ರಾಜ್ಯ ಮಟ್ಟದ ಶೂಟಿಂಗ್ ಚಾಂಪಿಯನ್‍ಶಿಪ್ ಬೀದರ್‍ನ ವೀರೇಶ್‍ಗೆ ಚಿನ್ನದ ಪದಕ
ಬೀದರ್: ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನಲ್ಲಿ ಈಚೆಗೆ ಏರ್ಪಡಿಸಿದ್ದ ರಾಜ್ಯಮಟ್ಟದ ಶೂಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಬೀದರ್‍ನ ಗ್ಲೊಬಲ್ ಸೈನಿಕ ಅಕಾಡೆಮಿಯ ವಿದ್ಯಾರ್ಥಿ ವೀರೇಶ ಎಂ. ಜೂಜಾ ಚಿನ್ನದ ಪದಕ ಜಯಿಸಿ ಸಾಧನೆಗೈದಿದ್ದಾರೆ.
ಸಬ್ ಯೂಥ್ ವೈಯಕ್ತಿಕ ವಿಭಾಗದ 10 ಮೀಟರ್ ಓಪನ್ ಸೈಟ್ ಸ್ಪರ್ಧೆಯಲ್ಲಿ ಅವರು ಮೊದಲ ಸ್ಥಾನ ಗಳಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
ಸಬ್ ಯೂಥ್ ಗುಂಪು ವಿಭಾಗದಲ್ಲಿ ವೀರೇಶ ಜೂಜಾ, ಸಮರ್ಥ್ ಖೂಬಾ ಹಾಗೂ ಸಾಯಿಕುಮಾರ ಅವರನ್ನು ಒಳಗೊಂಡ ತಂಡ ನಾಲ್ಕನೇ ಸ್ಥಾನ ಗಳಿಸಿತು.
ಸಬ್ ಯೂಥ್ ಬಾಲಕಿಯರ ವಿಭಾಗದ ಸ್ಪರ್ಧೆಯಲ್ಲಿ ವಿಭಾ, ಅನುಷ್ಕಾ ಹಾಗೂ ಸುದೀಕ್ಷ ಅವರ ತಂಡ ಏಳನೇ ಸ್ಥಾನ ಪಡೆಯಿತು.
ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಅಕಾಡೆಮಿ ವಿದ್ಯಾರ್ಥಿ ಪ್ರಥಮ ಸ್ಥಾನ ಗಳಿಸಿರುವುದು ಜಿಲ್ಲೆ ಹಾಗೂ ಕಲ್ಯಾಣ ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಗ್ಲೊಬಲ್ ಸೈನಿಕ ಅಕಾಡೆಮಿಯ ಅಧ್ಯಕ್ಷ ನಿವೃತ್ತ ಕರ್ನಲ್ ಶರಣಪ್ಪ ಸಿಕೇನಪುರ ಹೇಳಿದ್ದಾರೆ.
ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಶೂಟಿಂಗ್ ತರಬೇತಿ ಕೊಡಲಾಗುವುದು. ಕನಿಷ್ಠ ನಾಲ್ಕೈದು ವಿದ್ಯಾರ್ಥಿಗಳನ್ನಾದರೂ ರಾಷ್ಟ್ರಮಟ್ಟದ ಸ್ಪರ್ಧೆಗೆ ಅಣಿಗೊಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯಮಟ್ಟದ ಸ್ಪರ್ಧೆಯಲ್ಲಿನ ವಿದ್ಯಾರ್ಥಿಗಳ ಸಾಧನೆಗೆ ಅಕಾಡೆಮಿಯ ಮುಖ್ಯಶಿಕ್ಷಕಿ ಜ್ಯೋತಿ ರಾಗ ಹಾಗೂ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.