ಬೀದರ್

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಲ್ಲಾ ಕ್ಷೇತ್ರಗಳಲ್ಲಿ ಮಹಾಜ್ಞಾನಿಯಾಗಿದ್ದರು – ಸಚಿವ ಈಶ್ವರ ಖಂಡ್ರೆ

ಬೀದರ  ಏಪ್ರಿಲ್ 14. ಇಡೀ ದೇಶ ಮಾತ್ರವಲ್ಲದೇ, ಜಗತ್ತಿಗೆ ಮಾದರಿ ವ್ಯಕ್ತಿತ್ವವನ್ನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೊಂದಿದ್ದರು ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಮಹಾಜ್ಞಾನಿಯಾಗಿದ್ದರು ಎಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಹೇಳಿದರು. ಇವರು ಸೋಮವಾರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತ್ಯುತ್ಸವ ನಿಮಿತ್ಯ ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಮಾತನಾಡಿದರು. 134 ವರ್ಷಗಳ ಹಿಂದೆ ಇದ್ದಂತಹ ಅಸಮಾನತೆ, ಅಸ್ಪೃಶ್ಯತೆ, ಗುಲಾಮಗಿರಿ, ಅನ್ಯಾಯ, ದೌರ್ಜನ್ಯ ಮತ್ತು ಅನೇಕ ರೀತಿಯಲ್ಲಿ ಶೋಷಣೆಗಳು ನಡೆಯುತ್ತಿದ್ದವು, ಇವುಗಳೆಲ್ಲವನ್ನೂ ಖಂಡಿಸಿ, ಒಂದು ಸಮ ಸಮಾಜದ ನಿರ್ಮಾಣ ಮಾಡಲು ಹೊರಟು, ದೀನ ದಲಿತರ ಧ್ವನಿಯಾಗಿ, ಶೋಷಿತರ ಧ್ವನಿಯಾಗಿ, ಕಾರ್ಮಿಕರ ಧ್ವನಿಯಾಗಿ, ಮಹಿಳೆಯರ ಧ್ವನಿಯಾಗಿ ಹೋರಾಟ ಮಾಡಿದರು. ‘ ಶಿಕ್ಷಣ, ಸಂಘಟನೆ ಮತ್ತು ಸಂಘರ್ಷ ‘ ಹೋರಾಟ ಮೂಲಕ ಎಲ್ಲರೂ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬಹುದು. ಇವರು ಇಡೀ ಜಗತ್ತಿಗೆ ಮಾದರಿಯಾಗುವಂತಹ ಸಂವಿಧಾನವನ್ನು ನಮಗೆ ನೀಡಿದ್ದಾರೆ. ನಮ್ಮ ಸಂವಿಧಾನದ ಆಶಯಗಳ ಮೂಲಕ ಒಂದು ಸದೃಢ ದೇಶದ ನಿರ್ಮಾಣ ಮತ್ತು ಅಭಿವೃದ್ಧಿಗೆ ಸಹಾಯಕವಾಗಿದೆ ಎಂದರು

ಹಿಂದುಳಿದ ವರ್ಗಗಳು, ದೀನ ದಲಿತರಿಗೆ ವಿಶೇಷ ಸವಲತ್ತುಗಳನ್ನು ನೀಡುವ ಮತ್ತು ಶೈಕ್ಷಣಿಕ ಕ್ರಾಂತಿಯ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ಅಡಿಪಾಯ ಹಾಕಿದವರು ಬಾಬಾ ಸಾಹೇಬ್ ಅಂಬೇಡ್ಕರ್ . ಸಮಾನ ನಾಗರಿಕ ಹಕ್ಕುಗಳು ಮತ್ತು ಕಾನೂನಾತ್ಮಕ ಹೋರಾಟ ಮಾಡಲು ಎಲ್ಲಾ ದುರ್ಬಲ ವರ್ಗದವರಿಗೆ ಅವಕಾಶ ಕಲ್ಪಿಸಿದರು. ಇವರು ಕೇವಲ ದಲಿತ, ಹಿಂದುಳಿದ ವರ್ಗಗಳ ನಾಯಕರು ಮಾತ್ರವಲ್ಲ, ಇವರು ಭವ್ಯ ಭಾರತದ ಪ್ರಜೆಗಳ ನಾಯಕ. ತನ್ನ ಇಡೀ ಜೀವನವನ್ನು ದೇಶದ ಭವ್ಯ ಭವಿಷ್ಯದ ನಿರ್ಮಾಣಕ್ಕಾಗಿ, ಒಂದು ಸಮ ಸಮಾಜದ ನಿರ್ಮಾಣಕ್ಕಾಗಿ ಮುಡಿಪಾಗಿಟ್ಟವರು ಎಂದು ತಿಳಿಸಿದರು. ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಅವರು ಮಾತನಾಡಿ, ಇಂದಿನ ಯುವಪೀಳಿಗೆ ಅಂಬೇಡ್ಕರ್ ಅವರ ಆದರ್ಶಗಳು, ವಿಚಾರಧಾರೆಣೆಗಳು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಬಂಡೆಪ್ಪ ಕಾಶಂಪೂರೆ, ಮಾಜಿ MLC ಅರವಿಂದಕುಮಾರ ಅರಳಿ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ ದಿಲೀಪ್ ಬದೋಲೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ನಗರಸಭೆ ಅಧ್ಯಕ್ಷರಾದ ಮಹಮ್ಮದ ಗೌಸ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ಜಾಬಶೆಟ್ಟಿ, ಈಶ್ವರ ಸಿಂಗ್ ಠಾಕೂರ್ , ಮಾರುತಿ ಬೌದ್ಧೆ, ಅನೀಲ ಬೆಲ್ದಾರ, ಆನಂದ ದೇವಪ್ಪ, ಪಂಡಿತರಾವ ಚಿದ್ರಿ, ಬಸವರಾಜ ಮಾಳಿಗೆ, ದೇವೆಂದ್ರ ಚಿದ್ರಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು .

Ghantepatrike kannada daily news Paper

Leave a Reply

error: Content is protected !!