ಮುಡಾ ಅವ್ಯವಹಾರದ ಸಮಗ್ರ ತನಿಖೆಯಾಗಲಿ: ಪ್ರಭು ಚವ್ಹಾಣ
ಮೈಸೂರು ಅಭಿವೃದ್ಧಿ ಪ್ರಾಧಿಕಾರದ (ಮುಡಾ) ಅವ್ಯವಹಾರ ಕುರಿತು ಸಮಗ್ರ ತನಿಖೆಯಾಗಬೇಕೆಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ ದಲಿತರು, ಪರಿಶಿಷ್ಟ ಸಮುದಾಯಕ್ಕೆ ಮೀಸಲಿಟ್ಟ ನಿವೇಶನಗಳನ್ನು ತಮಗೆ ಬೇಕಾದಂತೆ ಹಂಚಲಾಗಿದೆ. ಇದು ಸರ್ಕಾರದಿಂದ ಜನತೆಗೆ ಆಗಿರುವ ಮಹಾ ಮೋಸವಾಗಿದೆ ಎಂದು ಆರೋಪಿಸಿದ್ದಾರೆ.
ಪ್ರಭಾವಿಗಳು ತಮಗೆ ಬೇಕಾದವರಿಗೆ ನಿವೇಶನ ಹಂಚಿಕೆ ಮಾಡಿರುವ ಆರೋಪ ಇರುವುದರಿಂದ ಈ ಪ್ರಕರಣ ತೀವ್ರ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ. ಹಾಗಾಗಿ ಪಕ್ಷಾತೀತವಾಗಿ ತನಿಖೆ ನಡೆಸುವ ಅವಶ್ಯಕತೆಯಿದೆ ಎಂದಿದ್ದಾರೆ.
ಸರ್ಕಾರ ಏನು ಮಾಡಿದರೂ ಯಾರೂ ಕೇಳುವುದಿಲ್ಲ ಎಂದುಕೊಂಡಂತೆ ಕಾಣುತ್ತಿದ್ದು, ಒಂದರ ಮೇಲೊಂದು ಹಗರಣಗಳನ್ನು ನಡೆಸಲಾಗುತ್ತಿದೆ. ಬಡವರು, ಹಿಂದುಳಿದವರ ಪರವಾಗಿ ಪರವಾಗಿ ಮಾತನಾಡುವ ಜನಪ್ರತಿನಿಧಿಗಳೇ ಬಡ ಜನತೆಗೆ ಅನ್ಯಾಯ ಮಾಡುತ್ತಿದ್ದಾರೆ. ಮುಡಾ ಅವ್ಯವಹಾರದಲ್ಲಿ ತೊಡಗಿದ ಪ್ರತಿಯೊಬ್ಬರ ವಿರುದ್ಧ ಕಠಿಣ ಕ್ರಮವಾಗಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.