ಜನವಾಡಾದಲ್ಲ್ಲಿ ಜೆಇಇ ನೀಟ್ ಮತ್ತು ಸಿಇಟಿಯಲ್ಲಿ ಪಾಸಾದ ಕೊರಮ (ಕೊರವ) ಸಮಾಜದ ಮಕ್ಕಳಿಗೆ ಸನ್ಮಾನ ಮೆಕ್ಯಾನಿಕ್ ಮನೆಯಲ್ಲಿ ಅರಳಿದ ಪ್ರತಿಭೆ – ತಿಮ್ಮಣ್ಣ ಭಜಂತ್ರಿ
ಬೀದರ: ಸಾಧಿಸುವ ಛಲ ಇದ್ದರೆ ಸಾಕು ಅದಕ್ಕೆ ಯಾವುದೇ ಬಡತನ ಅಡ್ಡಿಯಾಗುವುದಿಲ್ಲ. ಜನವಾಡಾ ಗ್ರಾಮದ ಮೆಕ್ಯಾನಿಕ್ ಕೆಲಸ ಮಾಡುವ ತುಕಾರಾಮ ಅವರ ಮಗ ಓಂಕಾರ ಎನ್ನುವ ವಿದ್ಯಾರ್ಥಿ ನೀಟ್ ಪರೀಕ್ಷೆಯಲ್ಲಿ (೭೨೦ರ ಪೈಕಿ) ೬೪೬ ಅಂಕಗಳನ್ನು ಪಡೆದು ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ರಾಷ್ಟçಕ್ಕೆ ೭೨೪ ನೇ ರ‍್ಯಾಂಕಿAಗ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾನೆ ಎಂದು ಹಿರಿಯ ಜಿಲ್ಲಾ ಕಾರಾಗೃಹ ಅಧಿಕಾರಿಗಳಾದ ತಿಮ್ಮಣ್ಣ ಭಜಂತ್ರಿ ಪ್ರಶಂಸೆ ವ್ಯಕ್ತಪಡಿಸಿದರು.
ಬೀದರ ತಾಲೂಕಿನ ಜನವಾಡ ಗ್ರಾಮದ ಗಣೇಶ ಮಂದಿರದಲ್ಲಿ ಕೊರವ ಸಮುದಾಯದ ಬಡ ವಿದ್ಯಾರ್ಥಿಗಳಾದ ಓಂಕಾರ ತುಕಾರಾಮ, ಕೃಷ್ಣ ಸಂಜೀವಕುಮಾರ್ (೨೨೩೯ ನೇ ರ‍್ಯಾಂಕಿAಗ್) ಹಾಗೂ ದೀಪಕ ಶಾಮಣ್ಣ (೭೬೨೨ ರ‍್ಯಾಂಕಿAಗ್) ಈ ಮೂವರು ವಿದ್ಯಾರ್ಥಿಗಳು ೨೦೨೩-೨೪ನೇ ಶೈಕ್ಷಣಿಕ ಸಾಲಿನಲ್ಲಿ ಪಿ.ಯು.ಸಿ ದ್ವಿತೀಯ ವರ್ಷದಲ್ಲಿ ಜೆಇಇ, ನೀಟ್ ಮತ್ತು ಸಿಇಟಿಯಲ್ಲಿ ಉತ್ತಮ ರ‍್ಯಾಂಕಿAಗ್ ಪಡೆದಿದ್ದಕ್ಕಾಗಿ ಸಮುದಾಯದ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಬೀದರ ಜಿಲ್ಲಾ ಕೊರಮ(ಕೊರವ)ರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ನಮ್ಮ ಸಮಾಜದಲ್ಲಿ ಓದುವ ಮಕ್ಕಳ ಸಂಖ್ಯೆ ಕಡಿಮೆ. ಹೀಗಿರುವಾಗ ಈ ಮೂವರು ವಿದ್ಯಾರ್ಥಿಗಳು ಕಷ್ಟಪಟ್ಟು ಸಾಧನೆ ಮಾಡಿದ್ದಾರೆ. ಮುಂದೆಯೂ ಇದೇ ರೀತಿ ಸಾಧಿಸಿ ಅಧಿಕಾರಿಗಳಾಗಿ ಸೇವೆ ಮಾಡಬೇಕು. ಈ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಕೊಂಡುಕೊಳ್ಳಲು ನಾನು ಮುಂದಿನ ದಿನಗಳಲ್ಲಿ ಧನಸಹಾಯ ಮಾಡುತ್ತೇನೆ ಎಂದು ಭಜಂತ್ರಿ ತಿಳಿಸಿದರು.
ಬೀದರ ಜಿಲ್ಲಾ ಕೊರಮ(ಕೊರವ)ರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಸಂಜುಕುಮಾರ ಬೇಲೂರ ಪ್ರಸ್ತಾವಿಕವಾಗಿ ಮಾತನಾಡುತ್ತ ಸಮುದಾಯದ ವಿದ್ಯಾರ್ಥಿಗಳ ಸಾಧನೆ ಉಳಿದ ಮಕ್ಕಳಿಗೆ ಪ್ರೇರಣೆ ಆಗುತ್ತದೆ ಹಾಗೂ ನಿರಂತರವಾಗಿ ಸಮುದಾಯದ ವಿದ್ಯಾರ್ಥಿಗಳ ಹಿಂದೆ ನಮ್ಮ ಸಂಘ ಇರುತ್ತದೆ ಎಂದು ಹೇಳಿದ್ದರು.
ಇದೆ ಸಂದರ್ಭದಲ್ಲಿ ಸಮುದಾಯದ ಸರ್ಕಾರಿ ಸಹಶಿಕ್ಷಕರಾದ ನಾರಾಯಣ ಕೊಣಸಾರೆ ನೌಬಾದ ಅವರು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕಾಣಿಕೆ ರೂಪದಲ್ಲಿ ಧನಸಹಾಯ ಮಾಡಿದ್ದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಸಂತೋಷ ಕೊರವ, ಗೌರವಾಧ್ಯಕ್ಷರಾದ ವಿಶ್ವನಾಥ್ ಜಾಧವ, ಉಪಾಧ್ಯಕ್ಷ ಸಂಜು ಯರಂಡಿ, ಕನಕಟ್ಟಾ ಗ್ರಾಮ ಪಂಚಾಯತ್ ಅಧ್ಯಕ್ಷ ಮನೋಜ್ ಮಾನೆ, ಸಂಘದ ಕಾರ್ಯಾಧ್ಯಕ್ಷ ನಾಗೇಶ ಕೈಕಾಡಿ, ಬೀದರ ತಾಲೂಕ ಪಂಚಾಯತ್ ಮಾಜಿ ಸದಸ್ಯ ರವೀಂದ್ರ ಬಂಗೆ ಜನವಾಡ, ಜನವಾಡ ಗ್ರಾ.ಪಂ. ಸದಸ್ಯ ಸಂತೋಷ ಬಂಗೆ, ಪ್ರಮುಖರಾದ ಶಂಕರ್ ಬಂಗೆ, ಭೀಮರಾವ ಪವಾರ, ಶ್ರೀಧರ ಜಾಧವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.