತನೆ, ಪ್ರವಚನ ನಡೆಸಿಕೊಂಡು ಬರಲಾಗುತ್ತಿದೆ. ಪ್ರಸಾದ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ. ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಸನಾತನ ಧರ್ಮದ ಬಗ್ಗೆ ಹೆಚ್ಚಿನ ಅರಿವು ಆಚರಣೆ ಇಲ್ಲಿ ಮೂಡಿಸಲಾಗುತ್ತಿದೆ. ಪುರಿ ಜಗನ್ನಾಥನು ಜಗದನಾಥನಾಗಿದ್ದಾನೆ. ಆತನನ್ನು ಎಲ್ಲಾ ಸಮುದಾಯದವರು ಭೇದ ಭಾವರಹಿತವಾಗಿ ಆರಾಧಿಸುತ್ತಾರೆ. ಪುರಿಯ ಜಗನ್ನಾಥನ ಯಾತ್ರೆ ಬೀದರನಲ್ಲೂ ಇದೀಗ ಹೆಚ್ಚಿನ ಪ್ರಚಾರದಲ್ಲಿ ಆಚಾರದಲ್ಲಿ ಆಗುತ್ತಿದ್ದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ರಥ ಯಾತ್ರೆಯಲ್ಲಿ ಜಗನ್ನಾಥ ರಥಯಾತ್ರೆ ಅಧ್ಯಕ್ಷರಾದ ರಾಮಕೃಷ್ಣ ಸಾಳೆ, ನೀಲೇಶ ದೇಶಮುಖ, ಹನುಮಯ್ಯ ಅರ್ಥಂ, ಶಿವರಾಮ ಜೋಶಿ, ರಾಜಕುಮಾರ ಅಳ್ಳೆ, ವೀರಶೆಟ್ಟಿ ಮಣಿಗೆ, ಸುಧೀರ ಶರ್ಮಾ, ರಾಮಕೃಷ್ಣ ಕಾಳೇಕರ್, ಗಿರಿಶ ಕುಲಕರ್ಣಿ, ಕವಿರಾಜ ಹಲಮಡಗಿ, ಆರತಿ ಶರ್ಮಾ, ಸಂಧ್ಯಾ ಜೋಶಿ, ಸಪ್ನಾ ಹಲಮಡಗಿ, ಅರುಣಾ ಅಳ್ಳೆ, ಶಿಲ್ಪಾ ಕುಲಕರ್ಣಿ, ಸುಮೇದಾ ದೇಶಮುಖ, ಮನೋಹರ ಕಾಳೆ ಮತ್ತೀತರರು ಪಾಲ್ಗೊಂಡಿದ್ದರು.