ಬೀದರ್

ಜಾಥದ ಮೂಲಕ ಹೆಪಟೈಟಿಸ್ ರೋಗದ ಕುರಿತು ಜಾಗೃತಿ-:ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ.ಎಂ

ಬೀದರ, ಆಗಸ್ಟ್ 7 – ಆರೋಗ್ಯ ಇಲಾಖೆಯ ವತಿಯಿಂದ ಹೆಪಟೈಟಿಸ್ ರೋಗದ ಕುರಿತು ಜಾಥದ ಮೂಲಕ ಜನಜಾಗೃತಿ ಮೂಡಿಸುವ, ರೋಗ ಲಕ್ಷಣಗಳು ಕಂಡು ಬಂದರೆ ತಕ್ಷಣ ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ.ಎಂ ಹೇಳಿದರು.
ಅವರು ಸೋಮವಾರ ಬೀದರ ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿಶ್ವ ಹೆಪಟೈಟಿಸ್ ದಿನದ ಅಂಗವಾಗಿ ಆಯೋಜಿಸಿದ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಸೂಕ್ತ ಸಮಯಕ್ಕೆ ಸೂಕ್ತ ಚಿಕಿತ್ಸೆಯಿಂದ ಹೆಪಟೈಟಿಸ್ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ರೋಗ ತಡೆಗಟ್ಟುವ, ನಿಯಂತ್ರಣ ಮಾಡುವ ಮತ್ತು 2030 ರೊಳಗಾಗಿ ಹೆಪಟೈಟಿಸ್ ಮುಕ್ತ ಭಾರತವನ್ನಾಗಿಸುವ ಗುರಿ ಹೊಂದಲಾಗಿದೆ ಎಂದು ನುಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರತಿಕಾಂತ ವಿ ಸ್ವಾಮಿ ಮಾತನಾಡಿ, ಹೆಪಟೈಟಿಸ್ ರೋಗದಲ್ಲಿ ಎ,ಬಿ,ಸಿ,ಡಿ ಮತ್ತು ಇ ಎಂಬ ಐದು ವಿಧಗಳಿವೆ. ಮುಖ್ಯವಾಗಿ ಈ ರೋಗವನ್ನು ನಿಯಂತ್ರಣದಲ್ಲಿಡಲು ಆರು ಬಗೆಯ ಮುಂಜಾಗೃತ ಕ್ರಮಗಳನ್ನು ವಹಿಸಬೇಕು. ನಮ್ಮ ಜೀವನ ಶೈಲಿ ಮತ್ತು ನಮ್ಮ ದಿನನಿತ್ಯದ ಕಾರ್ಯಚಟುವಟಿಕೆಗಳನ್ನು ನಿಯಂತ್ರಿಸಿ ಶಿಸ್ತು ಬದ್ಧವಾಗಿ ಬದುಕುವುದು, ಹೆಪಟೈಟಿಸ್ ಲಸಿಕೆ ಹಾಕಿಸಿಕೊಳ್ಳುವುದು, ವಿಶೇಷವಾಗಿ ನವಜಾತ ಶಿಶು, ಆರೋಗ್ಯ ಕಾರ್ಯಕರ್ತರು ಈ ಸೋಂಕಿನ ಹೆಚ್ಚಿನ ಅಪಾಯವುಳ್ಳವರು, ಸುರಕ್ಷಿತ ರಕ್ತ ಮತ್ತದರ ಉತ್ಪನ್ನಗಳ ಬಳಕೆ, ಸುರಕ್ಷಿತ ಚುಚ್ಚುಮದ್ದು ನೀಡುವಿಕೆ ಮತ್ತು ಸುರಕ್ಷಿತ ನೀರು, ಸ್ವಚ್ಛ ಶೌಚಾಲಯ ಉಪಯೋಗ ಹಾಗೂ ನೈರ್ಮಲ್ಯ ಕಾಪಾಡುವಿಕೆಯಂತಹ ಮುಂಜಾಗ್ರತಾ ಕ್ರಮಗಳಿಂದ ಹೆಪಟೈಟಿಸ್ ರೋಗದಿಂದ ದೂರವಿರಬಹುದು ಎಂದ ಅವರು ಈ ರೋಗಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ತಪಾಸಣೆ, ಚಿಕಿತ್ಸೆ ಲಭ್ಯವಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಡ್ಯಾಪ್ಕೋ ಅಧಿಕಾರಿಗಳಾದ ಡಾ. ಶರಣಯ್ಯ ಸ್ವಾಮಿಯವರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಜಾಥಾವು ನಗರದ ರಾಜೀವ ಗಾಂಧಿ ಚೌಕ್,ಅಂಬೇಡ್ಕರ್ ವೃತ್ತ, ಶಿವಾಜಿ ಚೌಕ್,ಹರಳಯ್ಯ ವೃತ್ತ ದಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಗೆ ತಲುಪಿ ಸಮಾರೋಪಗೊಂಡಿತ್ತು.
ಜಾಥಾದಲ್ಲಿ ಜಿಲ್ಲಾ ಮಟ್ಟದ ವಿವಿಧ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ.ರಾಜಶೇಖರ ಪಾಟೀಲ, ಡಾ.ಕಿರಣ ಪಾಟೀಲ, ಡಾ.ಶಂಕರೆಪ್ಪ ಬೊಮ್ಮಾ, ಡಾ.ದಿಲೀಪ ಡೋಂಗ್ರೆ, ಹೆಪಟೈಟಿಸ್ ನೋಡಲ್ ಅಧಿಕಾರಿಗಳಾದ ಡಾ.ಸುವಿನ್ ಪಾಟೀಲ, ಬೀದರ ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಸಂಗಾರೆಡ್ಡಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಸರ್ಕಾರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Ghantepatrike kannada daily news Paper

Leave a Reply

error: Content is protected !!