ಬೀದರ್

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಲಿ : ಚಂದ್ರಕಾಂತ ರೆಡ್ಡಿ

ಬೀದರ್: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ನಗರ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕ, ಪ್ರಭಾರ ಬುಡಾ ಆಯುಕ್ತ ಚಂದ್ರಕಾಂತ ರೆಡ್ಡಿ ಹೇಳಿದರು.
ನಗರದ ಚಿಕ್ಕಪೇಟೆ ಹೈದರಾಬಾದ್ ರಿಂಗ್ ರಸ್ತೆಯಲ್ಲಿನ ನಿಸರ್ಗ ಟೌನ್‍ಶಿಪ್‍ನಲ್ಲಿರುವ ಎಡಿಫೈ ಶಾಲೆಯಲ್ಲಿ  ನಡೆದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆಚ್ಚುತ್ತಿರುವ ಪರಿಸರ ಮಾಲಿನ್ಯವು ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಭೂ ತಾಪಮಾನ ಹೆಚ್ಚುತ್ತಿದೆ. ಹವಾಮಾನ ವೈಪರೀತ್ಯವು ಎಲ್ಲ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತಿದೆ ಎಂದು ಹೇಳಿದರು.
ಪ್ರತಿಯೊಬ್ಬರೂ ಲಭ್ಯವಿರುವ ಸ್ಥಳದಲ್ಲಿ ಸಸಿ ನೆಟ್ಟು ಸಂರಕ್ಷಿಸಬೇಕು. ಗಿಡಮರಗಳನ್ನು ಅಧಿಕ ಪ್ರಮಾಣದಲ್ಲಿ ಬೆಳೆಸುವ ಮೂಲಕ ಪರಿಸರ ಸಮತೋಲನ ಕಾಪಾಡಬೇಕು. ಕನಿಷ್ಠ ಮನೆಗೊಂದು ಮರ ನೆಟ್ಟು ಬೆಳೆಸಬೇಕು ಎಂದು ಸಲಹೆ ನೀಡಿದರು.
ಎಡಿಫೈ ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯುತ್ತಿರುವುದು ಮಾದರಿಯಾಗಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಪರಿಸರ ಪ್ರೀತಿ ಬೆಳೆಸುತ್ತವೆ. ಪರಿಸರ ರಕ್ಷಣೆಯ ಮಹತ್ವವನ್ನು ಮನದಟ್ಟು ಮಾಡಿಕೊಡುತ್ತವೆ ಎಂದರು.
ಜಲಮಂಡಳಿ ಎಇಇ ರವೀಂದ್ರ ಜಿ. ಅವರು ಮಾತನಾಡಿ, ಪರಿಸರ ಸಂರಕ್ಷಣೆಯು ಆದ್ಯತೆಯ ಕಾರ್ಯವಾಗಬೇಕು ಎಂದು ತಿಳಿಸಿದರು.
ನೆಟ್ಟ ಸಸಿಗಳನ್ನು ಸಂರಕ್ಷಿಸಬೇಕು. ಕಾಳಜಿಯಿಂದ ಬೆಳೆಸಬೇಕು. ಗಿಡಮರಗಳನ್ನು ಹೆಚ್ಚು ಹೆಚ್ಚಾಗಿ ನೆಡುವ ಮೂಲಕ ಹಸಿರು ಹೆಚ್ಚಿಸಬೇಕು. ಹಸಿರು ಹೆಚ್ಚಿದಾಗಲೇ ಕಾಲಕಾಲಕ್ಕೆ ಮಳೆಯಾಗಬಲ್ಲದು ಎಂದು ಹೇಳಿದರು.
ಪರಿಸರ ಸಂರಕ್ಷಣೆಗೆ ಗಿಡಮರಗಳನ್ನು ನೆಡುವ, ಸಂರಕ್ಷಿಸುವ ಕಾರ್ಯ ಆಂದೋಲನದ ರೂಪದಲ್ಲಿ ನಡೆಯಬೇಕು. ಎಲ್ಲರೂ ಇದರಲ್ಲಿ ಭಾಗಿಯಾಗಬೇಕು. ಸಸಿ ನೆಡುವ, ಸಂರಕ್ಷಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ತಿಳಿಸಿದರು.
ಎಡಿಫೈ ಶಾಲೆಯ ಪ್ರಾಚಾರ್ಯ ರಮ್ಯ ಆರ್.ಎಲ್ ಅವರು ಮಾತನಾಡಿ, ವಾತಾವರಣವನ್ನು ಶುದ್ಧಗೊಳಿಸುವ ಮಹತ್ವದ ಕಾರ್ಯವನ್ನು ಗಿಡಮರಗಳು ಮಾಡುತ್ತವೆ. ಆಮ್ಲಜನಕ ನೀಡುವ ಮೂಲಕ  ಸಮಸ್ತ ಜೀವಿಗಳ ಉಳಿವಿಗೆ ನೆರವಾಗುತ್ತಿವೆ ಎಂದು ಹೇಳಿದರು.
ಮಕ್ಕಳಲ್ಲಿ ಪರಿಸರ ಪ್ರೀತಿ ಹೆಚ್ಚಿಸುವ ಅಗತ್ಯವಿದೆ. ದೇಶದ ಭವಿಷ್ಯವಾಗಿರುವ ಮಕ್ಕಳಿಗೆ ಪರಿಸರ ಮಹತ್ವ ತಿಳಿಸಿಕೊಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.
ಕಾಡು ಹೆಚ್ಚಿಸಿದರಷ್ಟೇ ಉತ್ತಮ ಮಳೆಯಾಗಬಲ್ಲದು. ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಲೂ ಕಾಡು ನೆರವಾಗುತ್ತದೆ. ಮಣ್ಣಿನ ಸಂರಕ್ಷಣೆಯೂ ಆಗುತ್ತದೆ ಎಂದು ತಿಳಿಸಿದರು.
ನಿಸರ್ಗ ಟೌನ್‍ಶಿಪ್‍ನ ಬೀದರ್ ಶಾಖೆಯ ಮುಖ್ಯಸ್ಥ ಮಹ್ಮದ್ ಸಮಿ ಅವರು ಪರಿಸರ ಮಹತ್ವ ಕುರಿತು ಮಾತನಾಡಿದರು. ಪರಿಸರ ಉಳಿದರಷ್ಟೇ ಮನುಷ್ಯ ಉಳಿಯಬಲ್ಲ ಎಂದರು.
ನಿಸರ್ಗ ಸಂಸ್ಥೆಯ ಸಿಬ್ಬಂದಿ, ಎಡಿಫೈ ಶಾಲೆಯ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಾಲೆಯ ಆವರಣದಲ್ಲಿ ಸಸಿ ನೆಡಲಾಯಿತು.

Ghantepatrike kannada daily news Paper

Leave a Reply

error: Content is protected !!