ಮಹಿಳೆಯರು ಶೋಷಣೆ ಸಹಿಸಿಕೊಳ್ಳದಿರಿ – ವಿಜಯಲಕ್ಷ್ಮೀ ಗಡ್ಡೆ
ಬೀದರ: ಮಹಿಳೆಯು ತನ್ನ ಮೇಲಾಗುತ್ತಿರುವ ಶೋಷಣೆಯನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಬಾರದು. ಪ್ರತಿನಿತ್ಯ ಒಂದೊಂದು ಪುಟ ಸಂವಿಧಾನದ ವಿಷಯವನ್ನು ಅಧ್ಯಯನ ಮಾಡಬೇಕು. ತನ್ಮೂಲಕ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಸಾಮಥ್ಯ ಬೆಳೆಸಿಕೊಳ್ಳಬೇಕೆಂದು ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ವಿಜಯಲಕ್ಷ್ಮೀ ಗಡ್ಡೆ ತಿಳಿಸಿದರು.
ನಗರದ ಕರ್ನಾಟಕ ಕಾಲೇಜಿನಲ್ಲಿ ಜನವಾದಿ ಮಹಿಳಾ ಸಂಘಟನೆ ಮತ್ತು ಕರ್ನಾಟಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಮಹಿಳಾ ಘಟಕದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ‘ಮಹಿಳೆ ಮತ್ತು ಸಂವಿಧಾನ’ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹೆಣ್ಣು ಭ್ರೂಣಹತ್ಯೆ ಎಂಬುದು ಮಹಾಪಾಪ. ಇದರಿಂದ ನಮಗೆ ನಾವೇ ನಾಶ ಮಾಡಿಕೊಂಡಂತಾಗುತ್ತದೆ. ಇಂದು ಮಹಿಳೆ ಸಶಕ್ತಿಕರಣದ ಕಡೆಗೆ ದಾಪುಗಾಲು ಹಾಕುತ್ತಿದ್ದಾಳೆ. ಪ್ರತಿಯೊಂದು ವಿಭಾಗದಲ್ಲೂ ಮೇಲುಗೈ ಸಾಧಿಸುತ್ತಿದ್ದಾಳೆ. ಆದ್ದರಿಂದ ಸಂವಿಧಾನವನ್ನು ಅಧ್ಯಯನ ಮಾಡಿ ವರದಕ್ಷಿಣೆ ಕಿರುಕುಳ ತಡೆಯುವ ನಿಟ್ಟಿನಲ್ಲಿ ಹೋರಾಟ ಮಾಡಬೇಕು. ಮಹಿಳೆಯರು ನ್ಯಾಯಾಲಯದಲ್ಲಿ ಮದುವೆ ನೊಂದಣಿ ಮಾಡಿಸಬೇಕು. ಇದರಿಂದ ಗಂಡನ ಮನೆಯವರ ಕಿರುಕುಳದ ಸಂದರ್ಭದಲ್ಲಿ ಕೋರ್ಟ್ ನಮ್ಮ ಸಹಾಯಕ್ಕೆ ನಿಲ್ಲುತ್ತದೆ. ಜನ್ಮಕೊಡುವ ತಾಯಿ ಉಳಿಯಬೇಕಾದರೆ ಸಂವಿಧಾನ ತಿಳಿಯಬೇಕಾಗಿದೆ. ಪ್ರತಿಯೊಂದು ವಿಭಾಗದಲ್ಲೂ ಮಹಿಳೆಯರು ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಿಳಿಯಬೇಕು. ಇದರಿಂದ ಜ್ಞಾನ ವೃದ್ಧಿಸಿ ಶೋಷಣೆ ನಿಲ್ಲಿಸಲು ಸಹಕಾರಿಯುತ್ತದೆ. ಶೋಷಣೆಯನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಬಾರದೆಂದು ವಿಜಯಲಕ್ಷ್ಮೀ ಗಡ್ಡೆ ಸಲಹೆ ನೀಡಿದರು. ಕಾಲೇಜು ವಿದ್ಯಾರ್ಥಿನಿಯರಿಗೆ ಯಾವುದೇ ರೀತಿಯ ತೊಂದರೆಯಾದರೆ ಜನವಾದಿ ಮಹಿಳಾ ಸಂಘಟನೆಯ ಸಹಕಾರ ಪಡೆಯಿರಿ ಎಂದು ವಿದ್ಯಾರ್ಥಿನಿಯರಲ್ಲಿ ಧೈರ್ಯ ತುಂಬಿದರು.
ಜನವಾದಿ ಮಹಿಳಾ ಸಂಘಟನೆಯ ಯುವ ಹೋರಾಟಗಾರ್ತಿ ಲಕ್ಷ್ಮೀ ಬಾವಗೆ ಮಾತನಾಡಿ ಇಂದು ಯುವಕ-ಯುವತಿಯರು ಸಾಮಾಜಿಕ ಜಾಲತಾಣಕ್ಕೆ ಅತಿಯಾಗಿ ಒಗ್ಗಿಕೊಂಡು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರೀಲ್ಸ್ ಮಾಡುವ ಹುಚ್ಚಾಟದಲ್ಲಿ ಅನಾಹುತ ಹೆಚ್ಚಾಗುತ್ತಿವೆ. ಪ್ರೀತಿ-ಪ್ರೇಮದ ಪಾಶದಲ್ಲಿ ಬಿದ್ದು ಅಮೂಲ್ಯವಾದ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇತ್ತಿಚಿಗೆ ಸಾಮಾಜಿಕ ಜಾಲತಾಣದ ಹುಚ್ಚಾಟಕ್ಕೆ ಬೀದರ ದಕ್ಷಿಣ ಕ್ಷೇತ್ರದಲ್ಲಿ 6 ಜನ ಹುಡುಗಿಯರು ತಮ್ಮ ಜೀವನ ನಾಶ ಮಾಡಿಕೊಂಡಿದ್ದಾರೆ. ಫೆಸ್ಬುಕ್, ವಾಟ್ಸಾಪ್ ಮತ್ತು ಟೆಲಿಗ್ರಾಮ್ನಲ್ಲಿ ಯುವತಿಯರು ಹುಡುಗರ ಜೊತೆ ಚಾಟ್ ಮಾಡಿ ಓದಿನ ಕಡೆಗೆ ವಿಮುಖರಾಗುತ್ತಿದ್ದಾರೆ. ಮನೆಯಲ್ಲಿ ಪಾಲಕರಿಗೆ ಗೊತ್ತಾಗಬಾರದೆಂದು ಫೋನ್ ಪೇನಲ್ಲಿಯೂ ಸಂದೇಶ ಕಳುಹಿಸುತ್ತ ಕಾಲಹರಣ ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಅಲ್ಲದೇ ವಿದ್ಯಾರ್ಥಿನಿಯರು ತಮಗೆ ಸಿಕ್ಕ ಅಮೂಲ್ಯವಾದ ಸಮಯವನ್ನು ಓದು ಬರಹ ಮತ್ತು ಸಾಧನೆ ಕಡೆಗೆ ಒಲವು ತೋರಿಸಿ ಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕೆಂದು ಸಲಹೆ ನೀಡಿದರು.
ಕರ್ನಾಟಕ ಕಾಲೇಜಿನ ಮಹಿಳಾ ಘಟಕದ ಸಂಯೋಜಕಿ ಶ್ವೇತಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಉಪಪ್ರಾಂಶುಪಾಲರಾದ ಅನೀಲಕುಮಾರ ಚಿಕ್ಕಮಾಣೂರ ವಹಿಸಿದ್ದರು. ಭೌತಶಾಸ್ತ್ರದ ಪ್ರಾಧ್ಯಾಪಕಿ ಶ್ರುತಿ ಸ್ವಾಮಿ ಸ್ವಾಗತಿಸಿದರು. ಕನ್ನಡ ವಿಭಾಗದ ಪ್ರಾಧ್ಯಾಪಕಿ ಡಾ. ಸುನಿತಾ ಕೂಡ್ಲಿಕರ್ ನಿರೂಪಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಜ್ಯೋತಿ ಕರ್ಪೂರ ವಂದಿಸಿದರು.
ಕಾರ್ಯಕ್ರಮದಲ್ಲಿ ಜನವಾದಿ ಮಹಿಳಾ ಸಂಘಟನೆಯ ಬೀದರ ತಾಲೂಕಾ ಕಾರ್ಯದರ್ಶಿ ಶ್ರೀಮತಿ ಸಾವಿತ್ರಿ ಚಿಕ್ಕಮಠ, ಕಾಮ್ರೇಡ್ ನೀಲಕ್ಕ, ಗೀತಾ ರಾಗಾ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.