ಚವ್ಹಾಣ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರ – ಡಾ.ಭೀಮಸೇನ್ ಶಿಂಧೆ
ಬೀದರ: 2008ರಲ್ಲಿ ಶಾಸಕರಾಗಿ ಆಯ್ಕೆಯಾದಾಗ ಶಾಸಕ ಪ್ರಭು ಚವ್ಹಾಣ ಹತ್ತಿರ ಎಷ್ಟು ಆಸ್ತಿ ಇತ್ತೋ ಇದೀಗ ನಾಲ್ಕನೇ ಬಾರಿ ಔರಾದ ಶಾಸಕರಾಗಿ ಆಯ್ಕೆಯಾದಾಗ ಚವ್ಹಾಣ ಹತ್ತಿರ ಅದಕ್ಕಿಂತ ಶೇ. 40 ಪಟ್ಟು ಆಸ್ತಿ ಏರಿಕೆ ಕಂಡಿದೆ. ಈ ಆಸ್ತಿ ಎಲ್ಲಿಂದ ಬಂತು? ಎಂಬುದಕ್ಕೆ ಚವ್ಹಾಣ ಕ್ಷೇತ್ರದ ಜನತೆಗೆ ಉತ್ತರಿಸಬೇಕು. ಅದನ್ನು ಬಿಟ್ಟು ‘ಉಲ್ಟಾ ಚೋರ್ ಕೋತ್ವಾಲ್ ಕೋ ಡಾಂಟಾ’ ಎನ್ನುವಂತೆ ನಾನು ವರ್ಗಾವಣೆ ಧಂದೆಯಲ್ಲಿ ತೊಡಗಿದ್ದೇನೆ. ಹಣ ಮಾಡುತ್ತಿದ್ದೇನೆ ಎಂದು ಚವ್ಹಾಣ ಮಾಡಿದ ಆರೋಪ ಸತ್ಯಕ್ಕೆ ದೂರವಾದುದು. ಅದರಲ್ಲಿ ಯಾವುದೇ ಹುರುಳಿಲ್ಲ ಎಂದು 2023ರ ಔರಾದ ಮೀಸಲು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೇಸ್ ಪರಾಜಿತ ಅಭ್ಯರ್ಥಿ ಡಾ. ಭೀಮಸೇನರಾವ ಶಿಂಧೆ ಚವ್ಹಾಣ್ಗೆ ಉತ್ತರಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಶಾಸಕ ಪ್ರಭು ಚವ್ಹಾಣ ಅವರು ಔರಾದ ಸಾರ್ವಜನಿಕ ಆಸ್ಪತ್ರೆಯಲ್ಲಿ ಡೇಂಘಿ ನಿಯಂತ್ರಣ ಸಭೆಯಲ್ಲಿ ಮಾತನಾಡುವಾಗ ನನ್ನ ಮೇಲೆ ಮಾಡಿದ ಆರೋಪ ಶುದ್ಧ ಸುಳ್ಳು. ಮುಖ್ಯಮಂತ್ರಿಗಳ ಅಪರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅನುಭವ ನನಗಿದೆ. ನಾನೇನು ನಿಮ್ಮಂತೆ ಅನಕ್ಷರಸ್ಥ ಅಲ್ಲ. ಜನಸೇವೆ ಮಾಡುವ ನೈಪುಣ್ಯತೆ ನನ್ನಲ್ಲಿದೆ ಎಂದರಲ್ಲದೆ ಚುನಾವಣೆಯಲ್ಲಿ ತನ್ನ ಮಾತೃಪಕ್ಷಕ್ಕೆ ದ್ರೋಹ ಎಸಗಿ ಸ್ವತಃ ಚವ್ಹಾಣ ಅವರೆ ಆಕ್ರಮ ಮಾಡಿ ಹಣ ಲಪಟಾಯಿಸಿ, ನನ್ನ ಮೇಲೆ ನಿರಾಧಾರ ಆರೋಪ ಮಾಡುತ್ತಿದ್ದಾರೆ. ಔರಾದ ಕ್ಷೇತ್ರದ ಜನತೆಗೆ ಯಾರು ಪ್ರಾಮಾಣಿಕರು, ಯಾರು ಹಣ ಮಾಡುತ್ತಿದ್ದಾರೆ ಎನ್ನುವ ವಿಷಯ ಗೊತ್ತಿದೆ. ಕ್ಷೇತ್ರದ ಜನತೆ ಜಾಣರಿದ್ದಾರೆ ಎಂದರಲ್ಲದೆ ಈ ರೀತಿಯ ಆರೋಪ ಮಾಡುತ್ತ ಸುಳ್ಳು ಹೇಳುವುದನ್ನು ಬಿಟ್ಟು ಜನತೆಯ ಆಶಿರ್ವಾದದಿಂದ ಗೆದ್ದ ತಾವುಗಳು ಜನಸೇವೆ ಕಡೆಗೆ ಗಮನ ಕೊಡಿ ಎಂದು ಶಿಂಧೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.