ಮಕ್ಕಳೊಂದಿಗೆ ಶಾಸಕ ಪ್ರಭು ಚವ್ಹಾಣ ಭೋಜನ
ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಜೂನ್ 20ರಂದು ಔರಾದ(ಬಿ) ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಸಂಚರಿಸಿ ವಿವಿಧ ಅಭಿವೃದ್ದಿ ಕೆಲಸಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದರು. ನಾಗಮಾರಪಳ್ಳಿ ಶಾಲೆಯಲ್ಲಿ ಮಕ್ಕಳೊಂದಿಗೆ ಭೋಜನ ಸವಿದು, ಮಧ್ಯಾಹ್ನದ ಬಿಸಿಯೂಟವನ್ನು ಪರಿಶೀಲಿಸಿದರು.
ಮಕ್ಕಳಿಗೆ ತಮ್ಮ ಕೈಯಿಂದ ಊಟ ಬಡಿಸಿದರು. ಬಳಿಕ ತಾವೂ ಕೂಡ ಮಕ್ಕಳ ಸಾಲಿನಲ್ಲಿ ಕುಳಿತು, ಅನ್ನ, ಸಾಂಬಾರು ಬಡಿಸಿಕೊಂಡು ಹೇಗಿದೆಯೆಂದು ಸ್ವತಃ ಪರಿಶೀಲಿಸಿದರು. ಈ ವೇಳೆ ಶಾಲೆಯಲ್ಲಿ ಪ್ರತಿದಿನ ಹೀಗೆಯೇ ರುಚಿಯಾಗಿ ಅಡುಗೆ ಮಾಡುತ್ತಾರಾ ಎಂದು ಮಕ್ಕಳಿಗೆ ಪ್ರಶ್ನಿಸಿ ಮಾಹಿತಿ ಪಡೆದರು. ಅಡುಗೆ ಕೋಣೆಯನ್ನು ಸದಾ ಸ್ವಚ್ಛವಾಗಿಡಬೇಕು. ಮುಖ್ಯವಾಗಿ ಅಡುಗೆ ಸಿಬ್ಬಂದಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡಬೇಕು. ಬಿಸಿಯೂಟ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಬೇಕೆಂದು ಶಾಲೆಯ ಮುಖ್ಯಗುರುಗಳಿಗೆ ಸೂಚಿಸಿದರು.
ಜಂಬಗಿ ಶಾಲೆಗೆ ಭೇಟಿ ನೀಡಿದಾಗ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಂಠಿತವಾಗಿರುವುದಕ್ಕೆ ಶಾಲೆಯ ಮುಖ್ಯಗುರು ಒಳಗೊಂಡು ಎಲ್ಲ ಶಿಕ್ಷಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಈ ಭಾಗದ ಅತಿ ದೊಡ್ಡ ಗ್ರಾಮದಲ್ಲಿರುವ ಶಾಲೆಯ ಫಲಿತಾಂಶ ಕಡಿಮೆಯಾಗಿರುವುದು ಸರಿಯಲ್ಲ. ಹಿಂದೆ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಫಲಿತಾಂಶ ಸುಧಾರಣೆಗೆ ಪ್ರಯತ್ನಿಸಬೇಕು. ಈ ಬಾರಿ ಎಲ್ಲ ಶಿಕ್ಷಕರು ತಮ್ಮ ಶಕ್ತಿ ಮೀರಿ ಕೆಲಸ ಮಾಡಬೇಕು. ಪಾಠ ಬೋಧನೆಯಲ್ಲಿ ಯಾವುದೇ ರೀತಿಯ ಕೊರತೆಗಳಾಗದಂತೆ ಕೆಲಸ ಮಾಡಬೇಕೆಂದು ಸೂಚಿಸಿದರು.
ಆಂಗ್ಲ ಮಾಧ್ಯಮ ಶಾಲೆಗಳ ಉದ್ಘಾಟನೆ: ಹಂಗರಗಾ, ವನಮಾರಪಳ್ಳಿ, ಬಾದಲಗಾಂವ, ಯನಗುಂದಾ, ನಾಗಮಾರಪಳ್ಳಿ, ಚಿಂತಾಕಿ ವಡಗಾಂವ, ಜಂಬಗಿ, ಗಡಿಕುಶನೂರ, ಕೌಠಾ(ಬಿ) ಗ್ರಾಮಗಳಲ್ಲಿ ಆರಂಭಿಸಿರುವ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಉದ್ಘಾಟಿಸಿದರು. ಅಲ್ಲದೇ ಮಮದಾಪೂರ, ರಾಯಪಳ್ಳಿ, ಕಂದಗೂಳ, ಕೌಡಗಾಂವ ಸೇರಿದಂತೆ ವಿವಿಧ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಿದರು.
ಮಕ್ಕಳಿಗೆ ಇಂದಿನ ಕಾಲಕ್ಕೆ ತಕ್ಕಂತೆ ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲಾಗುತ್ತಿದೆ. ಕ್ಷೇತ್ರದ ಅನೇಕ ಕಡೆಗಳಲ್ಲಿ ಈ ಶಾಲೆಗಳನ್ನು ಆರಂಭಿಸಲಾಗಿದೆ. ಶಿಕ್ಷಕರು ಸರಿಯಾಗಿ ಕೆಲಸ ಮಾಡಬೇಕೆಂದು ತಿಳಿಸಿದರು. ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕೆಂದು ಎಲ್ಲ ಶಾಲೆಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮಾಡಬೇಕಿರುವ ಎಲ್ಲ ಕೆಲಸಗಳನ್ನು ಮಾಡುವುದಾಗಿ ಶಾಸಕರು ತಿಳಿಸಿದರು.
ಜೆಜೆಎಂ ಕಳಪೆಯಾಗಲು ಅಧಿಕಾರಿಗಳೇ ಕಾರಣ: ಗ್ರಾಮ ಸಂಚಾರದ ಸಂದರ್ಭದಲ್ಲಿ ಬಹುತೇಕ ಗ್ರಾಮಗಳಲ್ಲಿ ಜಲ ಜೀವನ್ ಮಿಷನ್(ಜೆಜೆಎಂ) ಕಾಮಗಾರಿಯ ಕುರಿತು ಸಾರ್ವಜನಿರಿಂದ ದೂರುಗಳು ಕೇಳಿಬಂದವು. ಪೈಪ್ಲೈನ್ ಕೆಲಸ ಸರಿಯಾಗಿಲ್ಲ. ಸಮರ್ಪಕವಾಗಿ ನೀರು ಬರುತ್ತಿಲ್ಲ. ನಲ್ಲಿಗಳು ಮುರಿದು ಹೋಗಿವೆ, ಗುಂಡಿ ಸರಿಪಡಿಸಿಲ್ಲ, ಎನ್ನುವ ನಾನಾ ರೀತಿಯ ಸಮಸ್ಯೆಗಳನ್ನು ಜನತೆ ಶಾಸಕರೊಂದಿಗೆ ಹಂಚಿಕೊAಡರು. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಸರಿಯಿಲ್ಲದ ಕಾರಣ ಕೆಲಸ ಕಳಪೆಯಾಗಿ ಆಗುತ್ತಿದೆ. ಇಂಥವರಿAದಾಗಿ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಇಂಥ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಸಾರ್ವಜನಿಕರು ಶಾಸಕರಲ್ಲಿ ವಿನಂತಿಸಿಕೊAಡರು. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಶಾಸಕರು ತಿಳಿಸಿದರು.
5 ಕೋಟಿಯ ಕಾಮಗಾರಿಗಳಿಗೆ ಚಾಲನೆ, ಉದ್ಘಾಟನೆ: ಹಂಗರಗಾ, ವನಮಾರಪಳ್ಳಿ, ಬಾದಲಗಾಂವ, ಔರಾದ(ಬಾ), ಮಮದಾಪೂರ, ಯನಗುಂದಾ, ಸುಂಧಾಳ, ನಾಗಮಾರಪಳ್ಳಿ, ರಾಯಪಳ್ಳಿ, ಚಿಂತಾಕಿ, ಅಶೋಕನಗರ ತಾಂಡಾ, ಗುಡಪಳ್ಳಿ, ವಡಗಾಂವ(ದೇ), ಚಿಕ್ಲಿ(ಜೆ), ಜಂಬಗಿ, ಕಂದಗೂಳ, ಬನಸಿ ತಾಂಡಾ ಆಲೂರ(ಕೆ), ಗಡಿಕುಶನೂರ, ಕೌಠಾ(ಬಿ), ಕೌಡಗಾಂವ, ಧೂಪತಮಹಾಗಾಂವ ಸೇರಿದಂತೆ 21ಕ್ಕೂ ಹೆಚ್ಚು ಗ್ರಾಮಗಳಲ್ಲಿ ಶಾಸಕರು ಸಂಚರಿಸಿ, ಸರ್ಕಾರಿ ಶಾಲೆಗಳಲ್ಲಿ ಸೋಲಾರ್ ಪ್ಯಾನಲ್ ಅಳವಡಿಕೆ, ಆರ್ಓ ಪ್ಲಾಂಟ್ ಅಳವಡಿಸುವುದು, ಆಟದ ಮೈದಾನ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಖಂಡೋಬಾ ಕಂಗಟೆ, ರಾಮರೆಡ್ಡಿ ಪಾಟೀಲ, ರವೀಂದ್ರ ರೆಡ್ಡಿ, ಪ್ರಕಾಶ ಜೀರ್ಗಾ, ಸಚಿನ ಬಿರಾದಾರ, ಶರಣಪ್ಪ ಪಾಟೀಲ ಇಟಗ್ಯಾಳ, ದೀಪಕ ಸಜ್ಜನಶೆಟ್ಟೆ, ಮಾರುತಿ ರೆಡ್ಡಿ ಪಟ್ನೆ, ಗೋವಿಂದ ರೆಡ್ಡಿ ಹಾಗೂ ಇತರರು ಉಪಸ್ಥಿತರಿದ್ದರು.