*ಬಿಜೆಪಿ ರಾಜ್ಯ ಕಾರ್ಯದರ್ಶಿ ಡಾ.ಶೈಲೇಂದ್ರ ಬೆಲ್ದಾಳೆ, ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಆಕ್ರೋಶ
ಬೀದರ್: ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರ ಜನಸಾಮಾನ್ಯರ ಮೇಲೆ ಬರೆ ಎಳೆದಿದೆ. ಸರ್ಕಾರ ತನ್ನ ಪಂಚ ಗ್ಯಾರಂಟಿ ಯೋಜನೆಗಳ ಜಾರಿಯಲ್ಲಿ ಎಡವಿದ್ದು, ಆರ್ಥಿಕ ದಿವಾಳಿ ಹಂತಕ್ಕೆ ಬಂದು ನಿಂತಿದೆ. ಜನರ ಜೇಬಿಗೆ ಕತ್ತರಿ ಹಾಕುತ್ತ ಅಕ್ಷರಶಃ ಹಗಲುದರೋಡೆ, ಸುಲಿಗೆ ದಂಧೆಗೆ ಇಳಿದಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿಯೂ ಆಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ್ ಹುಡಗಿ ಕಿಡಿಕಾರಿದ್ದಾರೆ.
ಪ್ರತಿ ಲೀಟರ್ ಪೆಟ್ರೋಲ್ ಬೆಲೆ 3 ರೂ. ಹಾಗೂ ಡೀಸೆಲ್ ಬೆಲೆ 3.50 ರೂ. ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರ ಮತ್ತೊಮ್ಮೆ ತನ್ನ ಜನವಿರೋಧಿ ನೀತಿಯನ್ನು ಸಾಬೀತುಪಡಿಸಿದೆ. ತೈಲ ಬೆಲೆ ಹೆಚ್ಚಳ ಬಡ, ಮಧ್ಯಮ ವರ್ಗದ ಜನರಿಗೆ ಆರ್ಥಿಕವಾಗಿ ಮತ್ತಷ್ಟು ಸಂಕಷ್ಟಕ್ಕೆ ತಳ್ಳಲಿದೆ. ಮುಂಬರುವ ದಿನಗಳಲ್ಲಿ ಇದು ಗೃಹಬಳಕೆ ಸೇರಿದಂತೆ ನಾನಾ ಅಗತ್ಯ ವಸ್ತುಗಳ ದರದಲ್ಲಿ ಸಹ ಗಣನೀಯ ವೃದ್ಧಿಗೆ ಕಾರಣವಾಗಿ, ಜನಸಾಮಾನ್ಯರ ಬದುಕು ದುಸ್ತರಗೊಳಿಸಲಿದೆ. ಸರ್ಕಾರ ಕೂಡಲೇ ತೈಲ ಬೆಲೆ ಮೇಲೆ ಹೇರಿರುವ ಹೆಚ್ಚುವರಿ ಕರ ವಾಪಸ್ ಪಡೆಯಬೇಕೆಂದು ಇಲ್ಲಿ ಹೊರಡಿಸಿದ ಜಂಟಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ತನ್ನ ಪಂಚ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಕ್ರೋಢೀಕರಿಸುವಲ್ಲಿ ಹೆಣಗಾಡುತ್ತಿದೆ. ಕಳೆದ ಒಂದು ವರ್ಷದಿಂದ ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿವೆ. ಯಾವೊಂದು ಹೊಸ ಕೆಲಸ ಆಗುತ್ತಿಲ್ಲ. ಒಂದೊಂದಾಗಿ ದರ ಏರಿಕೆ ನಿರಂತರ ಮಾಡುತ್ತ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಕೆಲವು ಗ್ಯಾರಂಟಿಗಾಗಿ ಹಲವು ರೀತಿಯಲ್ಲಿ ದರ ಹೆಚ್ಚಿಸಿ, ಜನರಿಂದ ಗ್ಯಾರಂಟಿ ಲಾಭಕ್ಕಿಂತ ಅಧಿಕ ಹಣ ವಸೂಲಿಯಲ್ಲಿ ತೊಡಗಿದೆ. ಈ ರೀತಿ ಜನಸಾಮಾನ್ಯರ ಮೇಲೆ ಕರ ಭಾರ ಹಾಕಿ, ಜನರ ಜೇಬಿಗೆ ಕತ್ತರಿ ಹಾಕಿ ಗ್ಯಾರಂಟಿ ಜಾರಿ ಮಾಡುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ್ದಾರೆ.
ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯ ಸರ್ಕಾರ ತೈಲದ ಮೇಲಿನ ಕರ ಹೆಚ್ಚಳ ಮಾಡಿದೆ. ಚುನಾವಣೆಗೂ ಮುನ್ನ ಹೆಚ್ಚಳ ಮಾಡಿದರೆ ಜನರ ಭಾರಿ ಆಕ್ರೋಶಕ್ಕೆ ಗುರಿಯಾಗಿ, ಚುನಾವಣೆಯಲ್ಲಿ ಹಿನ್ನಡೆ ಆಗಬಹುದು ಎಂಬ ಭಯದಿಂದ ಈಗ ಈ ನಿರ್ಧಾರ ಮಾಡಿದ್ದಾರೆ. ಈ ತರಹದ ನಿರ್ಣಯದ ಹಿಂದಿನ ಮರ್ಮ ಏನೆಂಬುದು ರಾಜ್ಯದ ಜನತೆಗೆ ಚೆನ್ನಾಗಿ ಗೊತ್ತಾಗಿದೆ. ಸರ್ಕಾರದ ಜನ ವಿರೋಧಿ ನೀತಿ, ನಿಲುವುಗಳಿಗೆ ಜನರು ತಕ್ಕ ಪಾಠ ಕಲಿಸುವುದು ಗ್ಯಾರಂಟಿ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಕಳೆದೊಂದು ವರ್ಷದಲ್ಲಿ ನಿರಂತರವಾಗಿ ದರ ಹೆಚ್ಚಳದಲ್ಲಿ ತೊಡಗಿ ಜನರ ಮೇಲೆ ಭಾರಿ ಹೊರೆ ಹಾಕುವ ಕೆಲಸ ಮಾಡುತ್ತಿದೆ. 200 ಯುನಿಟ್ ವಿದ್ಯುತ್ ಉಚಿತ ಕೊಡಲು ಆರಂಭಿಸಿ, ವಿದ್ಯುತ್ ಬಿಲ್ ಗಣನೀಯ ಏರಿಸಿದೆ.
ನೋಂದಣಿ ಶುಲ್ಕ ದುಪ್ಪಟ್ಟು ಮಾಡಿದೆ. ಬಾಂಡ್ ಗಳ ಬೆಲೆಯಂತೂ ನಾಲ್ಕೈದು ಪಟ್ಟು ಜಾಸ್ತಿ ಮಾಡಿದೆ. ಮದ್ಯದ ದರ ಎರಡ್ಮೂರು ಸಲ ಹೆಚ್ಚಿಸಿದೆ. ನೀರಿನ ಕರ ಜಾಸ್ತಿ ಮಾಡಿದೆ. ಬಸ್ ಪ್ರಯಾಣ ದರದಲ್ಲಿ ಸಹ ಈಗ ಭಾರಿ ಪ್ರಮಾಣದ ಹೆಚ್ಚಳಕ್ಕೂ ಮುಂದಾಗಿದೆ. ಹೀಗೆ ಅನೇಕ ಕರಗಳನ್ನು ಜನರ ಮೇಲೆ ಹಾಕಿ ಗ್ಯಾರಂಟಿ ಯೋಜನೆ ಜಾರಿಯಲ್ಲಿ ತೊಡಗಿದೆ. ಸರ್ಕಾರ ಗ್ಯಾರಂಟಿ ಜಾರಿಗೂ ಮುನ್ನ ಇದರ ಪೂರ್ವಾಪರ ವಿಚಾರ ಮಾಡಿಲ್ಲ. ಹೇಗಾದರೂ ಮಾಡಿ ಜನರ ಮತವನ್ನು ಪಡೆದು ಅಧಿಕಾರದ ಚುಕ್ಕಾಣಿ ಹಿಡಿದರೆ ಸಾಕೆಂಬ ನಿಟ್ಟಿನಲ್ಲಿ ಬೇಕಾಬಿಟ್ಟಿ ಯೋಜನೆ ಘೋಷಿಸಿ, ಅಧಿಕಾರಕ್ಕೆ ಬಂದ ಮೇಲೆ ಜನಸಾಮಾನ್ಯರ ಬದುಕಿನ ಜೊತೆಗೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹದಿನೈದಕ್ಕೂ ಹೆಚ್ಚು ಬಾರಿ ಬಜೆಟ್ ಮಂಡಿಸಿದ್ದಾರೆ. ಆರ್ಥಿಕ ಸ್ಥಿತಿಗತಿ ಬಗ್ಗೆ ಸಾಕಷ್ಟು ಅನುಭವ ಹೊಂದಿದ್ದಾರೆ. ಆದರೆ ಅವರ ಸಾರಥ್ಯದಲ್ಲಿಯೇ ರಾಜ್ಯ ಆರ್ಥಿಕವಾಗಿ ದಿವಾಳಿಯಂತಹ ದುಸ್ಥಿತಿಗೆ ಬಂದಿರುವುದು ಆತಂಕ ಮೂಡಿಸಿದೆ. ಒಂದರ ಮೇಲೊಂದರಂತೆ ಬೆಲೆ ಏರಿಕೆ ಮಾಡುತ್ತಿರುವುದು ನೋಡಿದರೆ ಈ ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂಬುದೇ ತಿಳಿಯದಂತಾಗಿದೆ. ವರ್ಷದ ಹಿಂದೆ ತೈಲ ಏರಿಕೆ ವಿರೋಧಿಸಿ ಸ್ಕೂಟರ್ ಶವಯಾತ್ರೆ ಮಾಡಿದ ಸಿದ್ಧರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಈಗ ಜನರಿಗೆ ಉತ್ತರ ಕೊಡಲಿ ಎಂದು ಸವಾಲೆಸೆದಿದ್ದಾರೆ.
—–
ಇಂದು ಬೀದರ್ ನಗರದಲ್ಲಿ ಪ್ರತಿಭಟನೆ
ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ದರ ದಿಢೀರ್ ಹೆಚ್ಚಳ ಮಾಡಿದ ಕ್ರಮ ವಿರೋಧಿಸಿ ಜಿಲ್ಲಾ ಬಿಜೆಪಿಯಿಂದ ಸೋಮವಾರ ಬೀದರ್ ನಗರದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ತಿಳಿಸಿದ್ದಾರೆ. ಬೆಳಿಗ್ಗೆ 10.30ಕ್ಕೆ ನಗರದ ಡಾ.ಅಂಬೇಡ್ಕರ್ ವೃತ್ತದ ಹತ್ತಿರದ ಪ್ರವಾಸಿ ಮಂದಿರದಲ್ಲಿ ಪಕ್ಷದ ಮುಖಂಡರು, ಜನಪ್ರತಿನಿಧಿಗಳು, ಪದಾಧಿಕಾರಿಗಳು, ಕಾರ್ಯಕರ್ತರು ಜಮಾಯಿಸಿ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ವಾಹನಗಳಿಗೆ ಕೈಯಿಂದ ತಳ್ಳುತ್ತ ವಿನೂತನ ರೀತಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಪಕ್ಷದ ಕಾರ್ಯಕರ್ತರಲ್ಲದೆ ಜನ ಹಿತದ ಈ ಹೋರಾಟದಲ್ಲಿ ಸಾರ್ವಜನಿಕರು, ವಿವಿಧ ಸಂಘ, ಸಂಸ್ಥೆಯವರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.