ಬೀದರ್

ಜಿಲ್ಲೆಗಳು ಸ್ವಚ್ಛವಾದಲ್ಲಿ ತಾನಾಗಿಯೇ ಸ್ವಚ್ಛ ಭಾರತ ನಿರ್ಮಾಣವಾಗಲಿದೆ : ರಂಭಾಪುರಿ ಜಗದ್ಗುರು

ಬೀದರ್: ಸ್ವಚ್ಛ ಹಾಗೂ ಸುಂದರ ಬೀದರ್ ನಿರ್ಮಾಣ ಎಲ್ಲರ ಆದ್ಯತೆಯಾಗಬೇಕು ಎಂದು ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಸ್ವಚ್ಛ ಭಾರತ ಅಭಿಯಾನ ಅಂಗವಾಗಿ ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಜಿಲ್ಲಾ ವ್ಯಾಪಿ ಸ್ವಚ್ಛ ಬೀದರ್ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಸ್ವಚ್ಛ ಭಾರತ ಅಭಿಯಾನದ ಓಡಿಎಸ್ ಪ್ಲಸ್ ತರಬೇತಿ ಕೈಪಿಡಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಗ್ರಾಮ, ಹೋಬಳಿ, ತಾಲ್ಲೂಕು ಹಾಗೂ ಜಿಲ್ಲೆಗಳು ಸ್ವಚ್ಛವಾದಲ್ಲಿ ತಾನಾಗಿಯೇ ಸ್ವಚ್ಛ ಭಾರತ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ಶಾಂತೀಶ್ವರಿ ಸಂಸ್ಥೆ ಎರಡು ದಶಕಗಳಿಂದ ಜಿಲ್ಲೆಯ ಅಭಿವೃದ್ಧಿಗೆ ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಕೋವಿಡ್‍ನಲ್ಲಿ ಸೋಂಕಿತರು ಹಾಗೂ ಸಾರ್ವಜನಿಕರಿಗೆ ನೆರವಾಗಿ ಮಾನವೀಯತೆ ಮೆರೆದಿದೆ. ಸಂಸ್ಥೆ ಇದೀಗ ನಡೆಸುತ್ತಿರುವ ಸ್ವಚ್ಛ ಬೀದರ್ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಅವರು, ಸ್ವಚ್ಛ ಹಾಗೂ ಸುಂದರ ಬೀದರ್‍ಗಾಗಿ ನಡೆಸುತ್ತಿರುವ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 51 ಸ್ವಾಮೀಜಿಗಳು ಈ ದಿಸೆಯಲ್ಲಿ ಭಕ್ತರಿಗೆ ಮಾರ್ಗದರ್ಶನ ಮಾಡುವ ಭರವಸೆ ನೀಡಿರುವುದು ಸಂತಸ ಉಂಟು ಮಾಡಿದೆ. ಸ್ವಚ್ಛ ಬೀದರ್ ಅಭಿಯಾನದ ಯಶಸ್ವಿಗೆ ಪ್ರತಿಯೊಬ್ಬರ ಸಹಕಾರ ಅವಶ್ಯಕವಾಗಿದೆ ಎಂದು ತಿಳಿಸಿದರು.
ಸಂಘದ ಆವರಣದಲ್ಲಿ ಬಿಲ್ವಪತ್ರಿ ಸಸಿ ನೆಡಲಾಯಿತು. ಮಠಾಧೀಶರು ಹಾಗೂ ಭಕ್ತರಿಗೆ 1008 ಬಿಲ್ವಪತ್ರಿ ಸಸಿಗಳನ್ನು ವಿತರಿಸಲಾಯಿತು. ಕಿರಣ ಹಿರೇಮಠ ಮತ್ತು ತಂಡದವರು ಸಂಗೀತ ನಡೆಸಿಕೊಟ್ಟರು.
ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಅಭಿಯಾನಕ್ಕೆ ಚಾಲನೆ ನೀಡಿದರು. ಕೆಆರ್‍ಇ ಸಂಸ್ಥೆಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಹಲಬರ್ಗಾ-ಶಿವಣಿ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯ, ಲಾಡಗೇರಿಯ ಗಂಗಾಧರ ಶಿವಾಚಾರ್ಯ, ಸಾಯಗಾಂವ್‍ನ ಶಿವಾನಂದ ಸ್ವಾಮೀಜಿ, ಕಮಠಾಣದ ರಾಚೋಟೇಶ್ವರ ಶಿವಾಚಾರ್ಯ, ಬೇಮಳಖೇಡದ ಚಂದ್ರಶೇಖರ ಶಿವಾಚಾರ್ಯ, ಖಟಕಚಿಂಚೋಳಿಯ ಬಸವಲಿಂಗ ದೇವರು, ಸೊಂತದ ಶಿವಕುಮಾರ ಶಿವಾಚಾರ್ಯ, ಸಿಂಧನಕೇರಾ ಹೊನ್ನಲಿಂಗ ಸ್ವಾಮೀಜಿ, ಜಿ.ಪಂ ಮುಖ್ಯ ಯೋಜನಾಧಿಕಾರಿ ಶರಣಯ್ಯ ಮಠಪತಿ, ಎನ್‍ವೈಕೆ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಾಗರಾಜ ಮಠ, ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಪ್ರಾಂತದ ಕಾರ್ಯಕಾರಿಣಿ ಸದಸ್ಯ ರಾಮಕೃಷ್ಣ ಸಾಳೆ, ಕೃಷಿಕ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಯ್ಯ ಸ್ವಾಮಿ, ಸ್ಪರ್ಶ ಆಸ್ಪತ್ರೆ ಮುಖ್ಯಸ್ಥ ಡಾ. ಲೋಕೇಶ ಹಿರೇಮಠ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಾದೇಶಿಕ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಡಾ. ಜಗನ್ನಾಥ ಹೆಬ್ಬಾಳೆ, ಪ್ರಮುಖರಾದ ರವೀಂದ್ರ ಸ್ವಾಮಿ, ಬಸವರಾಜ ಸ್ವಾಮಿ, ಶಿವರಾಜ ನರಶೆಟ್ಟಿ, ಬಾಬುರಾವ್ ತುಂಬಾ, ಶಿವಕುಮಾರ ಸ್ವಾಮಿ, ದಯಾನಂದ ಸ್ವಾಮಿ, ಓಂಪ್ರಕಾಶ ರೊಟ್ಟೆ, ಮಲ್ಲಿಕಾರ್ಜುನ ಗಚ್ಚಿನಮಠ, ಜಗದೀಶ್ವರ ಬಿರಾದಾರ, ಡಾ. ರಾಜಕುಮಾರ ಹೆಬ್ಬಾಳೆ, ವರದಯ್ಯ ಸ್ವಾಮಿ, ಶಿವಶಂಕರ ಬೆಳಮಗಿ, ರೇವಣಸಿದ್ದಯ್ಯ ಸ್ವಾಮಿ, ಕಾವೇರಿ ಸ್ವಾಮಿ, ಶಿವಕುಮಾರ ಗಣೇಶಪುರ, ಬಸವರಾಜ ಸ್ವಾಮಿ ಹೆಡಗಾಪುರ, ವಿನಯ ಮಠ, ಸಂಜು ಸ್ವಾಮಿ, ಶರಣಯ್ಯ ಸ್ವಾಮಿ, ವಿರೂಪಾಕ್ಷ ರಾಮಗಿರಮಠ ಮೊದಲಾದವರು ಇದ್ದರು.
ಪ್ರವೀಣ ಸ್ವಾಮಿ ಸ್ವಾಗತಿಸಿದರು. ಪ್ರೊ. ರೇಣುಕಾ ಮಳ್ಳಿ ನಿರೂಪಿಸಿದರು. ಮಹಾಲಿಂಗ ಸ್ವಾಮಿ ಚಟ್ನಳ್ಳಿ ವಂದಿಸಿದರು.
ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ಸ್ವಸಹಾಯ ಸಂಘಗಳ ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Ghantepatrike kannada daily news Paper

Leave a Reply

error: Content is protected !!