ಕರ್ನಾಟಕ ಕಾಲೇಜು: 54 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಾಧಕರಿಗೆ ನಗದು ಬಹುಮಾನ ವಿತರಣೆ
ಬೀದರ್: ಇಲ್ಲಿಯ ಕರ್ನಾಟಕ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ನಡೆದ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು.
ಕಲಾ ವಿಭಾಗದಲ್ಲಿ ಜಿಲ್ಲೆಗೆ ಮೊದಲ ಸ್ಥಾನ ಪಡೆದ ಐಶ್ವರ್ಯ ರಮೇಶ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಕಾಲೇಜಿಗೆ ಟಾಪರ್ ಆಗಿ ಹೊರ ಹೊಮ್ಮಿದ ಸುಮಾ ಪಾಟೀಲ ಮತ್ತು ತ್ರಿವೇಣಿ ಅವರಿಗೆ ತಲಾ ರೂ. 5 ಸಾವಿರ ನಗದು ಬಹುಮಾನ ಪ್ರದಾನ ಮಾಡಲಾಯಿತು.
ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಅಗ್ರಶ್ರೇಣಿಯಲ್ಲಿ ತೇರ್ಗಡೆಯಾದ ಒಟ್ಟು 54 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ಉಪನ್ಯಾಸಕರಾದ ಗಣೇಶ ಥೋರೆ, ಮಹೇಶ ಬಿರಾದಾರ, ರಾಜೇಶ್ವರಿ ಪಾಟೀಲ, ಜ್ಯೋತಿ ಪಾಟೀಲ, ಡಾ. ಸುನೀಲ್ ಮೂಲಗೆ, ನಿಲೇಶ್ ರತ್ನಾಕರ್ ಅವರನ್ನೂ ಸತ್ಕರಿಸಲಾಯಿತು.
ಬಡತನ ಅಡ್ಡಿಯಾಗದು: ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ. ಕಠಿಣ ಪರಿಶ್ರಮದಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಸಮಾರಂಭವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ್ ದಿಲೀಪ್ ಬದೋಲೆ ಹೇಳಿದರು.
ವಿದ್ಯಾರ್ಥಿಗಳು ಸಣ್ಣ ಗುರಿ ಹೊಂದದೆ, ಉದಾತ್ತ ಗುರಿ ಹೊಂದುವ ಮೂಲಕ ಎತ್ತರದ ಸಾಧನೆ ಮಾಡಬೇಕು ಎಂದು ಸಲಹೆ ಮಾಡಿದರು.
ಪ್ರಸ್ತುತ ಸ್ಪರ್ಧಾತ್ಮಕ ಯುಗ ಇದೆ. ಛಲವಿದ್ದರೆ ಮಾತ್ರ ಅಪೇಕ್ಷೆ ಪಟ್ಟಂತೆ ಫಲಿತಾಂಶ ಪಡೆಯಲು ಸಾಧ್ಯವಿದೆ ಎಂದು ಶಾಲಾ ಶಿಕ್ಷಣ(ಪದವಿ ಪೂರ್ವ) ಇಲಾಖೆಯ ಉಪ ನಿರ್ದೇಶಕ ಚಂದ್ರಕಾಂತ ಶಹಾಬಾದಕರ್ ಹೇಳಿದರು.
ಕೆಆರ್ಇ ಸಂಸ್ಥೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ. ವಿವಿಧ ಯೋಜನೆಗಳ ಮೂಲಕ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗುತ್ತಿದೆ ಎಂದು ಕೆಆರ್ಇ ಸಂಸ್ಥೆಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ತಿಳಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಬಿ.ಜಿ. ಶೆಟಕಾರ್, ಕರ್ನಾಟಕ ಪದವಿ ಕಾಲೇಜಿನ ಉಪ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಹಂಗರಗಿ ಮಾತನಾಡಿದರು.
ಸಂಸ್ಥೆಯ ಕಾರ್ಯದರ್ಶಿ ಸಿದ್ರಾಮ ಪಾರಾ, ಜಂಟಿ ಕಾರ್ಯದರ್ಶಿ ಸತೀಶ್ ಪಾಟೀಲ, ಆಡಳಿತ ಮಂಡಳಿ ಸದಸ್ಯರಾದ ಮಹೇಶಕುಮಾರ ಭದಭದೆ, ರಾಜಶೇಖರ ತಾಂಡೂರ, ಶಾಂತಕುಮಾರ ಚಂದಾ, ಚಂದ್ರಕಾಂತ ಶೆಟಕಾರ್, ಮಲ್ಲಿಕಾರ್ಜುನ ಹತ್ತಿ, ವೀರಭದ್ರಪ್ಪ ಬುಯ್ಯಾ, ವಿಜಯಕುಮಾರ ಬಿ. ಗುನ್ನಳ್ಳಿ, ರವಿ ಹಾಲಹಳ್ಳಿ, ಶ್ರೀನಾಥ ನಾಗೂರೆ, ಆಡಳಿತಾಧಿಕಾರಿ ಪ್ರೊ. ಎಚ್.ಎಸ್. ಪಾಟೀಲ, ವಿಶೇಷಾಧಿಕಾರಿ ಪ್ರೊ. ಎಸ್.ಕೆ. ಸಾತನೂರು ಇದ್ದರು.
ಪ್ರಾಚಾರ್ಯ ಡಾ. ಬಸವರಾಜ ಬಲ್ಲೂರ ಸ್ವಾಗತಿಸಿದರು. ಸಚಿನ್ ವಿಶ್ವಕರ್ಮ ನಿರೂಪಿಸಿದರು. ಗಣೇಶ ಥೋರೆ ವಂದಿಸಿದರು.
ಮಹಡಿ ನಿರ್ಮಾಣಕ್ಕೆ ಪೂಜೆ: ಕಾಲೇಜಿನ ಮೂರನೇ ಮಹಡಿ ನಿರ್ಮಾಣದ ಪೂಜೆ ಕಾರ್ಯಕ್ರಮ ಕೆ.ಆರ್.ಇ. ನ್ಯಾಸ ಅಧ್ಯಕ್ಷ ಡಾ. ಬಸವರಾಜ ಪಾಟೀಲ ಅಷ್ಟೂರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನ್ಯಾಸ ಕಾರ್ಯದರ್ಶಿ ಮಡಿವಾಳಪ್ಪ ಗಂಗಶೆಟ್ಟಿ, ಕೆಆರ್ಇ ಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳು ಭಾಗವಹಿಸಿದ್ದರು.