ಬೀದರ್

ಪ್ರೌಢಶಾಲಾ ಸಹ ಶಿಕ್ಷಕರ ಸಂಘದಿಂದ ಮನವಿ ಪತ್ರ ಉಪನ್ಯಾಸಕ ಹುದ್ದೆಗೆ ಬಡ್ತಿ: ಆಗ್ರಹ

ಬೀದರ್: ಅರ್ಹ ಪ್ರೌಢಶಾಲಾ ಸಹ ಶಿಕ್ಷಕರಿಗೆ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕ ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯೆ ಕೂಡಲೇ ಆರಂಭಿಸಬೇಕು ಎಂದು ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಆಗ್ರಹಿಸಿದೆ.
ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಹುಮನಾಬಾದ್‍ನಲ್ಲಿ ಸೋಮವಾರ ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ ಅವರನ್ನು ನಿಯೋಗದಲ್ಲಿ ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ಉಪನ್ಯಾಸಕ ಹುದ್ದೆ ಬಡ್ತಿ ಪ್ರಕ್ರಿಯೆ 15 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಈ ಸಂಬಂಧ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಮನವಿ ಮಾಡಿದರು.
ಸಹ ಶಿಕ್ಷಕರಿಗೆ ಮುಖ್ಯಶಿಕ್ಷಕ ಹುದ್ದೆಗೆ ಬಡ್ತಿ ಕೊಡಬೇಕು. ಅನುದಾನಿತ ಶಾಲೆ ಹಾಗೂ ಸರ್ವ ಶಿಕ್ಷಣ ಅಭಿಯಾನದ ಅಡಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಪ್ರತಿ ತಿಂಗಳ ಒಂದನೇ ತಾರಿಖಿಗೆ ವೇತನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಪದವಿಪೂರ್ವ ಕಾಲೇಜುಗಳಿಂದ ಪ್ರೌಢಶಾಲಾ ವಿಭಾಗ ಪ್ರತ್ಯೇಕವಾಗಿರುವ ಕಾರಣ ಪ್ರೌಢಶಾಲೆಗಳಿಗೆ ಮುಖ್ಯಶಿಕ್ಷಕ ಹುದ್ದೆ ಮಂಜೂರು ಮಾಡಬೇಕು. ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ ಸಂವಿಧಾನದ ಕಲಂ 371(ಜೆ) ತಿದ್ದುಪಡಿ ಕಾಯ್ದೆಯ ಪೂರ್ಣ ಪ್ರಮಾಣದ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಶಿಕ್ಷಕರ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಬೇಕು ಎಂದು ಬೇಡಿಕೆ ಮಂಡಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್ ನಿಯೋಗದ ಮುಂದಾಳತ್ವ ವಹಿಸಿದ್ದರು. ಉಪಾಧ್ಯಕ್ಷರಾದ ಸೂರ್ಯಕಾಂತ ಸಿಂಗೆ, ರವಿಕುಮಾರ ಕುಮನೂರ, ಪ್ರಧಾನ ಕಾರ್ಯದರ್ಶಿ ವೀರಭದ್ರಪ್ಪ ಚಟ್ನಾಳೆ, ಸಂಘಟನಾ ಕಾರ್ಯದರ್ಶಿ ವೈಜಿನಾಥ ಸಾಳೆ, ಬಲವಂತರಾವ್ ರಾಠೋಡ್, ಅನಿಲಕುಮಾರ ಶೇರಿಕಾರ್, ಇಂದ್ರಕಾಂತ ದೊಡ್ಡಿ, ಶಿವಶರಣಪ್ಪ ಹುಗ್ಗಿ ಪಾಟೀಲ, ಸಂಜೀವಕುಮಾರ ನಾಡುಕರ್, ಮಹಮ್ಮದ್ ನಿಜಾಮುದ್ದಿನ್, ಮಲ್ಲಿಕಾರ್ಜುನ ಪ್ರತಾಪುರ, ಶಿವಕುಮಾರ, ದಿಲೀಪ್ ಮಾಲೆ, ಸುನೀಲಕುಮಾರ ಸಿಡ್ಲೆ, ದತ್ತಾತ್ರಿ ಇದ್ದರು.

Ghantepatrike kannada daily news Paper

Leave a Reply

error: Content is protected !!