ಕಾಂಗ್ರೆಸ್ ಸರ್ಕಾರ ವಿರುದ್ಧ ತೀವ್ರ ವಾಗ್ದಾಳಿ ಬೈಕ್ಗೆ ಬೆಂಕಿ ಹಚ್ಚಿ ಬಿಜೆಪಿ ಆಕ್ರೋಶ
ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಖಂಡಿಸಿ ಸೋಮವಾರ ಬೀದರ್ನಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಬೈಕ್ ಶವಯಾತ್ರೆ ನಡೆಸಲಾಯಿತು. ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಪ್ರಮುಖರಾದ ಈಶ್ವರಸಿಂಗ್ ಠಾಕೂರ್, ಶಶಿಧರ ಹೊಸಳ್ಳಿ, ರಮೇಶ ಪಾಟೀಲ್ ಸೋಲಪುರ ಇತರರಿದ್ದರು.
ಬೀದರ್: ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಜಿಲ್ಲಾ ಬಿಜೆಪಿಯಿಂದ ಸೋಮವಾರ ಬೀದರ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಮಿತ್ರಪಕ್ಷ ಜೆಡಿಎಸ್ ಸಹ ಪ್ರತಿಭಟನೆಗೆ ಸಾಥ್ ನೀಡಿತ್ತು.
ನಗರದ ಡಾ.ಅಂಬೇಡ್ಕರ್ ವೃತ್ತ ಸಮೀಪದ ಪ್ರವಾಸಿ ಮಂದಿರದಿಂದ ಶಿವಾಜಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ವಾಹನವನ್ನು ಕೈಯಿಂದ ತಳ್ಳುತ್ತ ತರುವ ಮೂಲಕ ತೈಲ ಬೆಲೆ ಹೆಚ್ಚಿಸಿರುವ ಸರ್ಕಾರಕ್ಕೆ ಹಿಡಿಶಾಪ ಹಾಕಲಾಯಿತು. ಬೈಕ್ ಶವಯಾತ್ರೆ ಸಹ ನಡೆಸಿದ ಪ್ರತಿಭಟನಾಕಾರರು, ಬಳಿಕ ಇದಕ್ಕೆ ಡಾ.ಅಂಬೇಡ್ಕರ್ ವೃತ್ತದ ಬಳಿ ಬೆಂಕಿ ಹಚ್ಚುವ ಮೂಲಕ ರಾಜ್ಯ ಸರ್ಕಾರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು. ಮೆರವಣಿಗೆಯುದ್ದಕ್ಕೂ ರಾಜ್ಯ ಸರ್ಕಾರಕ್ಕೆ ಧಿಕ್ಕಾರ, ಸಿಎಂ ಸಿದ್ಧರಾಮಯ್ಯ ಅವರಿಗೆ ಧಿಕ್ಕಾರ, ಕಾಂಗ್ರೆಸ್ಗೆ ಧಿಕ್ಕಾರ ಘೋಷಣೆ ಮೊಳಗಿದವು.
ಶಿವಾಜಿ ವೃತ್ತದ ಹತ್ತಿರ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯ ಕಾರ್ಯದರ್ಶಿ, ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ರಾಜ್ಯ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳ ಜಾರಿಗಾಗಿ ಜನಸಾಮಾನ್ಯರ ಮೇಲೆ ಬೆಲೆಯೇರಿಕೆಯ ಬರೆ ಹಾಕುತ್ತಿದೆ. ನಿರಂತರ ಬೆಲೆ ಏರಿಕೆ ಮಾಡುತ್ತ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿರುವುದು ನೋಡಿದರೆ ರಾಜ್ಯ ಸರ್ಕಾರ ಆರ್ಥಿಕ ದಿವಾಳಿಯಾಗಿರುವುದು ಸ್ಪಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವು ಐದು ಗ್ಯಾರಂಟಿ ಯೋಜನೆ ಜಾರಿಗೆ ಅನುದಾನ ಕ್ರೋಢೀಕರಿಸುವಲ್ಲಿ ಹೆಣಗಾಡುತ್ತಿದೆ. ಕಳೆದೊಂದು ವರ್ಷದಿಂದ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳೇ ನಿಂತಿವೆ. ಸ್ವತಃ ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಸಿದ್ಧರಾಮಯ್ಯ ಅವರು ಹದಿನೈದಕ್ಕೂ ಹೆಚ್ಚು ಬಜೆಟ್ ಮಂಡಿಸಿದ್ದು, ರಾಜ್ಯದ ಪ್ರಗತಿ ಮಾಡುತ್ತಾರೆ ಎಂಬ ಜನರ ನಿರೀಕ್ಷೆಗಳೆಲ್ಲ ಒಂದೇ ವರ್ಷದಲ್ಲಿ ಠುಸ್ ಆಗಿವೆ. ರಾಜ್ಯದ ಜನರ ಶೋಷಣೆ, ಸುಲಿಗೆಗೆ ಇಳಿದಿರುವ ಈ ಸರ್ಕಾರವನ್ನು ಕಿತ್ತೊಗೆಯಬೇಕಾಗಿದೆ. ಇದಕ್ಕೆ ಈಗ ಕಾಲ ಸಹ ಸÀನ್ನಿಹಿತವಾಗಿದೆ ಎಂದು ಹೇಳಿದರು.
ಬಿಜೆಪಿ ನಗರಾಧ್ಯಕ್ಷ ಶಶಿಧರ ಹೊಸಳ್ಳಿ ಮಾತನಾಡಿ, ಜನರ ಜೇಬಿಗೆ ಕತ್ತರಿ ಹಾಕುತ್ತಿರುವ ರಾಜ್ಯ ಸರ್ಕಾರ ಹಗಲುದರೋಡೆ, ಸುಲಿಗೆಗೆ ಇಳಿದಿದೆ. ಗ್ಯಾರಂಟಿ ಯೋಜನೆ ಜಾರಿಯ ಹೆಸರಿನಲ್ಲಿ ಮನಸ್ಸಿಗೆ ಬಂದಂತೆ ಕರ ಹಾಕುತ್ತ ಜನಸಾಮಾನ್ಯರ ಮೇಲೆ ಬರೆ ಎಳೆಯುತ್ತಿದೆ. ಐದು ಗ್ಯಾರಂಟಿ ಕೊಟ್ಟು ಆರು ತರಹದ ಬೆಲೆಯೇರಿಸಿ ಇದೇ ಹಣ ಜನರಿಂದ ವಸೂಲಿ ಮಾಡುತ್ತಿದೆ. ಯಾವ ಪುರುಷಾರ್ಥಕ್ಕೆ ಸರ್ಕಾರ ನಡೆಸಲಾಗುತ್ತಿದೆ? ರಾಜ್ಯವನ್ನೇ ಆರ್ಥಿಕವಾಗಿ ಅಧೋಗತಿಗೆ ತಂದು ನಿಲ್ಲಿಸಿದ ಶ್ರೇಯ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ಸಲ್ಲುತ್ತದೆ ಎಂದು ಕಿಡಿಕಾರಿದರು.
ಬಿಜೆಪಿ ವಿಭಾಗ ಸಹ ಉಸ್ತುವಾರಿ ಈಶ್ವರಸಿಂಗ್ ಠಾಕೂರ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಕೆಲಸಗಳು ಆಗುತ್ತಿಲ್ಲ. ಆದರೆ ಜನರ ಮೇಲೆ ಬೆಲೆ ಹೆಚ್ಚಳದ ಹೊರೆ ಹಾಕಲಾಗುತ್ತಿದೆ. ಸಾಲದ ಮಿತಿ 2 ಲಕ್ಷ ಕೋಟಿಗಳಿಗೆ ಏರಿದೆ. ಹಾಗಾದರೆ ಹಣ ಎಲ್ಲಿಗೆ ಹೋಗುತ್ತಿದೆ? ಸರ್ಕಾರ ರಾಜ್ಯದ ಜನರಿಂದ ವಸೂಲಿ ಮಾಡುತ್ತಿರುವ ಹಣದಿಂದ ಕಾಂಗ್ರೆಸ್ ಹೈಕಮಾಂಡ್ ಜೇಬು ತುಂಬುತ್ತಿರುವ ಶಂಕೆ ವ್ಯಕ್ತವಾಗುತ್ತಿದೆ. ಸರ್ಕಾರ ಆರ್ಥಿಕ ಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.
ಜೆಡಿಎಸ್ ಜಿಲ್ಲಾ ಅಧ್ಯಕ್ಷ ರಮೇಶ ಪಾಟೀಲ್ ಸೋಲಪುರ, ಪ್ರಮುಖರಾದ ಗುರುನಾಥ ಜ್ಯಾಂತಿಕರ್, ಪೀರಪ್ಪ ಯರನಳ್ಳಿ, ಕಿರಣ್ ಪಾಟೀಲ್ ಹಕ್ಯಾಳ್, ಮಾಧವ ಹಸೂರೆ, ಅರಹಂತ ಸಾವಳೆ, ಸದಾನಂದ ಜೋಶಿ, ಅಶೋಕ ಹೊಕ್ರಾಣೆ, ರಾಜೇಂದ್ರ ಪೂಜಾರಿ, ಸುರೇಶ ಮಾಶೆಟ್ಟಿ, ರಾಮಶೆಟ್ಟಿ ಪನ್ನಾಳೆ, ವೀರಣ್ಣಾ ಕಾರಬಾರಿ, ಬಸವರಾಜ ಪವಾರ್, ಸಂಜುಕುಮಾರ ಜ್ಯಾಂತೆ, ಜಗನ್ನಾಥ ಸಿರಕಟನಳ್ಳಿ, ವೀರು ದಿಗ್ವಾಲ್, ಜಗನ್ನಾಥ ಜಮಾದಾರ, ಸಂಗಮೇಶ ನಾಸಿಗಾರ, ಮಹೇಶ್ವರ ಸ್ವಾಮಿ, ಚಂದ್ರಶೇಖರ ಗಾದಾ, ಸುರೇಶ ಸಜ್ಜನ್, ಶಿವಕುಮಾರ ಸ್ವಾಮಿ, ಮಾಣಿಕಪ್ಪ ಖಾಶೆಂಪುರ, ಪ್ರಶಾಂತ ಸಿಂದೋಲ, ಗಣೇಶ ಭೋಸ್ಲೆ, ಮಹೇಶ ಪಾಲಂ, ನಿತಿನ್ ಕರ್ಪೂರ, ಸಚ್ಚಿದಾನಂದ ಚಿದ್ರೆ, ಪ್ರಶಾಂತ ವಿಶ್ವಕರ್ಮ, ಮಹ್ಮದ್ ಅಸಾದೋದ್ದಿನ್, ಐಲಿನ್ ಜಾನ್ ಮಠಪತಿ ಇತರರಿದ್ದರು.
ಜನಸಾಮಾನ್ಯರ ಜೇಬಿಗೆ ಖಟಾಖಟ್ ಕತ್ತರಿ!
ರಾಜ್ಯ ಸರ್ಕಾರ ಖಟಾಖಟ್ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಒಂದೊಂದಾಗಿ ಬೆಲೆ ಹೆಚ್ಚಳ ಮಾಡುತ್ತಿದ್ದು, ಫಟಾಫಟ್ ಜೇಬಿನಿಂದ ಹಣ ತೆಗೆದ ಖಟಾಖಟ್ ಜೇಬು ಖಾಲಿ ಮಾಡಿಕೊಳ್ಳಬೇಕು. ಇದೇ ಕಾಂಗ್ರೆಸ್ ನೀತಿಯಾಗಿದೆ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಕಿಡಿಕಾರಿದರು. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 3 ರೂ. ಹಾಗೂ ಡೀಸೆಲ್ ಬೆಲೆ 3.50 ರೂ.ಹೆಚ್ಚಿಸಿದ್ದರಿಂದ ಮುಂದಿನ ದಿನಗಳಲ್ಲಿ ಇದು ಗೃಹಬಳಕೆ ಸೇರಿದಂತೆ ಅನೇಕ ವಸ್ತುಗಳ ಬೆಲೆಯೇರಿಕೆಗೆ ಕಾರಣವಾಗಲಿದ್ದು, ಬಡ ಹಾಗೂ ಮಧ್ಯಮ ವರ್ಗದ ಜನರು ಬದುಕು ನಡೆಸುವುದೇ ದುಸ್ತರವಾಗಲಿದೆ. ಈಗಾಗಲೇ ಸರ್ಕಾರ ವಿದ್ಯುತ್ ಬಿಲ್ ಗಣನೀಯ ಏರಿಸಿದೆ. ನೋಂದಣಿ ಶುಲ್ಕ ದುಪ್ಪಟ್ಟು ಮಾಡಿದೆ. ಬಾಂಡ್ಗಳ ಬೆಲೆ ನಾಲ್ಕೈದು ಪಟ್ಟು ಜಾಸ್ತಿ ಮಾಡಿದೆ. ಬಿತ್ತನೆ ಬೀಜಗಳ ದರ ಡಬಲ್ ಮಾಡಿದೆ. ಮದ್ಯದ ದರ ಎರಡ್ಮೂರು ಸಲ ಹೆಚ್ಚಿಸಿದೆ. ನೀರಿನ ಕರ ಜಾಸ್ತಿ ಮಾಡಿದೆ. ಬಸ್ ಪ್ರಯಾಣ ದರ ಹೆಚ್ಚಿಸಲು, ಇಂಜಿನಿಯರಿಂಗ್ ಶುಲ್ಕ ಹೆಚ್ಚಳಕ್ಕೆ ಮುಂದಾಗಿದೆ. ಹತ್ತಾರು ರೀತಿಯಲ್ಲಿ ಬೆಲೆ ಹೆಚ್ಚಳ ಮಾಡುವ ಮೂಲಕ ಸರ್ಕಾರ ಜನವಿರೋಧಿ, ರೈತ ವಿರೋಧಿ ನೀತಿ ಪ್ರದರ್ಶಿಸಿದೆ. ಸರ್ಕಾರ ಆಡಳಿತದಲ್ಲಿ ಮುಂದುವರಿಯುವ ನೈತಿಕತೆಯೇ ಕಳೆದುಕೊಂಡಿದೆ. ಸರ್ಕಾರ ತೈಲ ಬೆಲೆ ಹೆಚ್ಚಳ ಆದೇಶವನ್ನು ವಾಪಸ್ ಪಡೆಯುವವರೆಗೆ ಪಕ್ಷ ಹೋರಾಟ ನಡೆಸಲಿದೆ. ತಾಲೂಕು, ಹೋಬಳಿ ಮಟ್ಟಕ್ಕೂ ಹೋರಾಟ ಒಯ್ಯಲಾಗುವುದು ಎಂದು ಹೇಳಿದರು.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಜಾರಿಗೂ ಮುನ್ನ ಇದರ ಬಗ್ಗೆ ಪೂರ್ವಾಪರ ವಿಚಾರ ಮಾಡಿಲ್ಲ. ಕೇವಲ ಅಧಿಕಾರಕ್ಕೇರುವ ಲೆಕ್ಕಾಚಾರದಲ್ಲಿ ಜನರಿಗೆ ಮೋಸ ಮಾಡಿದೆ. ಕಾಂಗ್ರೆಸ್ ಸರ್ಕಾರದ ಕರಾಳಮುಖಗಳು ಒಂದೊಂದಾಗಿ ಹೊರಬರುತ್ತಿವೆ.ಆಡಳಿತಕ್ಕೇರಿದÀ ಒಂದೇ ವರ್ಷದಲ್ಲಿ ರಾಜ್ಯದ ವ್ಯವಸ್ಥೆಯೇ ಹಾಳಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಜನಸಾಮಾನ್ಯರ ಬದುಕಿನ ಜೊತೆಯಲ್ಲಿ ಸರ್ಕಾರ ಚೆಲ್ಲಾಟವಾಡುತ್ತಿದೆ.
-ಡಾ.ಶೈಲೇಂದ್ರ ಬೆಲ್ದಾಳೆ
ಬೀದರ್ ದಕ್ಷಿಣ ಶಾಸಕ
ವರ್ಷದ ಹಿಂದೆ ತೈಲ ಬೆಲೆ ಏರಿಕೆ ಖಂಡಿಸಿ ಸ್ಕೂಟರ್ ಶವಯಾತ್ರೆ ಮಾಡಿದ್ದ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಜನರಿಗೆ ಈಗ ಉತ್ತರ ಕೊಡಬೇಕು. ಸತತ ಬೆಲೆ ಏರಿಕೆ ಮಾಡುತ್ತಿರುವುದು ನೋಡಿದರೆ ಈ ಸರ್ಕಾರ ಸಂಪೂರ್ಣ ಆರ್ಥಿಕ ದಿವಾಳಿ ಆಗಿರುವುದು ಸಾಬೀತಾಗುತ್ತಿದೆ.
-ಶಶಿಧರ ಹೊಸಳ್ಳಿ
ಬಿಜೆಪಿ ನಗರಾಧ್ಯಕ್ಷ