ಲೋಕಸಭಾ ಚುನಾವಣೆಗೆ ಎಲ್ಲರೂ ಭಾಗವಹಿಸುವಂತೆ ಮಾಡಲು ಬಿಜೆಪಿಯಿಂದ ಮತದಾರರ ಚೇತನ ಮಹಾ ಅಭಿಯಾನ ವಿಶೇಷ ಕಾರ್ಯಕ್ರಮ-ಈಶ್ವರಸಿಂಗ್ ಠಾಕೂರ
ಬೀದರ,ಆ.30:- ಬರುವ ಲೋಕಸಭಾ ಚುನಾವಣೆ ವೇಳೆಗೆ ಜನರನ್ನು ಭಾಗವಹಿಸುವಂತೆ ಮಾಡಲು ಬಿಜೆಪಿ ಪಕ್ಷ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಭಾರತೀಯ ಜನತಾ ಪಾರ್ಟಿಯ ಕಲಬುರಗಿ ವಿಭಾಗೀಯ ಸಂಘಟನಾ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೀದರ ಜಿಲ್ಲಾ ಭಾರತೀಯ ಜನತಾ ಪಾರ್ಟಿ ವತಿಯಿಂದ ಮತದಾರರ ಚೇತನ ಮಹಾಭಿಯಾನ ಹೆಸರಿನ ಕಾರ್ಯಕ್ರಮ ರೂಪಿಸಲಾಗಿದ್ದು, ಇದಕ್ಕಾಗಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗುವುದು. ಮತದಾರರ ಪಟ್ಟಿಯಲ್ಲಿ ಹೆಸರು ಹೊಂದುವುದು ಪ್ರತಿಯೊಬ್ಬ ಪ್ರಜೆಯ ಹಕ್ಕು ಮತ್ತು ಪ್ರತಿ ಚುನಾವಣೆ ಪ್ರಕ್ರಿಯೆಯಲ್ಲಿ ಮತದಾನ ಮಾಡುವುದು ದೊಡ್ಡ ಉತ್ಸವ. ಇದನ್ನು ಗಲನದಲ್ಲಿಟ್ಟುಕೊಂಡು ಜಿಲ್ಲೆ ಮತ್ತು ವಿಧಾನಸಭಾ ಮಟ್ಟದಲ್ಲಿ ಸಂಪೂರ್ಣ ಯೋಜನೆ ರೂಪಿಸಲಾಗುವುದು. ಸಂಸದರು, ಶಾಸಕರು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಮತ್ತು ಪಕ್ಷದ ಪದಾಧಿಕಾರಿಗಳು ಪ್ರಚಾರದಲ್ಲಿ ಪರಿಣಾಮಕಾರಿ ಪಾತ್ರ ವಹಿಸಬೇಕು ಎಂಬ ಕಾರಣಕ್ಕೆ ಸಮಿತಿಯನ್ನು ರಚಿಸಲಾಗುವುದು. ಸಮಿತಿಯು ಮತದಾರರ ಪಟ್ಟಿಯ ತಿದ್ದುಪಡಿ ಮತ್ತು ನೊಂದಣಿಗೆ ವ್ಯಾಪಕವಾದ ಯೋಜನೆ ರೂಪಿಸಬೇಕು ಮತ್ತು ಯೋಜನೆಯ ಪರಿಶೀಲನೆಯನ್ನು ಕಾಲಕಾಲಕ್ಕೆ ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಮಾಡಬೇಕು ಎಂಬ ನಿರ್ದೇಶನದಂತೆ ಕೆಲಸ ಮಾಡುತ್ತದೆ ಎಂದು ತಿಳಿಸಿದರು.
ರಾಜ್ಯ ಸಮಿತಿಗೆ ತೇಜಸ್ವಿ ಸೂರ್ಯ ಅಧ್ಯಕ್ಷ, ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕ ಪಿ.ರಾಜೀವ, ಮುಖಂಡರಾದ ವಿವೇಕ್ ರೆಡ್ಡಿ, ಲೋಕೆಶ ಬಿಜ್ಜಾವರ ಕೆಲಸ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು. ಜಿಲ್ಲಾ ಸಮಿತಿಗೆ ಲೋಕಸಭಾ ಸದಸ್ಯ ಮತ್ತು ವಿಧಾನಸಭಾ ಸದಸ್ಯ, ವಿಧಾನ ಪರಿಷತ್ ಸದಸ್ಯ, ನಗರಸಭೆ ಸದಸ್ಯರು ಹಾಗೂ ಸಮಿತಿಯಲ್ಲಿ ಜಿಲ್ಲೆಯಿಂದ ನಿಯೋಜಿತ ಮಾಡಲಾದ ಸದಸ್ಯರು ಕೆಲಸ ನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಹೊಸ ಮತದಾರರ ನೊಂದಣಿಗೆ ಅರ್ಜಿ ನಮೂನೆ-6,ಸೇರ್ಪಡೆ ಆಗುವ ಹಾಗೂ ತೆಗೆದು ಹಾಕುವ ಕ್ರಿಯೆಗೆ ನಮೂನೆ-7,ವಿಳಾಸ ಬದಲಾವಣೆಗೆ ನಮೂನೆ-8 ಅರ್ಜಿಗಳನ್ನು ಅಗತ್ಯ ಪ್ರಮಾಣದಲ್ಲಿ ಮುದ್ರಿಸಿ ಬೂತ್ ಮಟ್ಟದಲ್ಲಿ ವಿತರಿಸಬೇಕು. ಪಕ್ಷದ ಕಾರ್ಯಕರ್ತರಿಂದ ಮನೆ ಮನೆಗೆ ಪ್ರಚಾರವನ್ನು ಆಯೋಜಿಸಬೇಕು. ಇದಕ್ಕಾಗಿ ನಾವು 7 ದಿನಗಳ ಅಲ್ಪಾವಧಿಯ ವಿಸ್ತಾರಕ್ ಯೋಜನೆಯನ್ನು ಸಹ ಮಾಡಿಸಬಹುದು ಎಂದು ಈಶ್ವರಸಿಂಗ್ ಠಾಕೂರ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.