ಟಿಇಟಿ ಉಚಿತ ಕಾರ್ಯಾಗಾರ: ಪ್ರೇಮಸಾಗರ ದಾಂಡೇಕರ್ ಅಭಿಮತ ಕಠಿಣ ಪರಿಶ್ರಮ ಯಶಸ್ಸಿನ ಮೆಟ್ಟಿಲು
ಬೀದರ್: ಕಠಿಣ ಪರಿಶ್ರಮವೇ ಯಶಸ್ಸಿನ ಮೆಟ್ಟಿಲಾಗಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರೇಮಸಾಗರ್ ದಾಂಡೇಕರ್ ಹೇಳಿದರು.ನಗರದ ಮನ್ನಳ್ಳಿ ರಸ್ತೆಯಲ್ಲಿನ ಬೆಲ್ದಾಳೆ ಪೆಟ್ರೋಲ್ ಬಂಕ್ ಹಿಂದುಗಡೆಯ ಬಸವ ಪಿ.ಯು.ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಸ್ಪರ್ಧಾಗುರು ಐಎಎಸ್ ಆ್ಯಂಡ್ ಕೆಎಎಸ್ ಸ್ಟಡಿ ಸೆಂಟರ್ ವತಿಯಿಂದ ಆಯೋಜಿಸಿದ್ದ ಟಿಇಟಿ, ಪ್ರೌಢಶಾಲಾ ಶಿಕ್ಷಕ, ಪಿಡಿಒ, ಎಫ್ಡಿಎ ಹಾಗೂ ಎಸ್ಡಿಎ ನೇಮಕಾತಿ ಕುರಿತ ಉಚಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಅಭ್ಯರ್ಥಿಗಳು ಪೂರ್ವ ತಯಾರಿ ನಡೆಸಬೇಕು. ಯೋಜನಾ ಬದ್ಧವಾಗಿ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.
ಇಂದು ಪ್ರತಿಯೊಂದಕ್ಕೂ ಪೈಪೋಟಿ ಇದೆ. ವಿದ್ಯಾರ್ಥಿಗಳು ಸ್ಪರ್ಧೆಗೆ ಹೊಂದಿಕೊಳ್ಳಬೇಕು. ಸ್ಪರ್ಧಾಗುರು ಸೆಂಟರ್ ಉಚಿತ ಕಾರ್ಯಾಗಾರ ಹಾಗೂ ಮಾದರಿ ಪರೀಕ್ಷೆಗಳ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲಿರುವ ಜಿಲ್ಲೆಯ ಅಭ್ಯರ್ಥಿಗಳಿಗೆ ನೆರವಾಗುತ್ತಿರುವುದು ಶ್ಲಾಘನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ನುಡಿದರು.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಜಿಲ್ಲೆಯ ಅಭ್ಯರ್ಥಿಗಳನ್ನು ಅಣಿಗೊಳಿಸುವುದು ಸೆಂಟರ್ನ ಉದ್ದೇಶವಾಗಿದೆ ಎಂದು ಸ್ಪರ್ಧಾಗುರು ಸೆಂಟರ್ ನಿರ್ದೇಶಕ ಅಮಿತ್ ಸೋಲಪುರ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸುಭಾಷ್ ನಾಗೂರೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವಪ್ಪ, ಬಸವ ಪಿ.ಯು. ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜು ಅಧ್ಯಕ್ಷ ಬಸವರಾಜ ಬಿರಾದಾರ, ವಿ.ಕೆ. ಇಂಟರ್ನ್ಯಾಷನಲ್ ಪದವಿ ಕಾಲೇಜು ಪ್ರಾಚಾರ್ಯ ನಾಗೇಶ ಬಿರಾದಾರ, ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆ ಮುಖ್ಯಶಿಕ್ಷಕ ಲಕ್ಷ್ಮಣ ಪೂಜಾರಿ ಮಾತನಾಡಿದರು.
ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಹುದ್ದೆಗಳಿಗೆ ಆಯ್ಕೆಯಾದ ಹಾಗೂ ಟಿಇಟಿಯಲ್ಲಿ ಅರ್ಹತೆ ಗಳಿಸಿದ ಅಭ್ಯರ್ಥಿಗಳನ್ನು ಸನ್ಮಾನಿಸಲಾಯಿತು.
ಸೆಂಟರ್ ಸಂಚಾಲಕ ರಮೇಶ ಮರ್ಜಾಪುರ, ಶಿಕ್ಷಕರಾದ ಸುಧಾಕರ ಮೇತ್ರೆ, ಜಗನ್ನಾಥ ಶಿವಗೊಂಡ, ಗೌರಿಶಂಕರ, ರಾಮಲಿಂಗ, ರೋಹನ್, ಸಾಗರ್ ನಂದಗಾಂವ್, ನಾಗಪ್ಪ ಮಡಿವಾಳ ಇದ್ದರು.
ಕಾರ್ಯಾಗಾರ ಹಾಗೂ ಉಚಿತ ಟಿಇಟಿ ಮಾದರಿ ಪರೀಕ್ಷೆಯಲ್ಲಿ 150 ಅಭ್ಯರ್ಥಿಗಳು ಪಾಲ್ಗೊಂಡಿದ್ದರು.