ರೈತ ಸಂಪರ್ಕ ಕೇಂದ್ರಕ್ಕೆ ಶಾಸಕ ಪ್ರಭು ಚವ್ಹಾಣ ಧೀಡಿರ್ ಭೇಟಿ
ಔರಾದ ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೆ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಚವ್ಹಾಣ ಅವರು ಮಂಗಳವಾರ ದಿಢೀರ್ ಭೇಟಿ ನೀಡಿ ಬಿತ್ತನೆ ಬೀಜ ವಿತರಣೆಯನ್ನು ಪರಿಶೀಲಿಸಿದರು.
ಈ ವೇಳೆ ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಇಲ್ಲದಿರುವುದನ್ನು ಕಂಡು ತೀವ್ರ ತರಾಟೆಗೆ ತೆಗೆದುಕೊಂಡರು. ಅವ್ಯವಸ್ಥೆ ಹೀಗೆಯೇ ಮುಂದುವರದಲ್ಲಿ ಸುಮ್ಮನೆ ಬಿಡುವುದಿಲ್ಲವೆಂದು ಎಚ್ಚರಿಸಿದರು.
ಬಿತ್ತನೆ ಬೀಜ, ರಸಗೊಬ್ಬರದ ದಾಸ್ತಾನು ಬಗ್ಗೆ ಸಿಬ್ಬಂದಿಯಿಂದ ಮಾಹಿತಿ ಪಡೆದರು. ರೈತರಿಗೆ ಅವಶ್ಯವಿರುವಷ್ಟು ದಾಸ್ತಾನು ಇರಬೇಕು. ಕೊರತೆ ಬೀಳುವ ಸಾದ್ಯತೆಗಳಿದ್ದಲ್ಲಿ ಮುಂಚಿತವಾಗಿಯೇ ಸಂಬಂಧಿಸಿದವರಿಗೆ ಮಾಹಿತಿ ನೀಡಿ ತರಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರದ ಕೊರತೆಯಾಗಬಾರದು. ವಿತರಣೆ ಕೆಲಸದಲ್ಲಿ ಲೋಪವಾದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಸೂಚಿಸಿದರು.
ನಮ್ಮ ರೈತರಿಗೆ ಬರುವ ಬಿತ್ತನೆ ಬೀಜ ಅಕ್ರಮವಾಗಿ ಅನ್ಯ ರಾಜ್ಯಗಳಿಗೆ ಸಾಗಿಸುತ್ತಿರುವ ಬಗ್ಗೆ ದೂರುಗಳಿವೆ. ಇಂಥವುಗಳಿಗೆ ಆಸ್ಪದ ಕೊಡಬಾರದು. ಸರ್ಕಾರದ ಹಂತದಲ್ಲಿ ಸಮಸ್ಯೆಗಳಿದ್ದಲ್ಲಿ ನನ್ನ ಗಮನಕ್ಕೆ ತನ್ನಿ, ಸಂಬಂಧಿಸಿದವರೊಂದಿಗೆ ಮಾತನಾಡಿ ಸರಿಪಡಿಸುವೆ. ರೈತರಿಗೆ ಯಾವುದೇ ರೀತಿಯಲ್ಲಿ ಅನಾನುಕೂಲ ಆಗದಂತೆ ಕೃಷಿ ಅಧಿಕಾರಿಗಳು ಕೆಲಸ ಮಾಡಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಕೇರಬಾ ಪವಾರ, ಖಂಡೋಬಾ ಕಂಗಟೆ ಸೇರಿದಂತೆ ಇತರರಿದ್ದರು.