ಬೀದರ್

ಬೀದರ್ ವಿಮಾನಯಾನಕ್ಕೆ ಪ್ರಸಕ್ತ ವರ್ಷಕ್ಕೆ 14 ಕೋಟಿ ರೂ. ಮೀಸಲು- ಈಶ್ವರ ಖಂಡ್ರೆ 2025 ಕೋಟಿ ರೂ. ಮೂಲಸೌಕರ್ಯ ಕಾಮಗಾರಿಗೆ 16ರಂದು ಸಿಎಂ ಚಾಲನೆ

ಬೀದರ್, ಏ.13: ಕೇಂದ್ರ ಸರ್ಕಾರ ಉಡಾನ್ ಸಬ್ಸಿಡಿ ನಿಲ್ಲಿಸಿದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಬೀದರ್- ಬೆಂಗಳೂರು ನಾಗರಿಕ ವಿಮಾನಯಾನ ಪುನಾರಂಭಿಸಲು ಕೆಕೆಆರ್.ಡಿ.ಬಿ.ಯಿಂದ ಈ ವರ್ಷ 14 ಕೋಟಿ ಮೀಸಲಿಡಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯ್ತಿ ಕಾರ್ಯಾಲಯದಲ್ಲಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಏ.16ರಂದು ಸಂಜೆ 4 ಗಂಟೆಗೆ ಬೀದರ್ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ವಿಮಾನ ನಿಲ್ದಾಣದ ಹೊರಗೆ ನಡೆಯುವ ಕಾರ್ಯಕ್ರಮದಲ್ಲಿ 17ರಂದು ಬೆಳಗ್ಗೆ ಬೀದರ್ ನಿಂದ ಬೆಂಗಳೂರಿಗೆ ತೆರಳಲಿರುವ ಆಯ್ದ 5 ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ವಿತರಿಸುವ ಮೂಲಕ ನಾಗರಿಕ ವಿಮಾನಯಾನ ಸೇವೆಯ ಪುನಾರಂಭಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ ಎಂದರು.
ಕರುನಾಡಿಗೆ ಕಿರೀಟಪ್ರಾಯವಾಗಿರುವ ಬೀದರ್ ಜಿಲ್ಲೆ, ಸರ್ವಧರ್ಮಸಮನ್ವಯದ ನಾಡು. ಜಿಲ್ಲೆಯಲ್ಲಿ ಇತಿಹಾಸ ಪ್ರಸಿದ್ಧ ಬಸವಕಲ್ಯಾಣದ ಅನುಭವಮಂಟಪ, ಝರಣಿ ನರಸಿಂಹಸ್ವಾಮಿ ಕ್ಷೇತ್ರ, ಪಾಪನಾಶ, ನಾನಕ್ ಝೀರಾ ಗುರುದ್ವಾರ, ಮಹಮದ್ ಗವಾನ್ ಮದರಸಾ ಹಾಗೂ ಮೆಥೋಡಿಸ್ಟ್ ಚರ್ಚ್ ಇದೆ. ಈಗ ಹೊನ್ನಿಕೇರಿ ಅರಣ್ಯ ಪ್ರದೇಶವನ್ನು ಪರಿಸರ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ ಪಡಿಸುತ್ತಿದ್ದು, ಬೀದರ್ ನಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದೆ. ಹೀಗಾಗಿ ಈ ವಿಮಾನಯಾನ ಸೇವೆ ಮುಂದಿನ ದಿನಗಳಲ್ಲಿ ದೇಶ ವಿದೇಶಗಳ ಪ್ರವಾಸಿಗರಿಗೆ ನೆರವಾಗಲಿದೆ. ನಾಗರಿಕ ವಿಮಾನಯಾನ ಸೇವೆ ಪುನಾರಂಭಕ್ಕೆ ಸಹಕರಿಸಿದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಮೂಲಸೌಕರ್ಯಾಭಿವೃದ್ಧಿ ಸಚಿವರು ಹಾಗೂ ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ ಧನ್ಯವಾದ ಅರ್ಪಿಸುವುದಾಗಿ ಖಂಡ್ರೆ ತಿಳಿಸಿದರು.
ಇದೇ ಶುಭ ಸಂದರ್ಭದಲ್ಲಿ 2025 ಕೋಟಿ ರೂ. ಮೌಲ್ಯದ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಮತ್ತು ಯೋಜನೆಗಳ ಶಂಕುಸ್ಥಾಪನೆ ಮತ್ತು ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆಯನ್ನೂ ಮಾನ್ಯ ಮುಖ್ಯಮಂತ್ರಿಯವರು ನೆರವೇರಿಸಲಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಸುಮಾರು 200 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಹಲವು ಪೂರ್ಣಗೊಂಡಿದ್ದು, ಈ ಪೈಕಿ 10 ಕಾಮಗಾರಿ ಮತ್ತು ಯೋಜನೆಗಳಾದ
1. ಔರಾದ್ ನ ನಾಗೂರ್, ಸಂತಪೂರ್ ನಲ್ಲಿ 220 ಕೆ.ವಿ. ಉಪಕೇಂದ್ರಗಳ ಉದ್ಘಾಟನೆ (114 ಕೋಟಿ ರೂ.)
2. ಬೀದರ್ ನಗರಸಭೆ ಮತ್ತು ಭಾಲ್ಕಿ ಪುರಸಭೆ ವ್ಯಾಪ್ತಿಯ ವಿವಿಧ ಕಾಮಗಾರಿಗಳು (49 ಕೋಟಿ ರೂ.)
3. ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಭಾಲ್ಕಿಯಲ್ಲಿ 400 ಮನೆಗಳ ಹಸ್ತಾಂತರ (23 ಕೋಟಿ ರೂ.)
4. ಬ್ರಿಮ್ಸ್ ನಲ್ಲಿ ಹೃದ್ರೋಗ ಚಿಕಿತ್ಸಾ ಘಟಕ ಮತ್ತು ಕ್ಯಾಥ್ ಲ್ಯಾಬ್ (15.11 ಕೋಟಿ ರೂ.) ಹಾಗೂ
5. ಜೊತೆಗೆ ವಿದ್ಯಾರ್ಥಿ ನಿಲಯ, ಅಂಗನವಾಡಿ ಕೇಂದ್ರ, ಶಾಲೆ ಮತ್ತು ಆರೋಗ್ಯ ಕೇಂದ್ರ ಕಟ್ಟಡ ಸೇರಿದಂತೆ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದರು.
ಇದರ ಜೊತೆಗೆ
1. ಭಾಲ್ಕಿ ತಾ. ಮೆಹಕರ್ ಏತನೀರಾವರಿ ಯೋಜನೆ ಹಾಗೂ ಔರಾದ್ ತಾ. 36 ಕೆರೆ ತುಂಬಿಸುವ ಯೋಜನೆ (ಒಟ್ಟು ಮೊತ್ತ 582 ಕೋಟಿ ರೂ.)
2. ಬೀದರ್ ತಾ. ಬಗದಲ್ ಹಾಗೂ ಇತರ 104 ಜನವಸತಿ ಮತ್ತು ಚಿಟಗುಪ್ಪಾ ತಾ.ಮನ್ನಾಖೇಳಿ ಹಾಗೂ 32 ಜನ ವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ –(330 ಕೋಟಿ ರೂ.)
3. ಬೀದರ್ ನಗರಸಭೆ, ಬಸವಕಲ್ಯಾಣ, ಭಾಲ್ಕಿ, ಹುಮನಾಬಾದ್, ಚಿಟಗುಪ್ಪ ಮತ್ತು ಔರಾದ್ ಪುರಸಭೆ ವ್ಯಾಪ್ತಿಯಲ್ಲಿ ಜಲಮೂಲಗಳ ಪುನಶ್ಚೇತನ ಮತ್ತು ಉದ್ಯಾನ ಅಭಿವೃದ್ಧಿ (100 ಕೋಟಿ ರೂ.)
4. ಬೀದರ್ ನಗರಸಭೆ, ಹುಮನಾಬಾದ್ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಉನ್ನತೀಕರಣ (80 ಕೋಟಿ ರೂ.)
5. ಔರಾದ್ ತಾ. ಹಂಗರಗಾ – ಸವರಗಾಂವ್ ನಡುವೆ ಬ್ರಿಜ್ ಕಂ ಬ್ಯಾರೇಜ್ (70 ಕೋಟಿ ರೂ.)
6. ಪ್ರಜಾಸೌಧ – ಜಿಲ್ಲಾಡಳಿತ ಕಚೇರಿ ಕಟ್ಟಡ ನಿರ್ಮಾಣ ( 48 ಕೋಟಿ ರೂ.)
7. ಹೊಸ ತಾಲೂಕುಗಳಾದ ಚಿಟಗುಪ್ಪ, ಕಮಲನಗರ, ಹುಲಸೂರು ಆಡಳಿತ ಕೇಂದ್ರ ಕಟ್ಟಡ ನಿರ್ಮಾಣ (25 ಕೋಟಿ ರೂ.)
8. ಹೊನ್ನಿಕೇರಿ ಮೀಸಲು ಅರಣ್ಯದಲ್ಲಿ ಪರಿಸರ ಪ್ರವಾಸೋದ್ಯಮ ಯೋಜನೆ (15 ಕೋಟಿ ರೂ.)
9. ಭಾಲ್ಕಿಯಲ್ಲಿ ಅತ್ಯಾಧುನಿಕ 150 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣ ( 16 ಕೋಟಿ ರೂ.)
10. ಭಾಲ್ಕಿಯಲ್ಲಿ ಸುಸಜ್ಜಿತ ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾ ಸಮುಚ್ಛಯ (15 ಕೋಟಿ ರೂ.) ಹಾಗೂ
11. ಭಾಲ್ಕಿ ಆರ್.ಟಿ.ಓ. ಕಚೇರಿ ಮತ್ತು ವಾಹನ ಚಾಲನಾ ಪರೀಕ್ಷಾ ಪಥ ಸೇರಿದಂತೆ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಅಭಿವೃದ್ಧಿಯೇ ಕಾಂಗ್ರೆಸ್ ಸರ್ಕಾರದ ಮಂತ್ರ:
ಅಭಿವೃದ್ಧಿಯೇ ಕಾಂಗ್ರೆಸ್ ಸರ್ಕಾರದ ಮಂತ್ರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಅಭಿವೃದ್ಧಿಗೆ ಅದರಲ್ಲೂ ಹಿಂದುಳಿದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಇದರ ಫಲವಾಗಿ ಇಂದು ಸುಮಾರು 2025 ಕೋಟಿ ರೂ. ವೆಚ್ಚದ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಅವರೇ ಶಂಕುಸ್ಥಾಪನೆ ಮತ್ತು ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆ ನೆರವೇರುತ್ತಿದೆ ಎಂದರು.
ವಾಸ್ತವವಾಗಿ 2400 ಕೋಟಿ ರೂ.ಗೂ ಅಧಿಕ ಮೌಲ್ಯದ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರುತ್ತಿದೆ. ಇದು 2025ನೇ ಇಸವಿ ಆಗಿರುವ ಹಿನ್ನೆಲೆಯಲ್ಲಿ 2025 ಕೋಟಿ ರೂ. ಯೋಜನೆಗಳನ್ನು ಘೋಷಿಸುತ್ತಿದ್ದೇವೆ ಎಂದು ತಿಳಿಸಿದರು.
16ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್, ಸಚಿವರುಗಳಾದ ರಾಮಲಿಂಗಾರೆಡ್ಡಿ, ಎಚ್.ಕೆ. ಪಾಟೀಲ್, ಕೆ.ಜೆ. ಜಾರ್ಜ್, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ವೆಂಕಟೇಶ್, ಎನ್.ಎಸ್. ಬೋಸರಾಜ್, ಝಮೀರ್ ಅಹ್ಮದ್ ಖಾನ್, ರಹೀಂಖಾನ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಶರಣ ಪಾಟೀಲ್, ಸಂಸತ್ ಸದಸ್ಯ ಸೇರಿದಂತೆ ಹಲವು ಸಚಿವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯ್ತಿ ಸಿಇಓ ಡಾ. ಗಿರೀಶ್ ದಿಲೀಪ್ ಐದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಮೊದಲಾದವರು ಪಾಲ್ಗೊಂ

Ghantepatrike kannada daily news Paper

Leave a Reply

error: Content is protected !!