ಬೀದರ್

ಕುರುಬ ಸಮಾಜವನ್ನು ಎಸ್ಟಿಗೆ ಶಿಫಾರಸ್ಸು ಮಾಡಿರುವುದು ಸ್ವಾಗತಾರ್ಹ: ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್

ಬೀದರ್ (ಜು.21): ರಾಜ್ಯದ ಮೂರನೇ ಅತಿ ದೊಡ್ಡ ಸಮುದಾಯವಾದ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವಂತೆ ರಾಜ್ಯ ಸರ್ಕಾರ ದಿ.20ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವುದನ್ನು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಬಂಡೆಪ್ಪ ಖಾಶೆಂಪುರ್ ರವರು ಸ್ವಾಗತಿಸಿದ್ದಾರೆ.

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಬೇಕು ಎಂದು ಕುರುಬ ಸಮಾಜ ನಡೆಸಿದ ಹಕ್ಕೋತ್ತಾಯಗಳ ಹೋರಾಟಕ್ಕೆ ಸಿಕ್ಕ ಮೊದಲ ಜಯ ಇದಾಗಿದೆ. ಮೈಸೂರಿನ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸಂಶೋಧನಾ ಸಂಸ್ಥೆ ಈ ಸಂಬಂಧ ಸುದೀರ್ಘ ಅಧ್ಯಯನ ನಡೆಸಿ, ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಕುಲಶಾಸ್ತ್ರ ಅಧ್ಯಯನಕ್ಕೆ 2017ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯರವರು ಆದೇಶ ನೀಡಿದ್ದರು.

ಬಳಿಕ ಕಳೆದ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿರವರು ಇನ್ನೂ ಕೆಲವು ಜಿಲ್ಲೆಗಳಲ್ಲಿ ಅಧ್ಯಯನ ಬಾಕಿ ಇದ್ದ ಪರಿಣಾಮ ಅದನ್ನು ಪೂರ್ಣಗೊಳಿಸಿ ವರದಿ ನೀಡುವಂತೆ ಚುನಾವಣೆಗೂ ಮುನ್ನವೇ ಆದೇಶ ನೀಡಿದ್ದರು.

ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವಂತೆ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿರುವ ಕಾಗಿನೆಲೆ ಕನಕಗುರುಪೀಠದ ಶ್ರೀಗಳಾದ ಶ್ರೀ ಶ್ರೀ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿಗಳು, 2022 ಜನವರಿ 15 ರಂದು ಕಾಗಿನೆಲೆಯಿಂದ ಬೃಹತ್ ಮಟ್ಟದ ಪಾದಯಾತ್ರೆ ಹೋರಾಟ ಪ್ರಾರಂಭಿಸಿ ಅದೇ ವರ್ಷ ಫೆಬ್ರವರಿ 07ರಂದು ಬೆಂಗಳೂರಿನಲ್ಲಿ ಲಕ್ಷಾಂತರ ಜನ ಸಮಾಜದ ಬಂಧುಗಳ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಎಸ್ಟಿಗಾಗಿ ಸರ್ಕಾರವನ್ನು ಒತ್ತಾಯಿಸಿದರು.

ಇಷ್ಟೆಲ್ಲಾ ಹೋರಾಟಗಳ ಫಲವಾಗಿ ಇದೀಗ ಅಧ್ಯಯನದ ವರದಿಯನ್ನು ಈಗಿನ ಸರ್ಕಾರ ಮತ್ತು ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯರವರು ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯಕ್ಕೆ ಶಿಫಾರಸ್ಸು ಮಾಡಿರುವುದು ಸಂತಸದ ವಿಷಯವಾಗಿದೆ.

ಕುರುಬ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸುವಂತೆ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿರುವ ಸಮಾಜದ ಗುರುಗಳಿಗೆ, ಸಮಾಜದ ಸಂಘಟನೆಗಳ ಮುಖಂಡರಿಗೆ, ಹೋರಾಟಗಾರರಿಗೆ, ಕುರುಬ ಸಮಾಜಕ್ಕೆ ಮನ್ನಣೆ ನೀಡಿ ಸಮಾಜದ ಬೇಡಿಕೆಗೆ ಸ್ಪಂದಿಸಿದ ಅಂದಿನ ಮತ್ತು ಇಂದಿನ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯರವರಿಗೆ ಹಾಗೂ ತ್ವರಿತ ಗತಿಯಲ್ಲಿ ಅಧ್ಯಯನ ನಡೆಸುವಂತೆ ಸೂಚಿಸಿದ್ದ ಅಂದಿನ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿರವರು ಸೇರಿದಂತೆ ಹೋರಾಟದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಪಾಲ್ಗೊಂಡ ಸರ್ವರಿಗೂ ಹಾಗೂ ಈ ಮಟ್ಟದ ಬೆಳವಣಿಗೆಗೆ ಸಾಕ್ಷಿಯಾದ ಜನಪ್ರತಿನಿಧಿಗಳಿಗೂ ತುಂಬು ಹೃದಯದ ಧನ್ಯವಾದಗಳು.

ಸಮಾಜಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡು ಸಾಗುತ್ತಿರುವ ಸಮಾಜದ ಶ್ರೀಗಳಾದ ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳಿಗೆ ಮತ್ತು ಸಮಾಜದ ಸರ್ವ ಶ್ರೀಗಳಿಗೆ ಮತ್ತೊಮ್ಮೆ ಶತಕೋಟಿ ನಮನಗಳನ್ನು ಸಲ್ಲಿಸುತ್ತೇನೆಂದು ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪುರ್ ರವರು ಸಾಮಾಜಿಕ ಜಾಲತಾಣಗಳಲ್ಲಿ ಕೃತಜ್ಞತಾ ಸಂದೇಶ ಹಂಚಿಕೊಂಡಿದ್ದಾರೆ.

Ghantepatrike kannada daily news Paper

Leave a Reply

error: Content is protected !!