ಫಸಲ್ ಬಿಮಾಗೆ ರಾಜ್ಯದಿಂದ ನಿರ್ಲಕ್ಷ್ಯ: ಭಗವಂತ ಖೂಬಾ
ನೂತನವಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ದಿ ಸಚಿವರಾದ ಶ್ರೀ ಶಿವರಾಜ ಸಿಂಗ್ ಚೌಹಾಣರವರಿಗೆ ಕೇಂದ್ರದ ಮಾಜಿ ಸಚಿವರಾದ ಭಗವಂತ ಖೂಬಾರವರು ಭೇಟಿಯಾಗಿ ಶುಭ ಕೊರಿ, ಬೀದರ ಕ್ಷೇತ್ರದ ರೈತರ ವಿಷಯಗಳ ಕುರಿತು ಚರ್ಚಿಸಿ, ಫಸಲ್ ಬಿಮಾ ಯೋಜನೆಗೆ ಇನ್ನಷ್ಟು ಪರಿಣಾಮಕಾರಿ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಯೋಜನೆ ಪ್ರಾರಂಭವಾದಾಗಿನಿಂದ ಬೀದರ ಜಿಲ್ಲೆ ನೊಂದಣಿ ಹಾಗೂ ಪರಿಹಾರ ಪಡೆದುಕೊಳ್ಳುವುದರಲ್ಲಿ ಉನ್ನತ ಸ್ಥಾನ ಪಡೆದುಕೊಂಡಿದೆ, ಪ್ರಧಾನಿಮಂತ್ರಿಗಳು ಖುದ್ದಾಗಿ ನಮ್ಮ ರೈತರನ್ನು ಶ್ಲಾಘಿಸಿದ್ದಾರೆ, ಇದರ ಹಿಂದೆ ನಾನು ಸಾಕಷ್ಟು ಶ್ರಮ ಹಾಕಿರುವೆ, ನನ್ನೊಂದಿಗೆ ಯಾವಾಗಲೂ ಡಿ.ಸಿ.ಸಿ, ಪಿ.ಕೆ.ಪಿ.ಎಸ್. ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಸಿ.ಎಸ್.ಸಿ. ಕೆಂದ್ರದವರ ಶ್ರಮವು ಇರುತ್ತಿತ್ತು. ಆದರೆ ಕಳೆದ ವರ್ಷದಿಂದ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಇರುವುದರಿಂದ ಈ ಯೊಜನೆಯ ಕುರಿತು ಕೇವಲ ಅಪಪ್ರಚಾರ ನಡೆಯುತ್ತಿದೆ. ಯೋಜನೆಯ ಲಾಭ ರೈತರಿಗೆ ಸರಿಯಾಗಿ ಸಿಗದಂತೆ ಮಾಡುವ ಹುನ್ನಾರ ನಡೆಯುತ್ತಿದೆ ಹಾಗೂ ರೈತರು ಫಸಲ್ ಬಿಮಾದಿಂದ ದೂರ ಉಳಿಯುವ ಹಾಗೆ ಮಾಡಲಾಗುತ್ತಿದೆ ಎಂದು ಶಿವರಾಜ ಸಿಂಗ್ ಚೌಹಾಣರವರಿಗೆ ತಿಳಿಸಿದ್ದಾರೆ.
ಈ ಸಲ ರಾಜ್ಯದಲ್ಲಿ ಬರಗಾಲವಿತ್ತು, ರೈತರು ಸಾಕಷ್ಟು ಪ್ರಮಾಣದಲ್ಲಿ ನೊಂದಣಿ ಮಾಡಿಸಿಕೊಂಡಿದ್ದರು, ಆದರೆ ರಾಜ್ಯ ಸರ್ಕಾರವು ಅಧಿಕಾರಿಗಳಿಂದ ಸರಿಯಾಗಿ ಬೆಳೆ ಸಮೀಕ್ಷೆ ಮಾಡಿಸಿರುವುದಿಲ್ಲಾ, ಸರಿಯಾಗಿ ರೈತರಿಗೆ ಸ್ಪಂದಿಸಿರುವುದಿಲ್ಲಾ, ಅಧಿಕಾರಿಗಳ ಮೇಲೆ ಸರ್ಕಾರ ಒತ್ತಡ ಹಾಕಿ ನಿರ್ಲಕ್ಷ್ಯ ಮಾಡುವಂತೆ ಕುಮ್ಮಕ್ಕು ನೀಡಿದೆ, ಸರ್ಕಾರ ಕೇವಲ ವಿಮಾ ಕಂಪನಿಯ ವಿರುದ್ದ ಮಾತನಾಡುವುದು, ಆರೋಪ ಹೊರೆಸುವುದು ಮಾಡಿದೆ, ಇದರಿಂದ ನಮ್ಮ ರೈತರಿಗೆ ಸರಿಯಾಗಿ ಬೆಳೆ ವಿಮೆ ಬಂದಿರುವುದಿಲ್ಲಾ ಎಂದು ಖೂಬಾ ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದಾರೆ.
ವಿಮೆ ಕಂಪನಿಯವರಿಂದ ಸರಿಯಾಗಿ ಕೆಲಸ ತೆಗೆದುಕೊಳ್ಳುವುದು ರಾಜ್ಯ ಸರ್ಕಾರದ ಜವಬ್ದಾರಿಯಾಗಿದೆ, ವಿಮೆ ಕಂಪನಿಯವರಿಂದ ತಪ್ಪಾಗುತ್ತಿದ್ದರೆ ಅವರ ವಿರುದ್ಧ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳುಹಿಸಬಹುದಾಗಿದೆ, ಆದರೆ ರಾಜ್ಯ ಸರ್ಕಾರ ಇದ್ಯಾವುದು ಮಾಡದೆ, ತನ್ನ ಅಧಿಕಾರಿಗಳಿಗೂ ಸರಿಯಾಗಿ ಸೂಚನೆ ನೀಡದೆ, ಉತ್ತಮ ಪರಿಹಾರ ಬರುವುದನ್ನು ನಿಲ್ಲಿಸುವ ಪ್ರಯತ್ನ ಮಾಡುತ್ತಿದೆ, ಆದ್ದರಿಂದ ತಾವುಗಳು ಈ ಕುರಿತು ಅಗತ್ಯ ಕ್ರಮ ತೆಗೆದುಕೊಳ್ಳಬೇಕು, ದೇಶದ ಹಾಗೂ ನಮ್ಮ ರಾಜ್ಯದ ಎಲ್ಲಾ ರೈತರಿಗೆ ಫಸಲ್ ಬಿಮಾ ಯೋಜನೆಯ ಲಾಭವನ್ನು ಹೆಚ್ಚಿನ ಮಟ್ಟದಲ್ಲಿ ಸಿಗುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಈ ವಿಷಯಗಳನ್ನು ತಿಳಿದುಕೊಂಡ ಕೇಂದ್ರ ಕೃಷಿ ಸಚಿವರು ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇನೆ ಮತ್ತು ಎಲ್ಲಾ ರಾಜ್ಯ ಸರ್ಕಾರಗಳೊಂದಿಗೆ ಈ ಯೋಜನೆಯ ಕುರಿತು ವಿಶೇಷವಾಗಿ ಚರ್ಚಿಸಿ, ಅವರಿಂದ ಅಗತ್ಯ ಸಹಕಾರ ಪಡೆದುಕೊಂಡು ರೈತರಿಗೆ ಈ ಯೋಜನೆಯ ಹೆಚ್ಚಿನ ಲಾಭ ಸಿಗುವ ಹಾಗೆ ಮಾಡುತ್ತೇನೆಂದು ಕೇಂದ್ರ ಕೃಷಿ ಸಚಿವರಾದ ಶಿವರಾಜ ಸಿಂಗ್ ಚೌಹಾಣ ಭರವಸೆಯನ್ನು ನೀಡಿದ್ದಾರೆ.