ಬೀದರ್

ಕವಿತೆಗಳು ಮಲಗಿದ್ದವರನ್ನು ಬಡಿದೆಬ್ಬಿಸುವಂತಿರಲಿ – ಪ್ರೊ. ಬಡಿಗೇರ್

ಬೀದರ: ಯುವ ಪೀಳಿಗೆ ಕವಿತೆಗಳನ್ನು ಜವಾಬ್ದಾರಿಯುತವಾಗಿ ರಚನೆ ಮಾಡಬೇಕು. ಸಮಾಜದ ಆಗುಹೋಗುಗಳ ಮೇಲೆ ಬೆಳಕು ಚೆಲ್ಲುವಂತಿರಬೇಕು. ಬಡವರ ಹಸಿದ ಹೊಟ್ಟೆ ತುಂಬುವಂತಿರಬೇಕು. ಯುವಕರಲ್ಲಿ ದೇಶಭಕ್ತಿ ಕುರಿತು ನವಚೈತನ್ಯದ ಚಿಲುಮೆ ಪಸರಿಸುವಂತಿರಬೇಕೆಂದು ಸಿದ್ಧಾರ್ಥ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ಗೋಪಾಲ ಬಡಿಗೇರ್ ತಿಳಿಸಿದರು.
ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ವತಿಯಿಂದ ಇತ್ತಿಚಿಗೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಅಧ್ಯಯನ ಕೇಂದ್ರದಲ್ಲಿ ನಡೆದ ಯುವ ಕವಿಗೋಷ್ಟಿಯನ್ನು ಉದ್ಘಾಟಿಸಿ ಮಾತನಾಡಿದರು. ಕವಿ ಎಂದರೆ ವಿರೋಧ ಪಕ್ಷದ ನಾಯಕರಂತೆ ಕೆಲಸ ಮಾಡಬೇಕು. ಸರ್ಕಾರದ, ಸಮಾಜದ ಮತ್ತು ಇನ್ನಿತರ ಕ್ಷೇತ್ರಗಳ ಓರೆಕೋರೆಗಳನ್ನು ತಮ್ಮ ಕಥೆ, ಕಾದಂಬರಿ ಮತ್ತು ಕವಿತೆಗಳ ಮುಖಾಂತರ ತಿದ್ದುತ್ತಿರಬೇಕು. ಅನುಕೂಲಸಿಂಧು ವಾತಾವರಣ ನಿರ್ಮಾಣ ಮಾಡಿಕೊಂಡು ತಮ್ಮ ಬರಹಗಳ ಮೂಲಕ ಹಣ ಸಂಪಾದನೆ ಮಾಡುವಂತಿರಬಾರದು. ಕವಿಯಾದವನು ಸ್ವಾರ್ಥ ಸಾಧಿಸಬಾರದು ಎಂದು ಬಡಿಗೇರ್ ಮಾರ್ಮಿಕವಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಅಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ ಮಾತನಾಡಿ ರವಿ ಕಾಣದ್ದನ್ನು ಕವಿ ಕಂಡ ಎನ್ನುವ ಮಾತಿನಂತೆ ಕವಿಗೆ ಕಲ್ಪನಾಶಕ್ತಿ, ಅದನ್ನು ಸಾಕಾರಗೊಳಿಸುವ ಸಾಮಥ್ರ್ಯ ಇರುತ್ತದೆ. ಕವಿಯಾದವನು ಸಮಸ್ಯೆಗಳಿಗೆ ಸಮಾಧಾನ ಹುಡುಕುವಂತಿರಬೇಕು. ಬದಲಾಗಿ ಸಮಸ್ಯೆಯ ವಿಧ, ನರಳಾಟ, ಹೊರಳಾಟದ ವಿವರಣೆ ಮಾಡಕೂಡದು. ಕವಿಯಾದವನು ತನ್ನ ಕವಿತೆಗಳನ್ನು ಮತ್ತು ಎಲ್ಲಾ ರೀತಿಯ ಬರಹಗಳಿಗೆ ವಿಮರ್ಶೆಗೆ ಒಳಪಡಿಸಬೇಕು. ಹೀಗಿದ್ದಾಗ ಮಾತ್ರ ಅದು ಗಟ್ಟಿ ಸಾಹಿತ್ಯವಾಗಲು ಸಾಧ್ಯ ಎಂದು ತಿಳಿಸಿದರು.
ಕವಿಗೋಷ್ಠಿಯಲ್ಲಿ ಯುವ ಕವಿಗಳಾದ ವಿದ್ಯಾಸಾಗರ, ಸಂತೋಷ, ಮಹಾರುದ್ರ ಡಾಕುಳಗೆ, ಅಂಜಲಿ, ಅಮರ ಶಿವರಾಜ, ಅಶ್ವಿನಿ, ಪ್ರಿಯಂಕಾ, ಪುಷ್ಪಾ, ವೈಷ್ಣವಿ, ಪವನ, ಸಂಗೀತಾ, ರವಿದಾಸ ಕಾಂಬಳೆ, ಸೇರಿದಂತೆ ಇನ್ನಿತರರು ಪಾಲ್ಗೊಂಡು ತಮ್ಮ ಕವನ ವಾಚನ ಮಾಡಿದರು. ಎಸ್.ಬಿ.ಕುಚಬಾಳ ದೇಶಭಕ್ತಿಗೀತೆಗಳನ್ನು ನಡೆಸಿಕೊಟ್ಟರು. ಪ್ರಕಾಶ ಕುಚಬಾಳ ಪ್ರಾರ್ಥಿಸಿದರು. ಡಾ. ರಾಜಕುಮಾರ ಹೆಬ್ಬಾಳೆ ನಿರೂಪಿಸಿದರು. ಡಾ. ಸುನಿತಾ ಕೂಡ್ಲಿಕರ್ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರೊ. ಮಾನಾ ಸಂಗೀತಾ, ಡಾ. ಸಾವಿತ್ರಿಬಾಯಿ ಹೆಬ್ಬಾಳೆ, ಶಿವಶರಣಪ್ಪ ಗಣೇಶಪುರ, ರವಿಕಾಂತ ಬಿರಾದಾರ, ಪವನ ನಾಟೇಕಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Ghantepatrike kannada daily news Paper

Leave a Reply

error: Content is protected !!