ಮಾಜಿ ಸೈನಿಕರಿಗೆ ಏಕಲ್ ಅಭಿಯಾನ ಸತ್ಕಾರ
ಬೀದರ್: ಏಕಲ್ ಅಭಿಯಾನ ಜಿಲ್ಲಾ ಘಟಕವು ಜಿಲ್ಲೆಯ 12 ಮಾಜಿ ಸೈನಿಕರನ್ನು ಸನ್ಮಾನಿಸುವ ಮೂಲಕ ಕಾರ್ಗಿಲ್ ವಿಜಯೋತ್ಸವವನ್ನು ನಗರದಲ್ಲಿ ಅರ್ಥಪೂರ್ಣವಾಗಿ ಆಚರಿಸಿತು.
ರೈಲು ನಿಲ್ದಾಣ ಸಮೀಪದ ಮಾಜಿ ಸೈನಿಕರ ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಕ್ಯಾಪ್ಟನ್ ಸತ್ಯನಾರಾಯಣ, ಮಾಜಿ ಸೈನಿಕರಾದ ದಿಗಂಬರ, ತುಕ್ಕಪ್ಪ, ಗುರು, ಬಾಲಾಜಿ, ಗಂಗಾಧರ ಕುಲಕರ್ಣಿ, ಬಾಬು, ಬಾಲಾಜಿ ಪಾಟೀಲ, ಭೀಮಶಾ ನಗೋಕರ್, ಎಂ. ರಾಜು, ಧನರಾಜ, ಎಂ.ಡಿ. ಹಬೀಬ್ ಅವರನ್ನು ಶಾಲು ಹೊದಿಸಿ, ಹೂಮಾಲೆ ಹಾಕಿ ಗೌರವಿಸಲಾಯಿತು.
ಸೈನಿಕರು ಬಿಸಿಲು, ಮಳೆ, ಚಳಿಯನ್ನು ಲೆಕ್ಕಿಸದೆ ಗಡಿ ಕಾಯುತ್ತಿರುವುದರಿಂದಲೇ ದೇಶದ ಜನ ನೆಮ್ಮದಿಯಿಂದ ಇರಲು ಸಾಧ್ಯವಾಗಿದೆ ಎಂದು ಏಕಲ್ ಅಭಿಯಾನದ ಜಿಲ್ಲಾ ಘಟಕದ ಅಧ್ಯಕ್ಷ ರಾಜಕುಮಾರ ಅಳ್ಳೆ ನುಡಿದರು.
ರಾಷ್ಟ್ರ ಸೇವೆ ಎಲ್ಲಕ್ಕೂ ಮಿಗಿಲಾದದ್ದು. ಸೈನಿಕರನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ತಿಳಿಸಿದರು.
ಅಭಿಯಾನದ ಜಿಲ್ಲಾ ಮಹಿಳಾ ಸಮಿತಿ ಅಧ್ಯಕ್ಷೆ ಕಲ್ಪನಾ ದೇಶಪಾಂಡೆ ಅವರು, ದೇಶಕ್ಕಾಗಿ ಸೈನಿಕರು ಮಾಡಿದ ತ್ಯಾಗ ಹಾಗೂ ಬಲಿದಾನವನ್ನು ಸ್ಮರಿಸಿದರು.
ಅಭಿಯಾನದ ಜಿಲ್ಲಾ ಘಟಕದ ಕಾರ್ಯದರ್ಶಿ ಸಚ್ಚಿದಾನಂದ ಚಿದ್ರೆ ಅವರು, ಕಾರ್ಗಿಲ್ ಯುದ್ಧದಲ್ಲಿನ ಭಾರತೀಯ ಸೈನಿಕರ ಶೌರ್ಯವನ್ನು ಕೊಂಡಾಡಿದರು.
ಅಭಿಯಾನದ ಖಜಾಂಚಿ ದತ್ತಾತ್ರೇಯ ಸಗ್ಗಂ, ಪ್ರಮುಖರಾದ ಕಾಮಶೆಟ್ಟಿ ಚಿಕ್ಕಬಸೆ, ಗಣೇಶ ಕಪಲಾಪುರೆ, ಚಿತ್ತನಾನಂದ ಮೊದಲಾದವರು ಇದ್ದರು.