ಬೀದರ್

ದೇಶ ಮೊದಲು ಎನ್ನುವ ಭಾವ ಮೂಡಿದಾಗ ಭಾರತ ವೃದ್ಧಿ – ಹೆಬ್ಬಾಳೆ

ಬೀದರ: ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಮತ್ತು ಅತಿಹೆಚ್ಚು ಯವಕರನ್ನು ಹೊಂದಿರುವ ದೇಶ ಭಾರತ. ಶ್ರೀಮಂತ ಸಂಸ್ಕøತಿ, ಸಂಸ್ಕಾರ ಮತ್ತು ಸಂಪನ್ಮೂಲ ಹೊಂದಿರುವ ಭಾರತ ದೇಶದಲ್ಲಿ ಯುವಕರು ತಮ್ಮ ಸಾಧನೆಯ ಜೊತೆಗೆ ದೇಶಸೇವೆಗಾಗಿ ಮುಂದೆ ಬರಬೇಕಾಗಿದೆ ಎಂದು ಸಿದ್ಧಾರ್ಥ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ. ಗೋಪಾಲ ಬಡಿಗೇರ ತಿಳಿಸಿದರು.
ದಕ್ಷಿಣ ಮಧ್ಯವಲಯ ಸಾಂಸ್ಕøತಿಕ ಕೇಂದ್ರ ನಾಗಪೂರ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ ಬೀದರ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಆಯೋಜಿಸಿದ ನಮ್ಮ ಮಣ್ಣು ನಮ್ಮ ದೇಶ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರಭಕ್ತಿ ಎಂಬುದು ನಮ್ಮ ನರನಾಡಿಗಳಲ್ಲಿ ಮಾರ್ದನಿಸಬೇಕು. ರಕ್ತದ ಕಣಕಣದಲ್ಲಿ ಭಾರತಾಂಬೆಯ ಸೇವೆಗಾಗಿ ದುಡಿಯುವ ಹುಮ್ಮಸ್ಸು ನಮ್ಮಲ್ಲಿರಬೇಕು. ರಾಷ್ಟ್ರದ ಐಕ್ಯತೆ, ಸೌಹಾರ್ದತೆಗೆ ಧಕ್ಕೆ ತರುವ ತಪ್ಪಿತಸ್ಥರಿಗೆ ಸ್ವಜನ ಪಕ್ಷಪಾತ ಮರೆತು ಶಿಕ್ಷೆ ಕೊಡಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ದೇಶದ ಉಳಿವಿಗಾಗಿ ಗಡಿಯಲ್ಲಿ ಬಲಿದಾನಗೈದ ವೀರಯೋಧರನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ ರಾಜ್ಯ ನಮ್ಮದು. ಅತಿ ಹೆಚ್ಚು ಯುವಕರನ್ನು ಹೊಂದಿರುವ ನಮ್ಮ ದೇಶದಲ್ಲಿ ಯುವಪೀಳಿಗೆ ಆಧುನಿಕತೆ, ತಾಂತ್ರಿಕತೆ ಮತ್ತು ಜಾಗತಿಕರಣದ ಪ್ರಭಾವಕ್ಕೆ ಒಳಗಾಗಿ ದೇಶಭಕ್ತಿ ಮರೆಯುತ್ತಿದೆ. ಅವುಗಳ ಜೊತೆಗೆ ಯುವಕರು ರಾಷ್ಟ್ರಭಕ್ತಿ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಅಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ ಮಾತನಾಡಿ ದೇಶಕ್ಕಾಗಿ ಬಲಿದಾನಗೈದ ವೀರಯೋಧರ ಸ್ಮರಣೆಗಾಗಿ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ಆಯೋಜನೆ ಮಾಡುತಿದ್ದು, ಇದೊಂದು ವಿಭಿನ್ನ ಮತ್ತು ವಿನೂತನ ಕಾರ್ಯಕ್ರಮವಾಗಿದೆ. ನಮಗಾಗಿ ದೇಶ ಏನು ಮಾಡಿದೆ ಎನ್ನುವುದಕ್ಕಿಂತ, ದೇಶಕ್ಕಾಗಿ ನಾವೇನು ಮಾಡುತ್ತಿದ್ದೇವೆ ಎನ್ನುವ ಭಾವ ಯುವಕರಲ್ಲಿ ಬರಬೇಕು. ದೇಶ ಮೊದಲು ಎನ್ನುವ ವಿಚಾರ ಯುವಕರಲ್ಲಿ ಮೂಡಿದಾಗ ಮಾತ್ರ ಭಾರತ ವಿಶ್ವದಲ್ಲಿ ಬೆಳಗಲು ಸಾಧ್ಯ. ಸರ್ವಧರ್ಮಗಳ ಸಮನ್ವಯತೆ ಸಾಧಿಸುವ ದೇಶ ನಮ್ಮದು. ರಜಾಕಾರರ ಸಂದರ್ಭದಲ್ಲಿ ನಮ್ಮ ಜಿಲ್ಲೆಯಲ್ಲಿಯೂ ವೀರಭದ್ರಪ್ಪ ಬಿಡಪ್, ಪ್ರಭುರಾವ ಕಂಬಳಿವಾಲೆ, ಚನ್ನಬಸವ ಪಟ್ಟದ್ದೇವರು, ಶಿವಲಿಂಗಪ್ಪ ಖಂಡ್ರೆ, ಭೀಮಣ್ಣ ಖಂಡ್ರೆ, ಬಸವರಾಜ ಹುಡಗಿ ಸೇರಿದಂತೆ ಹಲವರು ಸ್ವಾತಂತ್ರ್ಯ ಸೇನಾನಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಅವರೆಲ್ಲರಿಗೂ ನಮನಗಳನ್ನು ಸಲ್ಲಿಸಿ, ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಕರ್ನಾಟಕ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ವಿನೋದಕುಮಾರ ಮೂಲಗೆ ಮಾತನಾಡಿದರು. ಕೊನೆಯಲ್ಲಿ ದೇಶಭಕ್ತಿ ಕುರಿತಾದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಎಸ್.ಬಿ.ಕುಚಬಾಳ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪ್ರಕಾಶ ಕುಚಬಾಳ ದೇಶಭಕ್ತಿಗೀತೆಯನ್ನು ನೆರವೇರಿಸಿದರು. ಕಾರ್ಯಕ್ರಮದ ಸಂಚಾಲಕ ಡಾ. ರಾಜಕುಮಾರ ಹೆಬ್ಬಾಳೆ ನಿರೂಪಿಸಿದರು. ಶಿವಶರಣಪ್ಪ ಗಣೇಶಪುರ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ಸುನಿತಾ ಕೂಡ್ಲಿಕರ್, ಡಾ. ಸಾವಿತ್ರಿಬಾಯಿ ಹೆಬ್ಬಾಳೆ, ಪವನ ನಾಟೇಕಾರ್, ಮಾನಾ ಸಂಗೀತಾ, ಮಹಾರುದ್ರ ಡಾಕುಳಗೆ ಸೇರಿದಂತೆ ಜಾನಪದ ವಿ.ವಿ.ಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!