ರಾಜಕುಮಾರ ಒಬ್ಬ ಪ್ರಾಮಾಣಿಕ ಶಿಕ್ಷಕರು – ಎಸ್‍ಪಿ ಬಾಡಗಂಡಿ
ಬೀದರ: ನೇಳಗಿ ಗ್ರಾಮದ ಡಿ ರಾಜಕುಮಾರ ಸ್ವಾಮಿಯವರು ಸುಮಾರು 35 ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ, ಸಿಆರ್‍ಸಿ ಸಮನ್ವಯಾಧಿಕಾರಿಗಳಾಗಿ ಸೇವೆ ಸಲ್ಲಿಸಿ ಯಾವುದೇ ಕಪ್ಪುಚುಕ್ಕೆಯಿಲ್ಲದೆ ನಿಸ್ವಾರ್ಥದಿಂದ ಸೇವೆ ಸಲ್ಲಿಸುವ ಮೂಲಕ ನಿವೃತ್ತಿ ಹೊಂದಿರುವ ಡಿ. ರಾಜಕುಮಾರ ಅವರ ಸೇವೆ ಶ್ಲಾಘನೀಯ ಮತ್ತು ಇತರರಿಗೆ ಮಾದರಿಯಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಎಸ್‍ಪಿ ಬಾಡಗಂಡಿ ತಿಳಿಸಿದರು. ಭಾಲ್ಕಿ ತಾಲೂಕಿನ ನೇಳಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿರುವ ಡಿ.ರಾಜಕುಮಾರ ಸ್ವಾಮಿಯವರು ನಿವೃತ್ತ ಸಮಾರಂಭದಲ್ಲಿ ಮಾತನಾಡಿದರು. ಡಿ.ರಾಜಕುಮಾರ ಅವರು 97ರ ದಶಕದಲ್ಲಿ ಹೇಗಿದ್ದರೋ ಹಾಗೆಯೇ ಇಂದಿಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ದುಡಿಯುವ ಸಂದರ್ಭದಲ್ಲಿ ಎಂದಿಗೂ ವಿಶ್ರಾಂತಿ ತೆಗೆದುಕೊಳ್ಳಲಿಲ್ಲ. ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿ ತಮ್ಮ ಸೇವೆ ಸಲ್ಲಿಸಿದ್ದಾರೆ ಎಂದು ನುಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಭಾಲ್ಕಿ ತಾಲೂಕಾಧ್ಯಕ್ಷರಾದ ಸೂರ್ಯಕಾಂತ ಸುಂಟೆಯವರು ಮಾತನಾಡಿ ಡಿ ರಾಜಕುಮಾರ ಅವರು ಅತ್ಯಂತ ಕ್ರಿಯಾಶೀಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದನ್ನು 1989 ರಿಂದ ಇದುವರೆಗೆ ನಾವು ಕಂಡಿದ್ದೇವೆ. ಇವರು 2008ರಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಎಂಬ ಪ್ರಶಸ್ತಿ ಪಡೆದಿದ್ದಾರೆ. ದೆಹಲಿಯಲ್ಲಿ ಭಾರತ ಸೇವಾದಳ 45 ದಿವಸಗಳ ತರಬೇತಿ ಪಡೆದಿದ್ದಾರೆ. ಉದಯಪುರದಲ್ಲಿ ಪೊಪೆಟ್ರಿ ತರಬೇತಿ ಪಡೆದಿದ್ದಾರೆ. ಕುರುಕ್ಷೇತ್ರದಲ್ಲಿ ಸಮಾಜೋಪಯೋಗಿ ರಚನಾತ್ಮಕ ತರಬೇತಿ, ಯಲ್ಲಾಪುರದಲ್ಲಿ ಮೌಲ್ಯಶಿಕ್ಷಣ ಹಾಗೂ ಯೋಗ ಶಿಕ್ಷಣ ತರಬೇತಿ ಸೇರಿದಂತೆ ತಮ್ಮ ಸೇವೆಯ ಸಂದರ್ಭದಲ್ಲಿ ಹಲವು ತರಬೇತಿಗಳನ್ನು ಪಡೆದು ತಮ್ಮ ಶಾಲೆಯಲ್ಲಿ ಅನುಷ್ಠಾನಕ್ಕೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಲ್ಲದೆ ಇವರು ಪುಸ್ತಕಗಳ ಸಂಗ್ರಹ, ವಿವಿಧ ದೇಶಗಳ ನಾಣ್ಯಗಳ ಸಂಗ್ರಹ ಮಾಡಿದ್ದು ಇವರ ಹಿರಿಮೆ ಗರಿಮೆಗೆ ಸಾಕ್ಷಿಯಾಗಿದೆ. ಇವರೊಬ್ಬ ಚಿತ್ರ ಕಲಾವಿದರೂ ಹೌದು. ಹೀಗೆ ಬಹುಮುಖ ಪ್ರತಿಭೆ ಹೊಂದಿರುವ ಇವರು ಶಿಕ್ಷಣ ಲೋಕದ ಧ್ರುವತಾರೆಯಾಗಿ ತಮ್ಮ ಸೇವೆಗೆ ನ್ಯಾಯ ಒದಗಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಭಾಲ್ಕಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗಭೂಷಣ ಮಾಮಡಿ, ರಾಮಚಂದ್ರ ಕರ್ಮವೀರ, ಮಲ್ಲಿಕಾರ್ಜುನ ಹಲ್ಮಂಡಗಿ, ತಾಲೂಕಾ ಸಿಆರ್‍ಪಿ ಅಧ್ಯಕ್ಷ ಶರಣಪ್ಪ ಕಲ್ಲಪ್ಪನೋರ್, ಕಣಜಿ ಸಿಆರ್‍ಪಿ ಸೋಮನಾಥ ವರದಾ, ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಲಕ್ಷ್ಮೀಬಾಯಿ, ಎಸ್‍ಡಿಎಂಸಿ ಅಧ್ಯಕ್ಷ ಸಂಜೀವಕುಮಾರ ಹಿರಣ್ಯ, ನೇಳಗಿ ಶಾಲೆಯ ಶಿಕ್ಷಕರಾದ ಅಂಬಣ್ಣ, ಅಮರನಾಥ, ವಿಜಯಕುಮಾರ, ಇಸಾಕ್ ಪಟೇಲ್ ಹಾಜರಿದ್ದರು. ಕಣಜಿ ಸಿಆರ್‍ಸಿ ವಲಯದ ಎಲ್ಲಾ ಮುಖ್ಯ ಗುರುಗಳು ಸೇರಿದಂತೆ ಶಾಲಾ ಮಕ್ಕಳು, ನೇಳಗಿ ಗ್ರಾಮಸ್ಥರು ಉಪಸ್ಥಿತರಿದ್ದರು. ಡಿ.ರಾಜಕುಮಾರ ಸ್ವಾಮಿಯವರು ತಮ್ಮ ವಯೋನಿವೃತ್ತಿಯ ಪ್ರಯುಕ್ತ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಾಲಾ ಬ್ಯಾಗ್‍ಗಳನ್ನು ವಿತರಣೆ ಮಾಡಿ ತಮ್ಮ ಸೇವೆಯ ಕೊನೆಯ ಘಳಿಗೆಯಲ್ಲೂ ಮಾನವೀಯತೆ ಮೆರೆದರು.