ಗುರು ನಾನಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಸಾಧನೆಗೆ ಶಿಕ್ಷಕರ ಮಾರ್ಗದರ್ಶನ ಅತ್ಯಮೂಲ್ಯ : ಪ್ರೊ. ಮೂಲಿಮನಿ
ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರ ಮಾರ್ಗದರ್ಶನ ಅತ್ಯಮೂಲ್ಯ, ಶಿಕ್ಷಕ ಸಮಾಜದ ಓರೆ ಕೋರೆ ತಿದ್ದುವ ಜತೆಗೆ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಹೊರತೆಗೆಯುವ ಕೆಲಸ ಮಾಡಬೇಕು ಎಂದು ಪ್ರೊ. ಬಿ.ಜಿ ಮೂಲಿಮನಿ ಕರೆ ಕೊಟ್ಟರು.
ಡಾ|| ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ನಿಮಿತ್ಯ ಶಿಕ್ಷಕರ ದಿನಾಚರಣೆಯನ್ನು ಗುರು ನಾನಕ ಸಂಸ್ಥೆಯ ವತಿಯಿಂದ ಆಯೋಜಿಸಿದ ಶಿಕ್ಷಕರ ದಿನಾಚರಣೆಯನ್ನು ದಿನಾಂಕ 05-09-2023 ಮಂಗಳವಾರದಂದು ಝಿರಾ ಕನ್ವೆಂಷನ್ ಹಾಲ್ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷರಾದ ಡಾ|| ಎಸ್. ಬಲಬೀರ ಸಿಂಗ್ ಅವರು ರಾಧಕೃಷ್ಣನ್ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ, ದೀಪ ಬೆಳೆಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತ ಸಕಲ ಶಿಕ್ಷಕರಿಗೆ ಶುಭಾಷಯಗಳನ್ನು ಕೋರಿದರು.
ಕಲ್ಯಾಣ ಕರ್ನಾಟಕ ಶಿಕ್ಷಣ ಐಕಾನ್ ಪ್ರಶಸ್ತಿಗಳು 2023 :
ಶ್ರೀ ನಾನಕ ಝಿರಾ ಸಾಹೇಬ್ ಫೌಂಡೇಷನ್ ವತಿಯಿಂದ 2023 ನೇ ಸಾಲಿನ ಕಲ್ಯಾಣ ಕರ್ನಾಟಕ ಐಕಾನ್ ಪ್ರಶಸ್ತಿ, ಕಲ್ಯಾಣ ಕರ್ನಾಟಕ ಪ್ರದೇಶದ ಶಿಕ್ಷಣ ತಜ್ಞರ ಗಮನಾರ್ಹ ಪ್ರಯತ್ನಗಳನ್ನು ಗುರುತಿಸಿ, ಶಿಕ್ಷಣ ಮತ್ತು ಸಮಾಜ ಎರಡಕ್ಕೂ ಅವರ ಮಹತ್ವದ ಕೊಡುಗೆಗಳನ್ನು ಗಮನಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಗುರು ನಾನಕ ಪಬ್ಲಿಕ್ ಶಾಲೆಯ ಮುಖೋಪಾಧ್ಯಯರು ಶ್ರೀಮತಿ ಆರೀಪ್ ಹಾದಿ, ನವೋದಯ ಡೆನಟಲ್ ಮತ್ತು ಆಸ್ಪತ್ರೆ ರಾಯಚೂರಿನ ಡಾ|| ಗಿರೀಶ್ ಕತ್ತಿ, ವಿಟಿಯು ಪ್ರಾದೇಶಿಕ ಕಛೇರಿ ಗುಲಬರ್ಗಾದ ಡಾ|| ಶುಭಾಂಗಿ, ಕರ್ನಾಟಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಬೀದರಿನ ಡಾ|| ಮಲ್ಲಿಕಾರ್ಜುನ ಹಂಗರಗಿ, ಅಲಬದರ್ ರೂರಲ್ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ ಕಲಬುರಗಿಯ ಡಾ|| ಸೈಯದಾ ಅರ್ಶಿಯಾ ಆರಾ, ಸರಕಾರಿ ಪ್ರಥಮ ದರ್ಜೆ ಕಾಲೇಜು ಚಿಟಗುಪ್ಪಾದ ಡಾ|| ಸುರೇಂದ್ರ ಸಿಂಗ್, ಪ್ರಾಂಶುಪಾಲರು ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಕಾಲೇಜು ಕಡಿಯಾಳ ಭಾಲ್ಕಿ, ಸರಕಾರಿ ಪ್ರೌಢ ಶಾಲೆ ಸಂತಪೂರನ ಶ್ರೀ ಶಿವಲಿಂಗ್ ಹೆಗ್ಡೆ, ಶ್ರೀ ರಾಮಜೋಹನ್ ಪ್ರಾದೇಶಿ ಮತ್ತು ಸರಕಾರಿ ಪಿಯು ಕಾಲೇಜು ಜೇವರ್ಗಿ ಕಾಲೋನಿ ಕಲಬುರಗಿಯ ಶ್ರೀ ದೇವೆಂದ್ರ ಬಿ. ಪದಶೆಟ್ಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಗುರು ನಾನಕ ಸಂಸ್ಥೆಯ ಉಪಾಧ್ಯಕ್ಷೆ ಶ್ರೀಮತಿ ರೇಷ್ಮಾ ಕೌರ ಅವರು ಮಾತನಾಡಿ ಶುಭಾಷಯಗಳನ್ನು ತಿಳಿಸುತ್ತ ಮುಂದೆ ಗುರಿ ಹಿಂದೆ ಗುರು ಇದ್ದಲ್ಲಿ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ, ಪ್ರತಿಯೊಬ್ಬ ಶಿಕ್ಷಕರು ಸೇವಾ ಮನೋಭಾವನೆಯಿಂದ ಸೇವೆ ಸಲ್ಲಿಸಿ, ವಿದ್ಯಾರ್ಥಿಗಳಲ್ಲಿ ಶಿಸ್ತನ್ನು ದೇಶದ ಬಗ್ಗೆ ಗೌರವವನ್ನು ಬೆಳೆಸಬೇಕು ಎಂದು ಹೇಳಿದರು. ಶಿಕ್ಷಕರು ನಾಡನ್ನು ರಕ್ಷಿಸುವ ಭಾವನೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು, ವಿದ್ಯಾರ್ಥಿಗಳಿಗೆ ಸನ್ಮಾರ್ಗದಲ್ಲಿ ತೆಗೆದುಕೊಂಡು ಹೋಗಿ ಒಳ್ಳೆಯ ನಾಗರಿಕರನ್ನಾಗಿ ಮಾಡಬೇಕು ವಿದ್ಯಾರ್ಥಿಗಳ ಭವಿಷ್ಯ ನಿಮ್ಮ ಕೈಯಲ್ಲಿದೆ, ಶಿಕ್ಷಕರ ಮಾರ್ಗದರ್ಶನವಿದ್ದಲ್ಲಿ ಯಾರು ಏನುಬೇಕಾದರೂ ಸಾಧಿಸಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಗುರು ನಾನಕ ಶಿಕ್ಷಣ ಸಂಸ್ಥೆಯ ಎಲ್ಲಾ ಶಾಲಾ ಕಾಲೇಜುಗಳ ಸುಮಾರು 850 ಕ್ಕಿಂತ ಹೆಚ್ಚು ಸಿಬ್ಬಂದಿ ವರ್ಗದವರು ಹಾಜರಿದ್ದರು. ಶಿಕ್ಷಕ-ಶಿಕ್ಷಕಿಯರಿಗಾಗಿ ವಿವಿಧ ಸ್ಪರ್ಧೆಗಳು ನಡೆದವು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ|| ಎಸ್. ಬಲಬೀರ ಸಿಂಗ್, ಉಪಾಧ್ಯಕ್ಷೆ ಶ್ರೀಮತಿ ರೇಷ್ಮಾ ಕೌರ, ಆಡಳಿತ ಮಂಡಳಿಯ ಸದಸ್ಯರು, ಸÀಂಸ್ಥೆಯ ಎಲ್ಲಾ ಶಾಲಾ ಕಾಲೇಜುಗಳ ಪ್ರಾಚಾರ್ಯರು, ಸಿಬ್ಬಂದಿ ವರ್ಗದವರು ಹಾಜರಿದ್ದರು.