ಬೌದ್ಧಿಕತೆ ಜೀವಂತವಾಗಿಡುವ ಶಕ್ತಿ ಪಠ್ಯಗಳಿಗಿದೆ : ಭೀಮಾಶಂಕರ ಬಿರಾದಾರ
ಬೀದರ: ಸಮಾಜದಲ್ಲಿ ಬೌದ್ಧಿಕತೆ, ವೈಚಾರಿಕತೆ, ಮಾನವೀಯತೆ ಜೀವಂತವಾಗಿ ಇರಿಸುವ ಶಕ್ತಿ ಪಠ್ಯಗಳಿಗಿದೆ. ಒಂದು ಪಠ್ಯ ಕೃತಿ ಹಲವು ಆಯಾಮಗಳಲ್ಲಿ ಚರ್ಚಿತವಾದರೆನೇ ಅದಕ್ಕೊಂದು ಸಾಂಸ್ಕೃತಿಕ ಮಹತ್ವ ದಕ್ಕುತ್ತದೆ. ನಮ್ಮ ತಿಳಿವು- ಅರಿವು ವಿಸ್ತರಿಸುವ, ನಮ್ಮಲ್ಲಿ ಪ್ರಜ್ಞೆ ಬೆಳೆಸುವ ಸಾಧ್ಯತೆ ಪಠ್ಯ ಪುಸ್ತಕಗಳು ಮಾಡುತ್ತವೆ ಎಂದು ಬಸವಕಲ್ಯಾಣದ ಅಧ್ಯಾಪಕ ಡಾ. ಭೀಮಾಶಂಕರ ಬಿರಾದಾರ ಹೇಳಿದರು.
ಕರ್ನಾಟಕ ಕಾಲೇಜು ಕನ್ನಡ ವಿಭಾಗ, ಬರಹಗಾರರ ಮತ್ತು ಕಲಾವಿದರ ಸಂಘ ಮತ್ತು ಬೀದರ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹಯೋಗದಲ್ಲಿ ಶುಕ್ರವಾರ ಬೀದರ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಬೀದರ ವಿಶ್ವವಿದ್ಯಾಲಯ ಕಲಾ ನಿಕಾಯದ ಡೀನ್ ರಾದ ಪ್ರೊ. ಜಗನ್ನಾಥ ಹೆಬ್ಬಾಳೆ ಅವರ ಬದುಕು ಬರಹ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದ ಗೋಷ್ಠಿಯಲ್ಲಿ ‘ಡಾ. ಹೆಬ್ಬಾಳೆ ಅವರ ಪಠ್ಯ ಕೃತಿಗಳು’ ಕುರಿತು ಮಾತನಾಡಿದ ಅವರು, ಸಂಶೋಧನಾ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕೇಂದ್ರಿತವಾದ ಪಠ್ಯ ಕೃತಿಗಳು ಸಂಗ್ರಹಿಸಿ ವಿದ್ಯಾರ್ಥಿಗಳ ಓದಿಗೆ ಪ್ರೊ. ಹೆಬ್ಬಾಳೆ ಅವರು ಒದಗಿಸಿದ್ದಾರೆ ಎಂದರು.
ಹಲವು ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿ ಅನುಸಂಧಾನ ಮಾಡಿದ ಬೀದರ ಜಿಲ್ಲೆಯ ಬುಲಾಯಿ ಹಾಡುಗಳು, ಜನಪದ ಹಾಡುಗಳ ಸಂಗ್ರಹ, ಜನಪದ ಕತೆಗಳ ಸಂಗ್ರಹ ಕೃತಿಗಳಲ್ಲಿ ನೆಲ ಸಂಸ್ಕೃತಿಯ ಚಿಂತನೆ, ದೇಶಿವಾದದ ನೋಟಕ್ರಮ ಹಾಗೂ ಮಾನವೀಯ ಸಂಬಂಧಗಳ ರೂಪಕಗಳನ್ನು ಕಾಣಿಸುತ್ತವೆ. ಕನ್ನಡ ಸಾಂಸ್ಕೃತಿಕ ಪರಂಪರೆ, ಚಾರಿತ್ರಿಕ ಒತ್ತಡಗಳು, ಅಂದಿನ ಕಾಲಘಟ್ಟದ ಬದುಕಿನ ಮೌಲ್ಯಗಳು ಹಳಗನ್ನಡ ಪಠ್ಯದ ಮೂಲಕ ವಿದ್ಯಾರ್ಥಿಗಳನ್ನು ಮುಖಾಮುಖಿಯಾಗಿಸಿದ್ದಾರೆ.
ಬೀದರ ಮಣ್ಣಿನಲ್ಲಿ ಸಮಾಜವಾದದ ಎಳೆಯೊಂದು ಜೀವಂತವಾಗಟ್ಟ, ಲೋಹಿಯಾ ಅವರ ಒಡನಾಡಿ ಆರ್. ವಿ. ಬಿಡಪ ಅವರ ಕನ್ನಡ, ಕರ್ನಾಟಕ ಮತ್ತು ಅವರಲ್ಲಿ ಅಡಗಿದ ಈ ನೆಲದ ಪ್ರೀತಿಯ ಹಾಗೂ ಕಾಳಜಿಯ ಕಥನವನ್ನು ಆರ್ ವಿ ಬಿಡಪ ಅವರ ಜೀವನ ಕಥನದಲ್ಲಿ ಪ್ರೊ ಹೆಬ್ಬಾಳೆ ಕಟ್ಟಿ ಕೊಟ್ಟಿದ್ದಾರೆ. ದೇಸಿ ಪ್ರಜ್ಞೆ, ನೇಟಿವಿಸಮ್, ಮಾನವೀಯತೆ ಪ್ರೊ ಹೆಬ್ಬಾಳೆ ಅವರ ಪಠ್ಯಕೃತಿಗಳ ತಾತ್ವಿಕತೆಯಾಗಿದೆ ಎಂದರು.
ಶರಣ ಸಾಹಿತ್ಯ ಪರಿಷತ್ತು ಬೀದರ ಜಿಲ್ಲಾಧ್ಯಕ್ಷ ಪ್ರೊ. ಶಂಭುಲಿಂಗ ಕಾಮಣ್ಣ ಅವರು ಪ್ರೊ. ಜಗನ್ನಾಥ ಹೆಬ್ಬಾಳೆ ಅವರ ಸಂಪಾದನ ಕೃತಿಗಳ ಕುರಿತು ಮಾತನಾಡಿ, ಜಾನಪದ, ಅಭಿನಂದನಾ, ಸ್ಮರಣ ಸಂಚಿಕೆ ಸೇರಿ ಹಲವು ಕೃತಿಗಳು ಸಂಪಾದಿಸಿದ ಹೆಬ್ಬಾಳೆ ಅವರದು ಸಾಹಿತ್ಯದ ಮುಖ ಒಂದು ಕಡೆಯಲ್ಲಿದ್ದರೆ ಇನ್ನೊಂದು ಕಡೆಗೆ ಅವರು ಮಾನವೀಯ ಸಂಬಂಧಗಳ ಸಂಪಾದನೆ ಅಪಾರವಾಗಿ ಮಾಡಿಕೊಂಡಿದ್ದಾರೆ. ಅವರ ಸಂಪಾದನ ಕೃತಿಗಳ ಮೂಲಕ ಹಲವು ದಿಗಜ್ಜರ ಸಾಹಿತ್ಯ ಮತ್ತು ಸಾಧನೆ ಬಿಂಬಿಸಿದ್ದಾರೆ ಎಂದರು.
ಬೀದರ ವಿವಿ ಕನ್ನಡ ವಿಭಾಗದ ಸಂಯೋಜಕ ಡಾ. ರಾಮಚಂದ್ರ ಗಣಾಪೂರ ಅವರು, ಹೆಬ್ಬಾಳೆ ಅವರ ಸ್ವತಂತ್ರ ಕೃತಿಗಳ ಕುರಿತು ಹೆಬ್ಬಾಳೆ ಅವರದು ಬರಹ ಮತ್ತು ಬದುಕು ಎರಡೂ ಸೃಜನಶೀಲವಾಗಿವೆ. ಅವರು ಬರೆದ ಕವನ ಸಂಕಲನ ಬದುಕಿನ ಹಲವು ವಾಸ್ತವಗಳನ್ನು ದರ್ಶಿಸುತ್ತವೆ. ಕವಿತೆಗಳು, ಕತೆ, ಜೀವನ ಚರಿತ್ರೆ, ಸ್ಥಳ ಮಹತ್ವ, ಪ್ರಬಂಧ ಸೇರಿ ಸಾಹಿತ್ಯದ ಹಲವು ಪ್ರಕಾರಗಳು ಬರೆದು ಸಾಹಿತ್ಯ ಲೋಕದ ಗಮನ ಸೆಳೆದಿದ್ದಾರೆ ಎಂದರು.
ಹೆಬ್ಬಾಳೆ ಅವರ ಸಂಶೋಧನಾ ಪ್ರಬಂಧಗಳ ಕುರಿತು ಯುವ ಬರಹಗಾರ ಕಿರಣ ವಲ್ಲೆಪೂರೆ ಮಾತನಾಡಿ, ಪ್ರೊ. ಜಗನ್ನಾಥ ಹೆಬ್ಬಾಳೆ ಅವರ ಸಂಶೋಧನೆ ಕ್ಷೇತ್ರಕಾರ್ಯ ಕೇಂದ್ರೀತವಾಗಿದೆ. ಅವರ ಮಾರ್ಗದರ್ಶನದಲ್ಲಿ ನಡೆದ ಎಲ್ಲ ಪಿಎಚ್. ಡಿ. ಪ್ರಬಂಧಗಳು ಜಾನಪದ ಜಗತ್ತಿಗೆ ಹಾಗೂ ಬೀದರ ಜಿಲ್ಲೆಯ ಮಹತ್ವ ಸಾರುವ ಸಂಶೋಧನಾ ಪ್ರಬಂಧಗಳಾಗಿವೆ. ಬೀದರ ನೆಲ, ಸಂಸ್ಕೃತಿ ಹಾಗೂ ಜಾನಪದ ಇವೆರಡೂ ಹೆಬ್ಬಾಳೆ ಅವರ ಸಾಹಿತ್ಯದ ಜೀವಾಳವಾಗಿವೆ ಎಂದರು.
ಡಾ. ರಮೇಶ್ ಮುಲಗೆ ಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೀದರ ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ಪರಮೇಶ್ವರ ನಾಯ್ಕ್, ವಾಣಿಜ್ಯ ನಿಕಾಯದ ಡೀನರಾದ ಡಾ. ಶರಣಪ್ಪ ಮಲಗೊಂಡ, ಡಾ. ಪ್ರಭುಶಟ್ಟಿ ಮುಲಗೆ, ಶಾಂತಕುಮಾರ ಪಾಟೀಲ, ಡಾ. ಸೋಮನಾಥ ಯಾಳವಾರ, ಪ್ರೊ. ಉಮಾಕಾಂತ ಪಾಟೀಲ, ಪ್ರೊ ಜಗನ್ನಾಥ ಹೆಬ್ಬಾಳೆ, ಡಾ ಅಶೋಕ ಕೋರೆ ಸೇರಿ ಹಲವರಿದ್ದರು.
ಡಾ. ಮಹಾನಂದಾ ಮಡಕಿ ನಿರೂಪಿಸಿದರು. ಡಾ. ಶಿವರಾಜ್ ಪಾಟೀಲ್ ಸ್ವಾಗತಿಸಿದರು. ರಾಜಕುಮಾರ ಶಿಂಧೆ ವಂದಿಸಿದರು.