ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ ಸಮಾರೋಪ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ
ಬೀದರ್: ಕಮಲನಗರ ತಾಲ್ಲೂಕಿನ ಹಂದಿಕೇರಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಬಡ ವಿದ್ಯಾರ್ಥಿಗಳಿಗೆ ನೋಟ್ಪುಸ್ತಕ ಹಾಗೂ ಪೆನ್ ಉಚಿತವಾಗಿ ವಿತರಿಸಲಾಯಿತು.
ಔರಾದ್ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಸಾಮಾಜಿಕ ಚಟುವಟಿಕೆ ಭಾಗವಾಗಿ ವಿದ್ಯಾರ್ಥಿಗಳಿಗೆ ನೋಟ್ಪುಸ್ತಕ ವಿತರಿಸಿರುವುದು ಶ್ಲಾಘನೀಯ ಎಂದು ಬೀದರ್ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಪರಮೇಶ್ವರ ನಾಯ್ಕ್ ಹೇಳಿದರು.
ವಿದ್ಯಾರ್ಥಿಗಳು ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ವಿದ್ಯಾರ್ಜನೆ ಜತೆಗೆ ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರೀಯರಾಗಬೇಕು ಎಂದರು.
ಎನ್.ಎಸ್.ಎಸ್. ಅಧಿಕಾರಿ ಪ್ರೊ. ವಿನಾಯಕ ಕೊತಮಿರ ಮಾತನಾಡಿ, ಆತ್ಮವಿಶ್ವಾಸವಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದು ತಿಳಿಸಿದರು.
ಪ್ರಾಚಾರ್ಯ ಡಾ. ಸೂರ್ಯಕಾಂತ ಚಿದ್ರೆ ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್. ಅಧಿಕಾರಿ ಪ್ರೊ. ಅಂಬಿಕಾದೇವಿ, ಅಧ್ಯಾಪಕರಾದ ಡಾ. ಜಯಶೀಲಾ, ಡಾ. ಊರ್ವಶಿ, ಪ್ರೊ. ಮಹೇಶಕುಮಾರ, ಮುಖ್ಯಶಿಕ್ಷಕಿ ಛಾಯಾ ಕೋಟೆ ಇದ್ದರು. ಡಾ. ಸಂಜೀವಕುಮಾರ ತಾಂದಳೆ ನಿರೂಪಿಸಿದರು. ಡಾ. ಅಶೋಕ ಕೋರೆ ವಂದಿಸಿದರು.
ಔರಾದ್ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿತ್ತು.