ಬೀದರ್

ಬಾಲ್ಯ ವಿವಾಹ ನಿಷೇಧ ಜಾಗೃತಿ: ಗಮನ ಸೆಳೆದ ವಾಕ್‍ಥಾನ್

ಬೀದರ್: ಬಾಲ್ಯ ವಿವಾಹ ನಿಷೇಧ ಜಾಗೃತಿಗಾಗಿ ವಿವಿಧ ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಗರದಲ್ಲಿ ಗುರುವಾರ ನಡೆದ ವಾಕ್‍ಥಾನ್ ಸಾರ್ವಜನಿಕರ ಗಮನ ಸೆಳೆಯಿತು.
ತಲೆ ಮೇಲೆ ಟೊಪ್ಪಿಗೆ ಧರಿಸಿ, ಕೈಯಲ್ಲಿ ಫಲಕ ಹಿಡಿದುಕೊಂಡಿದ್ದ ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ವಿವಾಹಿತ ಕಿಶೋರಿಯರು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಘೋಷಣೆ ಕೂಗುತ್ತ ಸಾಗಿ ಜನರಲ್ಲಿ ಬಾಲ್ಯ ವಿವಾಹದ ವಿರುದ್ಧ ಅರಿವು ಮೂಡಿಸಲು ಪ್ರಯತ್ನಿಸಿದರು.
‘ಬಾಲ್ಯ ವಿವಾಹ ನಿಲ್ಲಿಸಿ, ಮಕ್ಕಳ ಜೀವ ಉಳಿಸಿ’, ‘ಮಕ್ಕಳ ಮೇಲಿನ ದೌರ್ಜನ್ಯ ತಡೆಯಿರಿ’, ‘ಮಕ್ಕಳ ರಕ್ಷಣೆ ಎಲ್ಲರ ಹೊಣೆ’, ‘ಲಿಂಗ ತಾರತಮ್ಯ ಹೋಗಲಾಡಿಸಿ’, ‘ಮಕ್ಕಳ ಹಕ್ಕು ಅರಿಯಿರಿ’, ‘ಹೆಣ್ಣುಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿ’ ಎಂಬಿತ್ಯಾದಿ ಬರಹಗಳನ್ನು ಹೊಂದಿದ್ದ ಫಲಕಗಳು ಮಕ್ಕಳ ಕೈಯಲ್ಲಿದ್ದವು.
ಕರ್ನಾಟಕ ಕಾಲೇಜು ಬಳಿಯಿಂದ ಆರಂಭವಾದ ವಾಕ್‍ಥಾನ್ ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಶಿವಾಜಿ ವೃತ್ತ, ಅಂಬೇಡ್ಕರ್ ವೃತ್ತ, ಭಗತ್‍ಸಿಂಗ್ ವೃತ್ತದ ಮಾರ್ಗವಾಗಿ ಮರಳಿ ಕರ್ನಾಟಕ ಕಾಲೇಜು ತಲುಪಿ ಸಮಾರೋಪಗೊಂಡಿತು.
ಇದಕ್ಕೂ ಮುನ್ನ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಹಸಿರು ನಿಶಾನೆ ತೋರಿಸಿ ವಾಕ್‍ಥಾನ್‍ಗೆ ಚಾಲನೆ ನೀಡಿದರು. ಆಯೋಗದ ಸದಸ್ಯ ಶಶಿಧರ ಕೋಸಂಬೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮಪ್ಪ ಕನಕಟ್ಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರಭಾಕರ, ವಿದ್ಯಾನಿಕೇತನ ಸಂಸ್ಥೆಯ ನಿರ್ದೇಶಕ ಡಾ. ನಾಗರಾಜ ಎಂ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರಜಿಯಾ ಬಳಬಟ್ಟಿ, ಕರ್ನಾಟಕ ಕಾಲೇಜು ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಹಂಗರಗಿ, ಕರ್ನಾಟಕ ಬಾಲ್ಯ ವಿವಾಹ ವಿರೋಧಿ ವೇದಿಕೆಯ ಅಡ್ವೊಕೇಸಿ ಕೋ ಆರ್ಡಿನೇಟರ್ ವೆಂಕಟೇಶ ಟಿ., ಬೀದರ್ ಜಿಲ್ಲಾ ಸಂಚಾಲಕ ಕೆ.ಟಿ. ಮೆರಿಲ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗುರುರಾಜ, ಬೆಂಗಳೂರಿನ ರಾಘವೇಂದ್ರ, ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಪುನೀತ್ ಸಾಳೆ, ಅರಳು ಸಂಸ್ಥೆಯ ಸಹ ನಿರ್ದೇಶಕಿ ಸುನಿತಾ, ವೀರಯ್ಯ ಸ್ವಾಮಿ ಮೊದಲಾದವರು ಇದ್ದರು.
ಬಾಲ್ಯ ವಿವಾಹ ತಡೆದರೆ ಮನೆ ಉಳಿಸಿದಂತೆ:
ಬಾಲ್ಯ ವಿವಾಹ ತಡೆದರೆ ಒಂದು ಮನೆ ಉಳಿಸಿದಂತೆ. ನಡೆಯಲು ಬಿಟ್ಟರೆ ಹಾಳು ಮಾಡಿದಂತೆ ಎಂದು ಕರ್ನಾಟಕ ಕಾಲೇಜಿನಲ್ಲಿ ನಡೆದ ಬಾಲ್ಯ ವಿವಾಹ ನಿಷೇಧ ಕುರಿತ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಹೇಳಿದರು.
ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ. ಹೆಣ್ಣುಮಕ್ಕಳಿಗೆ 18 ವರ್ಷ ಹಾಗೂ ಗಂಡು ಮಕ್ಕಳಿಗೆ 21 ವರ್ಷ ತುಂಬಿದ ನಂತರವೇ ಮದುವೆ ಮಾಡಬೇಕು ಎಂದು ತಿಳಿಸಿದರು.
ಸರ್ಕಾರ, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಜತೆಗೂಡಿ ಶ್ರಮಿಸಿದ್ದಲ್ಲಿ ಮಾತ್ರ ಬಾಲ್ಯ ವಿವಾಹ ಪಿಡುಗು ನಿವಾರಣೆ ಸಾಧ್ಯವಿದೆ ಎಂದು ಆಯೋಗದ ಸದಸ್ಯ ಶಶಿಧರ ಕೋಸಂಬೆ ನುಡಿದರು.
ಬಾಲ್ಯ ವಿವಾಹ ಮುಕ್ತ ಸಮಾಜ ನಿರ್ಮಾಣ ಮಾಡುವುದು ಕರ್ನಾಟಕ ಬಾಲ್ಯ ವಿವಾಹ ವಿರೋಧಿ ವೇದಿಕೆಯ ಗುರಿಯಾಗಿದೆ ಎಂದು ವೇದಿಕೆಯ ಅಡ್ವೊಕೇಸಿ ಕೋ ಆರ್ಡಿನೇಟರ್ ವೆಂಕಟೇಶ ಹೇಳಿದರು.
ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ, ಬೆಂಗಳೂರಿನ ರಾಘವೇಂದ್ರ, ಕೆ.ಆರ್.ಇ. ಸಂಸ್ಥೆಯ ಕಾರ್ಯದರ್ಶಿ ಸಿದ್ರಾಮ ಪಾರಾ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರಜಿಯಾ ಬಳಬಟ್ಟಿ, ಪ್ರಾಚಾರ್ಯ ಮಲ್ಲಿಕಾರ್ಜುನ ಹಂಗರಗಿ, ಕರ್ನಾಟಕ ಬಾಲ್ಯ ವಿವಾಹ ವಿರೋಧಿ ವೇದಿಕೆಯ ಬೀದರ್ ಜಿಲ್ಲಾ ಸಂಚಾಲಕ ಕೆ.ಟಿ. ಮೆರಿಲ್ ಇದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ನಿರೂಪಿಸಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪದವಿಪೂರ್ವ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ, ವಿದ್ಯಾನಿಕೇತನ ಸಂಸ್ಥೆ, ಚೈಲ್ಡ್ ರೈಟ್ಸ್ ಟ್ರಸ್ಟ್ ಹಾಗೂ ಕರ್ನಾಟಕ ಬಾಲ್ಯ ವಿವಾಹ ವಿರೋಧಿ ವೇದಿಕೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Ghantepatrike kannada daily news Paper

Leave a Reply

error: Content is protected !!