ಗುರುಭವನ ನಿರ್ಮಾಣ ನನ್ನ ಚೊಚ್ಚಲ ಆದ್ಯತೆ: ಈಶ್ವರಸಿಂಗ್ ಠಾಕೂರ್
ಬೀದರ್: ಬೀದರ್-ಭಾಲ್ಕಿ ರಸ್ತೆಯಲ್ಲಿರುವ ನೌಬಾದ್ ಸಮಿಪದಲ್ಲಿರುವ ಜಗದ್ಗುರು ಪಂಚಾಚಾರ್ಯ ಪುಣ್ಯಾಶ್ರಮದಲ್ಲಿ ನಿರ್ಮಾಣ ಹಂತದಲ್ಲಿರುವ ಗುರುಭವನ ಕಾಮಗಾರಿ ಪೂರ್ಣಗೊಳಿಸಲು ನನ್ನ ಕೈಲಾದಷ್ಟು ಪ್ರಯತ್ನ ಮಾಡಿ ಮುಗಿಸಲು ಸಂಕಲ್ಪ ಮಾಡಿರುವುದಾಗಿ ಬಿಜೆಪಿ ಕಲಬುರಗಿ ಜಿಲ್ಲಾ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್ ಹೇಳಿದರು.
ಇತ್ತಿಚೀಗೆ ಚಿಕ್ಕಮಂಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆ ಹೊನ್ನೂರ್ ಶ್ರೀ ರಂಭಾಪುರಿ ಪಿಠಕ್ಕೆ ಭೇಟಿ ನೀಡಿ ರಂಭಾಪುರಿ 1008 ಜಗದ್ಗುರು ಡಾ.ವೀರಸೋಮೇಶ್ವರ ರಾಜದೆಶಿಕೇಂದ್ರ ಭಗವತ್ಪಾದರ ದರುಶನಗೈದ ಬಳಿಕ ಜಗದ್ಗುರುಗಳಿಂದ ಸನ್ಮಾನಿತರಾಗಿ ಮಾತನಾಡಿದ ಠಾಕೂರ್ ಅವರು, ಮಾನವ ಧರ್ಮವನ್ನು ಕಾಪಾಡುವ ಕಾರ್ಯ ಹರಿಚರ ಮೂರ್ತಿಗಳು ಮಾಡುತ್ತಿರುವ ಕಾರಣಕ್ಕಾಗಿ ಭಾರತ ಮಾತ್ರ ಇಡೀ ವಿಶ್ವದಲ್ಲಿ ಸಂಸ್ಕಾರ ಹಾಗೂ ಸಂಸ್ಕøತಿ ಕಲಿಸುವ ಗುರು ಪರ್ಯಂಪರೆ ದೇಶವಾಗಿ ಹೊರ ಹೊಮ್ಮಿದೆ. ಆದರೂ ಇಂದಿನ ಯುವ ಪಿಳಿಗೆಯನ್ನು ಸನ್ಮಾರ್ಗಕ್ಕೆ ತಂದು ನಿಲ್ಲಿಸುವ ಜವಾಬ್ದಾರಿ ಪ್ರತಿಯೊಬ್ಬ ತಂದೆ, ತಾಯಿಗಳದ್ದು. ಹಾಗಾಗಿ ಪ್ರತಿಯೊಬ್ಬ ಪಾಲಕ, ಪೋಷಕರು ತಮ್ಮ ಮಕ್ಕಳಿಗೆ ಇಂಜಿನಿಯರ್, ಡಾಕ್ಟರ್, ಲಾಯರ್ ಮಾಡಿದರೆ ಸಾಲದು, ಗುರು, ಹಿರಿಯರಿಗೆ ಗೌರವ ಕೊಡುವ ಹಾಗೂ ಸಂತ ಸಮಾಗಮದಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕಿದೆ ಎಂದರು.
ಠಾಕೂರ್ ಹಾಗೂ ಪುಣ್ಯಾಶ್ರಮದ ಟ್ರಸ್ಟಿಗಳಿಗೆ ಸನ್ಮಾನವಿತ್ತು ಆಶಿರ್ವದಿಸಿದ ರಂಭಾಪುರಿ ಜಗದ್ಗುರುಗಳು, ಗುರುಭವನ ಕಾಮಗಾರಿ ಆದಷ್ಟು ಶೀಘ್ರ ಮುಗಿಯಲಿ, ಮುಂದೆ ತಾವು ಬೀದರ್ ಜಿಲ್ಲೆಗೆ ಬಂದಾಗಲೆಲ್ಲ ಅಲ್ಲಿಯ ಉಳಿದು ಸದ್ಭಕ್ತರನ್ನು ಉದ್ದರಿಸುವ ಕಾರ್ಯ ಆಗಬೇಕಾಗಿದೆ. ಗುರುಭವನ ನಿರ್ಮಾಣ ಮಾಡುವ ಜವಾಬ್ದಾರಿ ಹೊತ್ತಿರುವ ತಮಗೆ ಭಗವಂತ, ಆಯುಷ್ಯ, ಆರೋಗ್ಯ, ಐಸ್ವರ್ಯ, ಅಧಿಕಾರ ಎಲ್ಲವೂ ದಯಪಾಲಿಸುತ್ತಾನೆ. ನಿಮ್ಮಂಥವರು ಧರ್ಮ ರಕ್ಷಣೆಯ ಸಂಕಲ್ಪ ಹೊತ್ತಿರುವ ಕಾರಣಕ್ಕಾಗಿಯೇ ಭಾರತದಲ್ಲಿ ಧರ್ಮ ಸಾಕಷ್ಟು ಸುಸ್ಥಿತಿಯಲ್ಲಿದೆ ಎಂದವರು ತಿಳಿಸಿದರು.
ಈ ಸಂದರ್ಭದಲ್ಲಿ ಜಗದ್ಗುರು ಪಂಚಾಚಾರ್ಯ ಪುಣ್ಯಾಶ್ರಮದ ಸಂಚಾಲಕರಾದ ವೇದಮೂತಿ ಷಣ್ಮುಖುಯ್ಯ ಸ್ವಾಮಿಗಳು, ಟ್ರಸ್ಟಿಗಳಾದ ಶಿವಕುಮಾರ ಸ್ವಾಮಿ, ಶ್ರೀಕಾಂತ ಸ್ವಾಮಿ ಸೋಲಪುರ, ಕಾರ್ತಿಕ ಮಠಪತಿ, ಬಸವಕುಮಾರ, ಮಹೇಶ ಹಾಗೂ ಇತರರು ಉಪಸ್ಥಿತರಿದ್ದು ಜಗದ್ಗುರುಗಳಿಂದ ಆಶಿರ್ವದಿಸಿದರು.