ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ: ಸಮಾವೇಶಕ್ಕೆ ಚಿಂತನೆ : ಬಸವರಾಜ ಧನ್ನೂರ ಹೇಳಿಕೆ
ಬೀದರ್: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಸಂಬಂಧಿಸಿದಂತೆ ಮುಂದಿನ ಹೋರಾಟದ ರೂಪು ರೇಷೆಗಳ ಕುರಿತು ಚಿಂತನ-ಮಂಥನ ನಡೆಸಲು ಬರುವ ದಿನಗಳಲ್ಲಿ ಸಮಾವೇಶ ಆಯೋಜಿಸುವ ಚಿಂತನೆ ನಡೆದಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಬೀದರ್ ಜಿಲ್ಲಾ ಅಧ್ಯಕ್ಷರೂ ಆದ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಧನ್ನೂರ ಹೇಳಿದರು.
ಹುಮನಾಬಾದ್ ಪಟ್ಟಣದ ಬಸವನಗರದಲ್ಲಿ ಶ್ರಾವಣ ನಿಮಿತ್ತ ಸೋಮವಾರ ಆಯೋಜಿಸಿದ್ದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಸವಾದಿ ಶರಣರು ಕೊಟ್ಟ ವಿಶ್ವಮಾನ್ಯ ತತ್ವಗಳ ಮೂಲ ಆಶಯಕ್ಕೆ ಧಕ್ಕೆ ತರುವಂತಹ ಹಾಗೂ ಲಿಂಗಾಯತ ಸ್ವತಂತ್ರ ಧರ್ಮವೇ ಅಲ್ಲ ಎನ್ನುವಂತೆ ಬಿಂಬಿಸುವ ಪ್ರಯತ್ನಗಳು ಕೆಲ ಪಟ್ಟಭಧ್ರ ಹಿತಾಸಕ್ತಿಗಳಿಂದ ನಡೆದಿವೆ. ಹೀಗಾಗಿ ಲಿಂಗಾಯತರು ಎಚ್ಚೆತ್ತು, ಸಂಘಟಿತರಾಗಿ ಮತ್ತೊಮ್ಮೆ ಹೋರಾಟಕ್ಕೆ ಶಕ್ತಿ ತುಂಬಬೇಕಾಗಿದೆ ಎಂದು ತಿಳಿಸಿದರು.
ಕಳೆದ ವರ್ಷ ಬಸವಕಲ್ಯಾಣದಲ್ಲಿ ನಡೆದಿದ್ದ ಲಿಂಗಾಯತ ಪ್ರಥಮ ರಾಷ್ಟ್ರೀಯ ಮಹಾ ಅಧಿವೇಶನದಲ್ಲಿ ವಿಧಾನಸಭೆ ಚುನಾವಣೆ ನಂತರ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಕೇಂದ್ರಕ್ಕೆ ಮರು ಶಿಫಾರಸಿಗಾಗಿ ಒತ್ತಡ ಹೇರಲು ನಿರ್ಣಯಿಸಲಾಗಿತ್ತು. ವಿಧಾನಸಭೆ, ಲೋಕಸಭೆ, ವಿಧಾನ ಪರಿಷತ್ ಚುನಾವಣೆಗಳೆಲ್ಲವೂ ಮುಗಿದಿವೆ. ಈ ದಿಸೆಯಲ್ಲಿ ಹೆಜ್ಜೆ ಇಡಲು ಈಗ ಸಕಾಲವಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರವು ಕೆಲ ಕಾರಣಗಳನ್ನು ನೀಡಿ ಸ್ವತಂತ್ರ ಧರ್ಮ ಮಾನ್ಯತೆ ಶಿಫಾರಸನ್ನು ರಾಜ್ಯಕ್ಕೆ ಮರಳಿ ಕಳಿಸಿದೆ. ರಾಜ್ಯ ಸರ್ಕಾರ ಶಿಫಾರಸನ್ನು ಮರು ಪರಿಶೀಲಿಸಿ, ಕೇಂದ್ರ ಕೇಳಿರುವ ವಿಚಾರಗಳಿಗೆ ಸಂಬಂಧಿಸಿದಂತೆ ಸಮರ್ಪಕ ಉತ್ತರ ಕೊಟ್ಟು ಕೇಂದ್ರಕ್ಕೆ ಮರು ಶಿಫಾರಸು ಕಳುಹಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸಬೇಕಿದೆ ಎಂದು ತಿಳಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಹುಮನಾಬಾದ್ ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಸೋಮನಾಥ ಯಾಳವಾರ್, ಉಪಾಧ್ಯಕ್ಷ ಕಂಟೆಪ್ಪ ದಾನಪ್ಪ, ಪ್ರಮುಖರಾದ ಮಡಿವಾಳಯ್ಯ ಸ್ವಾಮಿ ಕಲ್ಲೂರ, ಶರಣಬಸಪ್ಪ ಪಾರಾ, ಮಲ್ಲಿಕಾರ್ಜುನ ರಟಕಲ್, ಶಂಕರ ನಂದಿ, ಪಂಡಿತ ಬಾಳೂರೆ, ಶೋಭಾ ಔರಾದೆ, ಕರುಣಾ ಸಲಗರ್, ಶಶಿಕಲಾ ರುದ್ರವಾಡಿ ಮತ್ತಿತರರು ಇದ್ದರು.
ಸ್ಪೂರ್ಥಿ ಧನ್ನೂರ ವಚನ ಪಠಣ ನೆರವೇರಿಸಿದರು. ಸಿದ್ದರಾಜ ಸಜ್ಜನಶೆಟ್ಟಿ ಗುರುಪೂಜೆ ನೆರವೇರಿಸಿದರು. ಬಸವರಾಜ ರುದ್ರವಾಡಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಸಂಗಮಕರ್ ನಿರೂಪಿಸಿ, ವಂದಿಸಿದರು.
ಬಸವ ಸೇವಾ ಪ್ರತಿಷ್ಠಾನ, ಶರಣ ಸಾಹಿತ್ಯ ಪರಿಷತ್ ಹುಮನಾಬಾದ್ ತಾಲ್ಲೂಕು ಘಟಕ ಹಾಗೂ ಬಸವೇಶ್ವರ ಮಹಿಳಾ ಸಂಘದ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.