ಕೃಷಿ ಡಿಪ್ಲೊಮಾ ಕೋರ್ಸ್ಗಳ ಪುನಾರಂಭಕ್ಕೆ ಎಬಿವಿಪಿ ಹರ್ಷ
ಡಿಪ್ಲೊಮಾ ಕೋರ್ಸ್ ಗಳನ್ನು ಹಿಂದಿನ ಸರ್ಕಾರದ ಅವಧಿಯಲ್ಲಿ ತಡೆಹಿಡಿಯಲಾಗಿತ್ತು. ಆದರೆ ಕೃಷಿ ಡಿಪ್ಲೊಮಾ ಕೋರ್ಸ್ ಗಳ ಪುನಾರಂಭಕ್ಕೆ ವಿದ್ಯಾರ್ಥಿಗಳು ಹೆಚ್ಚಿನ ಬೇಡಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿಯವರು, ಈ ನಾಲ್ಕು ಕಾಲೇಜುಗಳಲ್ಲಿ ಪ್ರವೇಶಾತಿ ಪ್ರಾರಂಭಕ್ಕೆ ಅವಕಾಶ ಒದಗಿಸಿಕೊಟ್ಟಿದ್ದಾರೆ,ಈ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಬಂದು ಪ್ರವೇಶ ಪಡೆದು ಕೃಷಿ ಡಿಪ್ಲೊಮೊ ಕೋರ್ಸ್ಗಳನ್ನು ಈ ಹಿಂದಿನAತೆ ಪಡೆದುಕೊಳ್ಳಬಹುದು.
ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ನಡೆಸಲಾಗುತ್ತಿದ್ದ ಕನ್ನಡ ಕೃಷಿ ಡಿಪ್ಲೊಮಾ ಕೋರ್ಸ್ ಪ್ರಸಕ್ತ ವರ್ಷದಿಂದ ನಿಲ್ಲಿಸಲು ನಿರ್ಧರಿಸಲಾಗಿತ್ತು. ಈ ಭಾಗದ ರೈತರ ಮಕ್ಕಳ ಅನುಕೂಲಕ್ಕಾಗಿ 2012ರಲ್ಲಿ ಸಂಶೋಧನಾ ಕೇಂದ್ರದ ಆವರಣದಲ್ಲಿ ಕೃಷಿ ಡಿಪ್ಲೊಮಾ ಕೋರ್ಸ್ ಆರಂಭಿಸಲಾಗಿತ್ತು. ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಪ್ರತ್ಯೇಕವಾದ ಕಟ್ಟಡ ನಿರ್ಮಿಸಲಾಗಿತ್ತು. ಪ್ರತಿ ವರ್ಷ 50 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿತ್ತು. ಎಸ್ಸೆಸ್ಸೆಲ್ಸಿ ಪೂರೈಸಿದವರು ನೇರವಾಗಿ ಈ ಕೋರ್ಸ್ ಸೇರಲು ಅವಕಾಶ ಕಲ್ಪಿಸಲಾಗಿತ್ತು. ಕಳೆದ ಒಂದು ದಶಕದಿಂದ ಯಶಸ್ವಿಯಾಗಿ ಕೋರ್ಸ್ ನಡೆಸಿಕೊಂಡು ಬರಲಾಗಿತ್ತು. ಆದರೆ, 2023ರಲ್ಲಿ ಡಿಪ್ಲೊಮಾ ಕೋರ್ಸ್ ಬೋಧನೆಗೆ ಪ್ರತ್ಯೇಕ ಸಿಬ್ಬಂದಿ ಇರಲಿಲ್ಲವೆಂದು ಕೃಷಿ ಡಿಪ್ಲೊಮೊ ಕೋರ್ಸ್ ಸ್ಥಗಿತಗೊಳಿಸಲಾಗಿತ್ತು. ಈಗ ಪುನಃ ಕೃಷಿ ಡಿಪ್ಲೊಮೊಗೆ ಅವಕಾಶ ಮಾಡಿಕೊಟ್ಟಿರುವುದು ಸ್ಥಳೀಯ ರೈತರಿಗೆ ಅನುಕೂಲವಾಗಲಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೇಮಂತ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.