ಚಾಂದೋರಿ ಗ್ರಾ.ಪಂ: ರೇಖಾ ಅಧ್ಯಕ್ಷೆ, ರಾಜಶ್ರೀ ಉಪಾಧ್ಯಕ್ಷೆ
ಬೀದರ್: ಕಮಲನಗರ ತಾಲ್ಲೂಕಿನ ಚಾಂದೋರಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷೆಯಾಗಿ ರೇಖಾ ದಯಾನಂದ ಕಾಂಬಳೆ ಹಾಗೂ ಉಪಾಧ್ಯಕ್ಷೆಯಾಗಿ ರಾಜಶ್ರೀ ಸತೀಶ್ ಚಾಂದೋರೆ ಆಯ್ಕೆಯಾಗಿದ್ದಾರೆ.
ಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾದ ಅಧ್ಯಕ್ಷ ಮತ್ತು ಸಾಮಾನ್ಯ ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದು ನಾಮಪತ್ರ ಮಾತ್ರ ಸಲ್ಲಿಕೆಯಾಗಿದ್ದವು. ಹೀಗಾಗಿ ಆಯ್ಕೆ ಅವಿರೋಧವಾಗಿ ನಡೆಯಿತು.
ಸರ್ವ ಸದಸ್ಯರ ಸಮನ್ವಯದೊಂದಿಗೆ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಸಮಗ್ರ ವಿಕಾಸಕ್ಕಾಗಿ ಮೊದಲ ಅವಧಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆದಿತ್ತು. ಎರಡನೇ ಅವಧಿಯಲ್ಲೂ ಅವಿರೋಧ ಆಯ್ಕೆ ಮಾಡಲಾಗಿದೆ. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಅಭಿವೃದ್ಧಿ ಕಾರ್ಯಗಳ ಜತೆಗೆ ಜನರ ಸಮಸ್ಯೆಗೆ ಸ್ಪಂದಿಸುವ ವಿಶ್ವಾಸ ಇದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ದೀಪಕ ಪಾಟೀಲ ಚಾಂದೋರಿ ಹೇಳಿದರು.
ಕಮಲನಗರ ತಹಶೀಲ್ದಾರ್ ನಾಗರಾಜ ಚುನಾವಣಾಧಿಕಾರಿಯಾಗಿದ್ದರು. ಏಕತಾ ಫೌಂಡೇಷನ್ ಅಧ್ಯಕ್ಷ ರವೀಂದ್ರ ಸ್ವಾಮಿ, ಪಿಡಿಒ ಸೋಮಶೇಖರ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ಜಗನ್ನಾಥ ಮೇತ್ರೆ, ಕಮಲಾಬಾಯಿ ಹರಿಬಾ, ಶೋಭಾ ಮಹಾದೇವ, ಇಂದ್ರಾಬಾಯಿ ಉಮರಾವ್ ಬಿರಾದಾರ, ಸಾವಿತ್ರಿಬಾಯಿ ನೇತಾಜಿ ಬಿರಾದಾರ, ಕಾರ್ಯದರ್ಶಿ ಶಶಿಕಾಂತ ಬಿರಾದಾರ, ಸಿಬ್ಬಂದಿ ವಿವೇಕ ಸ್ವಾಮಿ, ಮಹಾದೇವ ದಾಮನಗಾವೆ ಮತ್ತಿತರರು ಇದ್ದರು.