ಪ್ರಾಥಮಿಕ ಶಾಲೆಗಳಲ್ಲಿ ಕಡ್ಡಾಯವಾಗಿ ಸಂವಿಧಾನದ ಪೀಠಿಕೆ ಓದುವ ಕಾರ್ಯಕ್ರಮ ಜಾರಿಗೊಳಿಸಲಾಗಿದೆ :ಸಚಿವ ಈಶ್ವರ ಖಂಡ್ರೆ
ಬೀದರ್:ಏ.15: ಪ್ರಾಥಮಿಕ ಹಂತದಲ್ಲಿಯೆ ಅಂಬೇಡ್ಕರ್ ಅವರು ಬರೆದ ಭಾರತದ ಸಂವಿಧಾನದ ಆಶಯ ತಿಳಿಸಲು ರಾಜ್ಯದ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಕಡ್ಡಾಯವಾಗಿ ಸಂವಿಧಾನದ ಪೀಠಿಕೆ ಓದುವ ಕಾರ್ಯಕ್ರಮ ಜಾರಿಗೊಳಿಸಲಾಗಿದೆ ಎಂದು ರಾಜ್ಯದ ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಸೋಮವಾರ ರಾತ್ರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲೆಯ ಎಲ್ಲ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೆಬ್ ಅಂಬೇಡ್ಕರ್ ಅವರ 134ನೇ ಜಯಂತ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಅರಾಜಕತೆ, ಅಸ್ಪ್ರಶ್ಯತೆ, ದೌರ್ಜನ್ಯ, ದಬ್ಬಾಳಿಕೆ ತಾಂಡವಾಡುತ್ತಿರುವಾಗ ಅಂಬೇಡ್ಕರ್ ಅವರು ಈ ಧರೆಗೆ ಅವತರಿಸಿದರು. ಬಾಲ್ಯದಲ್ಲಿ ಅವರು ಅನುಭವಿಸಿದ ಶೋಷಣೆ ಹಾಗೂ ಅಸ್ಪ್ರಶ್ಯದ ಕ್ಷಣಗಳು ಈ ದೇಶಕ್ಕೆ ಮರುಕಳಿಸಬಾರದೆಂದು ಶ್ರೇಷ್ಠ ಸಂವಿಧಾನ ಪರಿಚಯಿಸಿದರು. ಅವರು ಹೇಳುವ ಪ್ರಕಾರ ಯಾವ ದೇಶದಲ್ಲಿ ಅಸ್ಪ್ರಶ್ಯತೆ ಗಗನ ಚುಂಬಿಸುತ್ತದೆಯೋ ಆ ದೇಶ ಸಂಪೂರ್ಣ ಸರ್ವನಶವಾಗುತ್ತದೆ. ಅಸ್ಪ್ರಶ್ಯತೆಗೆ ಇಂಬು ನೀಡುವ ಧರ್ಮವು ಅದು ಧರ್ಮವೇ ಅಲ್ಲ ಎಂದು ಪ್ರತಿಪಾದಿಸಿದ್ದರು. ದೇಶದಲ್ಲಿ ದುಡಿಮೆಗೆ ಹಾಗೂ ಶ್ರಮವಂತಿಕೆಗೆ ಉತ್ತೇಜನ ನೀಡಿದರೆ ಆ ದೇಶ ಆರ್ಥಿಕವಾಗಿ ಬಲಿಷ್ಟವಾಗಬಲ್ಲದು. ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು ಇದ್ದರೆ ಸಾಮಾಜಿಕ ನ್ಯಾಯ ಸಾಧ್ಯವಿದೆ. ಎಲ್ಲ ವರ್ಗದವರಿಗೆ ಸಂವಿಧಾನದಲ್ಲಿ ರಾಜಕೀಯ ಪ್ರಾತಿನಿಧ್ಯ ನೀಡುವ ಮೂಲಕ ಪ್ರಜಾಪ್ರಭುತ್ವ ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗಿದೆ. ಸಂವಿಧನದ ಆಶಯದಂತೆ ನಮ್ಮ ಸರ್ಕಾರ ಒಂದೆಡೆ ಗ್ಯಾರಂಟಿಗಳಿಗೆ ಹಣ ನೀಡಿ, ಮತ್ತೊಂದೆಡೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಈಗಾಗಲೇ ಕೆ.ಕೆ.ಆರ್.ಡಿ.ಬಿ ಮಂಡಳಿಯಿಂದ 550 ಕೋಟಿ ಹಣದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಒಟ್ಟಾರೆ ರಾಜ್ಯ ಬೊಕ್ಕಸದಿಂದ ಸುಮಾರು 2025 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಕೆಲವು ಈಗಾಗಲೇ ಮುಗಿದಿವೆ. ನಾಳೆ ಸಿಎಂ ಹಾಗೂ ಸಂಬಂಧಪಟ್ಟ ಸಚಿವರು ಅವನ್ನು ಶಂಕುಸ್ತಾಪನೆ ಜೊತೆಗೆ ಉದ್ಘಾಟಿಸಲಿದ್ದಾರೆ ಎಂದರು.
ರಾಜ್ಯದ ಪೌರಾಡಳಿತ ಸಚಿವ ರಹಿಮ್ ಖಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶ ಸ್ವತಂತ್ರವಾದಾಗ 150ನೇ ಸ್ಥಾನದಲ್ಲಿದ್ದ ಭಾರತ ಇಂದು ಅಭಿವೃದ್ಧಿಯಲ್ಲಿ 6ನೇ ಸ್ಥಾನದಲ್ಲಿದೆ. ಇಂದು ಓರ್ವ ಸಾಮಾನ್ಯ ಪ್ರಜೆ ಮುಖ್ಯಮಂತ್ರಿ, ಮಂತ್ರಿಯಾಗಲು ಹಾಗೂ ಹಿರಿಯ ಅಧಿಕಾರಿಗಳಾಗಲು ಭಾರತೀಯ ಸಂವಿಧಾನವೇ ಕಾರಣ. ನಾವು ಯಾವುದೇ ಧರ್ಮಿಯಾಗಿದ್ದರೂ ನಮ್ಮ ಧರ್ಮ ಗ್ರಂಥ ಮೊದಲು ಸಂವಿಧಾನ ಎಂಬುದು ಯಾರು ಮರೆಯಬಾರದು ಎಂದರು.
ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ನರೇಂದ್ರ ಮೋದಿಜಿಯವರು ಈ ದೇಶದ ಚುಕ್ಕಾಣಿ ಹಿಡಿದ ಬಳಿಕ ಅಂಬೇಡ್ಕರ್ ಅವರ ಮನೆ, ಸಮಾಧಿ ಸ್ಥಳಿ, ಜನ್ಮಭೂಮಿ ಸೇರಿದ ಅವರ ಐದು ಸ್ಥಳಗಳನ್ನು ಪಂಚತೀರ್ಥಗಳೆಂದು ಅಭಿವೃದ್ಧಿಪಡಿಸಲಾಗಿದೆ. ಲಂಡನ್‍ನಲ್ಲಿರುವ ಅವರ ಮನೆಯನ್ನು ವಿಶ್ವದ ದೊಡ್ಡ ಮ್ಯುಜಿಯಮ್‍ವನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಮಹಾರಾಷ್ಟ್ರ ಸರ್ಕಾರ ಅಲ್ಲಿನ ಈ ಮ್ಯುಜಿಯಮ್‍ಗೆ ತೆರಳಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುತ್ತಿರುವುದು ಪ್ರಶಂಸನಿಯ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಮುಂಡರಗಿ ಹಾಗೂ ನಿಷ್ಕಲ ಮಂಟಪ ಬೈಲೂರಿನ ತೊಂಟದಾರ್ಯ ಮಠದ ಪೂಜ್ಯ ನಿಜಗುಣ ಪ್ರಭು ತೊಂಟದಾರ್ಯ ಸ್ವಾಮಿಜಿ ಮಾತನಾಡಿ, ಸರ್ಕಾರ ಎಲ್ಲ ಉತ್ಸವಗಳನ್ನು ಆಚರಿಸಿದಂತೆ ಗಣರಾಜ್ಯೋತ್ಸವ ದಿನದಂದು ಸಂವಿಧಾನ ಉತ್ಸವ ಕಾರ್ಯಕ್ರಮ ಆಚರಿಸಬೇಕು, ಅದಕ್ಕೆ ವಿಶೇಷ ಧನಸಹಾಯ ನೀಡಬೇಕು. ದಲಿತರು ಮುಢನಂಬಿಕೆ, ಅಂದಶೃದ್ಧೆ, ದುರಾಚಾರಗಳನ್ನು ಧಿಕ್ಕರಿಸಿ ಸಿಡಿದೆದ್ದು ಚೆನ್ನಾಗಿ ದುಡಿಯುವಂತವರಾಗಬೇಕೆಂದು ಕರೆ ನೀಡಿದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಸಂವಿಧಾನ ಘೋಷ ವಾಕ್ಯವುಳ್ಳ ಪ್ರಮಾಣವಾಚನ ಬೋಧಿಸಿದರು. ಅಣದೂರಿನ ವೈಶಾಲಿನಗರದ ಪೂಜ್ಯ ಭಂತೆ ಜ್ಞಾನಸಾಗರ ಥೇರೊ ಬೌದ್ದ ಧರ್ಮ ಮಂತ್ರ ಪಠಿಸಿದರು. ಶಾಹಿನ್ ಶಿಕ್ಷಣ ಸಮುಹ ಸಂಸ್ಥೆ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಅವರನ್ನು ಸನ್ಮಾನಿಸಲಾಯಿತು.
ನಗರ ಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ ಬದೌಲೆ, ಎಸ್.ಪಿ ಪ್ರದಿಪ ಗುಂಟಿ ವೇದಿಕೆಯಲ್ಲಿದ್ದರು. ಮಾಜಿ ಎಂಪಿ ನರಸಿಂಗರಾವ ಸೂರ್ಯವಂಶಿ, ದಲಿತ ಮುಖಂಡರಾದ ಅನಿಲಕುಮಾರ ಬೆಲ್ದಾರ್, ಮಾರೂತಿ ಬೌದ್ದೆ, ಬಾಬು ಪಾಸ್ವಾನ್, ಅಂಬಾದಾಸ ಗಾಯಕವಾಡ ಸೇರಿದಂತೆ ಸಹಸ್ರಾರು ದಲಿತ ಸಮುದಾಯದವರು, ಅಂಬೇಡ್ಕರ್ ಅನುಯಾಯಿಗಳು, ದಲಿತ ಸಂಘಟನೆಗಳ ಮುಖ್ಯಸ್ಥರು ಕಾರ್ಯಕ್ರಮದಲ್ಲಿದ್ದರು.