ಮಾತೃಭಾಷೆಯಿಂದ ರೋಗಿಯ ನೋವು ಅರ್ಥೈಸಿಕೊಳ್ಳಲು ಸಾಧ್ಯ – ಡಾ. ಮಹೇಶ ಬಿರಾದಾರ
ಬೀದರ: ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಬ್ರಿಮ್ಸ್ ಕನ್ನಡ ಸಂಘವೊಂದನ್ನು 2008ರಲ್ಲಿ ಕಟ್ಟಿಕೊಂಡು ವೈದ್ಯಕೀಯ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವ ಮತ್ತು ಕನ್ನಡ ನಾಡಿನ ಸಂಸ್ಕøತಿಯ ಕುರಿತು ಜಾಗೃತಿ ಮೂಡಿಸುವ ಕಾರ್ಯಗಳಾಗುತ್ತಿರುವುದು ಶ್ಲಾಘನೀಯ. ಬ್ರಿಮ್ಸ್ ಕಾಲೇಜಿನಲ್ಲಿ ಪ್ರತಿದಿನ ಕನ್ನಡ ದಿನಪತ್ರಿಕೆಗಳು, ಗ್ರಂಥಾಲಯದಲ್ಲಿ ಕನ್ನಡ ಪುಸ್ತಕಗಳು ರಾರಾಜಿಸಲಿ. ಜೊತೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಕನ್ನಡ ಸಂಶೋಧನೆಗಳಾಗಬೇಕೆಂದು ಹಿರಿಯ ಸಾಹಿತಿ ಡಾ. ಎಂ.ಜಿ.ದೇಶಪಾಂಡೆ ತಿಳಿಸಿದರು.
ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬ್ರಿಮ್ಸ್ ಕನ್ನಡ ಸಂಘ ಹಾಗೂ ಆತ್ರೇಯಾಸ್ 2021 ವೈದ್ಯಕೀಯ ವಿದ್ಯಾರ್ಥಿಗಳ ಸಹಯೋಗದಲ್ಲಿ ನುಡಿಮೇಳ-2023 ಕಾರ್ಯಕ್ರಮವನ್ನು ಜನಪದ ವಾದ್ಯ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಬ್ರಿಮ್ಸ್‍ನಲ್ಲಿ ಕೇವಲ ಒಂದು ದಿವಸ ನುಡಿಮೇಳವಾಗದೆ, ಪ್ರತಿದಿನವೂ ನುಡಿಮೇಳ ಆಚರಿಸುವಂತಾಗಲಿ. ಹೆಜ್ಜೆಗಳಿಂದ ಸಾವಿರ ಕಿ.ಮೀ, ನಡೆಯುವಂತೆ, ಅಕ್ಷರದಿಂದ ನೂರಾರು ಪುಸ್ತಕ ರಚಿಸಬಹುದು. ವೈದ್ಯಕೀಯ ವಿದ್ಯಾರ್ಥಿಗಳು ತಮಗೆ ಅನಿಸಿದ ಘಟನೆಗಳ ಕುರಿತು ಕವಿತೆ, ಕಥೆ ಮತ್ತು ಕಾದಂಬರಿಗಳನ್ನು ರಚಿಸುವ ಪ್ರಯತ್ನ ಮಾಡಬೇಕು. ಇದರಿಂದ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೂಡುತ್ತದೆ. ನಾವು ಹೊರರಾಜ್ಯದ ಭಾಷೆಗಳನ್ನ ಬೇಗ ಕಲಿಯುತ್ತೇವೆ. ಆದರೆ ಅನ್ಯರು ನಮ್ಮ ರಾಜ್ಯಕ್ಕೆ ಬಂದಾಗ ಕಲಿಯುವುದಿಲ್ಲ. ಬದಲಾಗಿ ಅವರ ಜೊತೆ ನಾವೂ ಕೂಡಾ ಕನ್ನಡ ಬಿಟ್ಟು ಅನ್ಯಭಾಷೆಯಲ್ಲಿಯೇ ಸಂಭಾಷಣೆ ಮಾಡುತ್ತೇವೆ. ಇದು ನಿಲ್ಲಬೇಕೆಂದು ಸಲಹೆ ನೀಡಿದರು.
ವಿಶೇಷ ಉಪನ್ಯಾಸ ನೀಡಿದ ರಾಷ್ಟ್ರೀಯ ಸೀನಿಯರ್ ಫೆಲೋಶಿಪ್ ಪ್ರಶಸ್ತಿ ಪುರಸ್ಕøತೆ ಹಾಗೂ ಕರ್ನಾಟಕ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ. ಸುನಿತಾ ಕೂಡ್ಲಿಕರ್ ಮಾತನಾಡಿ ಭಾಷೆ ಇರದೇ ಇದ್ದಿದ್ರೆ ಜಗತ್ತು ಅಂಧಕಾರದಲ್ಲಿ ಮುಳುಗುತಿತ್ತು. ಮಾತೃಭಾಷೆಯನ್ನು ಕೇವಲ ಭಾಷೆಯಾಗಿ ಕಾಣದೆ ಅದನ್ನು ಸಂಸ್ಕøತಿಯ ಸೆಲೆಯಾಗಿ ಕಾಣಬೇಕು. ಇಂದು ವೈದ್ಯಕೀಯ ವಿಭಾಗದಲ್ಲಿ ಕನ್ನಡ ಕಣ್ಮರೆಯಾಗುತ್ತಿದೆ. ಇಂತಹ ನುಡಿಮೇಳಗಳು ಕನ್ನಡ ಭಾಷೆ ಉಳಿಸುವ ಕಾರ್ಯ ಮಾಡುತ್ತಿವೆ. ವೈದ್ಯಕೀಯ ವಿದ್ಯಾರ್ಥಿಗಳು ಕನ್ನಡದ ಸಾಹಿತಿಗಳ ಮತ್ತು ಜನಪದ ಕವಿಗಳ ಪುಸ್ತಕ ಓದಬೇಕು. ಕನ್ನಡದ ಹಿರಿಮೆ ಗರಿಮೆ ಸತ್ವ ಕಾಪಾಡಬೇಕೆಂದು ತಿಳಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಹೇಶ ಬಿರಾದಾರ ಮಾತನಾಡಿ ಮಾತೃಭಾಷೆಯಲ್ಲಿ ರೋಗಿಯ ಜೊತೆ ಸಂಭಾಷಣೆ ಮಾಡಿದರೆ ರೋಗಿಯ ಮನದಾಳದ ಮಾತು ಅರ್ಥಮಾಡಿಕೊಳ್ಳಲು ಸಾಧ್ಯವಾಗಿ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಅನ್ಯಭಾಷೆ ಕೇವಲ ಮೆದುಳಿಗೆ ಹೋದರೆ, ಕನ್ನಡ ಭಾಷೆ ಹೃದಯಕ್ಕೆ ಮುಟ್ಟುತ್ತದೆ. ಎಲ್ಲರಲ್ಲೂ ಗೌರವ ಪ್ರೀತಿ ಕಾಣುವ ಏಕೈಕ ಭಾಷೆ ಕನ್ನಡ. ವಿದ್ಯಾರ್ಥಿಗಳು ಸಂಸ್ಕಾರ, ಸಂಸ್ಕøತಿಯ ಭಾಗವಾಗಿ ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳಬೇಕೆಂದು ಹೇಳಿದರು.
ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಚಾರ್ಯರಾದ ಡಾ. ರಾಜೇಶ ಪಾರಾ ಮತ್ತು ನುಡಿಮೇಳ ಕಾರ್ಯಕ್ರಮದ ಮೇಲುಸ್ತುವಾರಿ ಅಧಿಕಾರಿಗಳು ಹಾಗೂ ಬ್ರಿಮ್ಸ್ ಸಹಾಯಕ ಪ್ರಾಧ್ಯಾಪಕ ಡಾ. ಮಹೇಶ ತೊಂಡಾರೆ ಮಾತನಾಡಿದರು. ವೇದಿಕೆ ಮೇಲೆ ಸಮುದಾಯ ವೈದ್ಯಶಾಸ್ತ್ರಿ ವಿಭಾಗದ ಮುಖಸ್ಥೆ ಡಾ. ಪಲ್ಲವಿ ಕೇಸರಿ, ಬ್ರಿಮ್ಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ರುಶಾಲಿ ಕಾರ್ಡೆಕರ್ ಉಪಸ್ಥಿತರಿದ್ದರು. ಬ್ರಿಮ್ಸ್ ಕನ್ನಡ ಸಂಘದ ಸಂಯೋಜಕ ಡಾ. ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕು. ಸೌಮ್ಯಾ ಸ್ವಾಗತ ಗೀತೆ ಹಾಡಿದರೆ, ವಿದ್ಯಾರ್ಥಿಗಳಾದ ಅನೀಲ ಮತ್ತು ಕು. ಉಮಾಶ್ರೀ ನಿರೂಪಿಸಿದರು. ಪದವಿ ವಿಭಾಗದ ಪ್ರಥಮ ದರ್ಜೆ ಸಹಾಯಕ ಸಂತೋಷ ಬುಳ್ಳಾ ವಂದಿಸಿದರು.