ರೋಬೊಟಿಕ್ ಜ್ಞಾನ ಪಡೆದ ವಿದ್ಯಾರ್ಥಿಗಳು – ಡಾ. ಹಂಗರಗೆ
ಬೀದರ: ಕರ್ನಾಟಕ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜನೆ ಮಾಡಿದ ಮೂರು ದಿವಸಗಳ ರೋಬೊಟಿಕ್ ಯೋಜನೆಗಳ ಅನುಷ್ಠಾನ ಕಾರ್ಯಾಗಾರದ ಸಮಾರೋಪ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನೆರವೇರಿತು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ಮಲ್ಲಿಕಾರ್ಜುನ ಹಂಗರಗೆ ಮಾತನಾಡಿ ಮೂರು ದಿವಸಗಳಲ್ಲಿ ವಿದ್ಯಾರ್ಥಿಗಳು ರೋಬೊಟಿಕ್ ತಯಾರಿಕೆ, ಅನುಷ್ಠಾನ ಮತ್ತು ಅವುಗಳ ಸದ್ಬಳಕೆ ಕುರಿತು ಸಾಕಷ್ಟು ಜ್ಞಾನ ಪಡೆದುಕೊಂಡಿದ್ದಾರೆ. ಮಕ್ಕಳು ಇಲ್ಲಿ ಪಡೆದಿರುವ ಜ್ಞಾನ ಇಷ್ಟಕ್ಕೆ ಬಿಡದೆ ಅದನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಸತತ ಪ್ರಯತ್ನದಲ್ಲಿರಬೇಕೆಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳು ಹಾಗೂ ಮೂರು ದಿವಸಗಳ ಕಾಲ ಕಾರ್ಯಾಗಾರ ನಡೆಸಿಕೊಟ್ಟ ಖರಗಪುರ ಐಐಟಿಯ ಮಾರ್ಗದರ್ಶಕರಾದ ಉತ್ತರ ಪ್ರದೇಶದ ಉತ್ಸವ್ ಪ್ರತಾಪಸಿಂಗ್ ಮಾತನಾಡಿ ಕರ್ನಾಟಕ ಕಾಲೇಜಿನ ವಿದ್ಯಾರ್ಥಿಗಳು ಉತ್ಸಾಹಿಗಳು ಮತ್ತು ಚಾಣಾಕ್ಷರು. ರೋಬೊಟಿಕ್ ತಯಾರಿಕೆ ಕುರಿತು ಉತ್ಸಾಹದಿಂದ ಮಾಹಿತಿ ಕಲೆಹಾಕಿ ಪ್ರಾಯೋಗಿಕವಾಗಿ ತಯಾರಿಸಿ ತೋರಿಸಿದ್ದು ಹರ್ಷ ತಂದಿದೆ. ಈ ಕಾಲೇಜಿಗೆ ಆಗಮಿಸಿ, ಮೂರು ದಿವಸ ಕಳೆದದ್ದೇ ಗೊತ್ತಾಗಿಲ್ಲ. ಉತ್ಸಾಹದಿಂದ ಮಕ್ಕಳು ಕಾರ್ಯಾಗಾರದಲ್ಲಿ ಪಾಲ್ಗೊಂಡು ಸಹಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ರೋಬೊಟಿಕ್ ಸಂಶೋಧನೆಯ ವಿಷಯದಲ್ಲಿ ಮಕ್ಕಳ ಭವಿಷ್ಯ ಉಜ್ವಲವಾಗಲಿ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹೆಸರು ಗಳಿಸಲಿ ಎಂದು ಶುಭ ಹಾರೈಸಿದರು.
ವಿದ್ಯಾರ್ಥಿಗಳಾದ ಸಚಿನ್ ಮತ್ತು ಕು.ಸ್ನೇಹಾ ಕಳಸೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತ “ರೋಬೊಟಿಕ್ ಯೋಜನೆಗಳ ಅನುಷ್ಠಾನ ಕಾರ್ಯಾಗಾರ ಹಮ್ಮಿಕೊಂಡ ಜಿಲ್ಲೆಯ ಏಕೈಕ ಕಾಲೇಜು ಕರ್ನಾಟಕ ಕಾಲೇಜು ಆಗಿದೆ. ಇಂತಹ ಜ್ಞಾನ ಪಡೆದುಕೊಳ್ಳಲು ಅವಕಾಶ ಮಾಡಿಕೊಟ್ಟ ಕಾಲೇಜಿನ ಎಲ್ಲಾ ಸಿಬ್ಬಂದಿಗಳಿಗೂ ಹಾಗೂ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಧನ್ಯವಾದ ಸಲ್ಲಿಸುತ್ತೆನೆ ಎಂದು ತಿಳಿಸಿದರು. ಅಲ್ಲದೇ ಇಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಭವಿಷ್ಯದಲ್ಲಿ ಕಾಲೇಜಿನ ಹೆಸರು ವೃದ್ಧಿಸಲು ಶ್ರಮಿಸುತ್ತೇವೆ ಎಂದು ತಿಳಿಸಿದರು.
ವೇದಿಕೆ ಮೇಲೆ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ನಿರ್ದೇಶಕ ರವಿ ಹಾಲಹಳ್ಳಿ, ಶ್ರೀನಾಥ ನಾಗೂರೆ, ಉಪ ಪ್ರಾಂಶುಪಾಲರಾದ ಪ್ರೊ.ಅನಿಲಕುಮಾರ ಚಿಕ್ಕಮಾಣೂರ, ಡಾ. ರಾಜೇಂದ್ರ ಬಿರಾದಾರ ಸೇರಿದಂತೆ ಇನ್ನಿತರರು ಹಾಜರಿದ್ದರು. ಕಾರ್ಯಾಗಾರದ ಸಂಯೋಜಕ ಡಾ. ಎಂ.ಎಸ್.ಚಲ್ವಾ ನಿರೂಪಿಸಿದರು. ವಿದ್ಯುನ್ಮಾನ ವಿಭಾಗದ ಮುಖ್ಯಸ್ಥ ಡಾ. ಬಿರಾದಾರ ರಾಜೇಂದ್ರ ಸ್ವಾಗತಿಸಿದರು. ಉಪಪ್ರಾಂಶುಪಾಲರಾದ ಪ್ರೊ.ಅನಿಲಕುಮಾರ ಚಿಕ್ಕಮಾಣೂರ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.