ಕನ್ನಡ ಕಟ್ಟುವ ಕಾರ್ಯ ಬಹುಮುಖಿಯಾಗಲಿ: ಪ್ರೊ. ಬಿಳಿಮಲೆ
ಬೀದರ್:ಅನ್ಯ ಭಾಷೆಗಳಿಗೆ ಹೋಲಿಸಿದ್ದಲ್ಲಿ ಬೆಳವಣಿಗೆಯ ದರ ಅತೀ ಕಡಿಮೆ ಇರುವ ಕನ್ನಡವನ್ನು ಕಟ್ಟಿ ಬೆಳೆಸುವ ಕಾರ್ಯ ಬಹುಮುಖಿಯಾಗಿ ನಡೆಯಬೇಕಾದ ಅಗತ್ಯವಿದೆ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಇಲ್ಲಿ ಪ್ರತಿಪಾದಿಸಿದರು.
ನಗರದ ಹೆಬ್ಬಾಳೆ ಕನ್ವೇನ್ಷನ್ ಹಾಲ್‌ನಲ್ಲಿ ಭಾನುವಾರ ಪ್ರೊ. ಜಗನ್ನಾಥ ಹೆಬ್ಬಾಳೆ ಅವರ ಷಷ್ಠö್ಯಬ್ದಿ ನಿಮಿತ್ತ ನಡೆದ ಅಭಿನಂದನಾ ಕೃತಿ ಧರಿಯ ಸಿರಿ ಲೋಕಾರ್ಪಣೆ ಸಮಾರಂಭದಲ್ಲಿ ಕೃತಿ ಬಿಡುಗಡೆ ಮಾಡಿ, ಮಾತನಾಡಿದರು.
ಬೋಧನೆ, ಸಂಶೋಧನೆ, ಸಾಹಿತ್ಯರಚನೆ, ಕನ್ನಡಪರ ಕಾರ್ಯಕ್ರಮ, ಸಾಹಿತ್ಯ ಸಮ್ಮೇಳನಗಳ ಜೊತೆಗೆ ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಪ್ರೊ. ಜಗನ್ನಾಥ ಹೆಬ್ಬಾಳೆ ಅವರು ಕನ್ನಡವನ್ನು ಕಟ್ಟಿ ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ. ಜಿಲ್ಲೆಗೊಬ್ಬ, ತಾಲೂಕಿಗೊಬ್ಬ ಹೆಬ್ಬಾಳೆ ಅವರಂತಹ ಬಹುಮುಖಿ ಸಾಧಕರಿದ್ದರೆ ಕನ್ನಡದ ಬೆಳವಣಿಗೆಯ ವೇಗ ಹೆಚ್ಚಬಲ್ಲದು ಎಂದು ಪ್ರೊ. ಬಿಳಿಮಲೆ ಹೇಳಿದರು.
ಜನಗಣತಿಯಲ್ಲಿನ ಅಂಶಗಳ ಪ್ರಕಾರ ಹಿಂದಿ ಭಾಷೆಯ ಬೆಳವಣಿಗೆಯ ವೇಗ ಶೇ. 60 ರಷ್ಟಿದೆ. ಆದರೆ, ಕನ್ನಡದ ಬೆಳವಣಿಗೆಯ ವೇಗ ಬರೀ ಶೇ. 3.73 ರಷ್ಟಿದೆ. ಹಿಂದಿ ಪುರೋಗಾಮಿಯಾಗಿದೆ. ಕನ್ನಡ ಪತನಮುಖಿಯಾಗಿದೆ ಎಂದು ಪ್ರೊ. ಬಿಳಿಮಲೆ ವಿಷಾದಿಸಿದರು.
ಪ್ರೊ. ಹೆಬ್ಬಾಳೆ ಅವರು ಕನ್ನಡ ಪ್ರಾಧ್ಯಾಪಕರಾಗಿ ಬರೀ ಪಾಠ ಪ್ರವಚನಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಂಡಿಲ್ಲ. ಕನ್ನಡ ಕಾರ್ಯಕ್ರಮ, ಸಾಹಿತ್ಯ ಸಮ್ಮೇಳನ, ವಿಚಾರ ಸಂಕಿರಣ, ಸಾಹಿತಿಗಳ ಸಂವಾದ ಮುಂತಾದವುಗಳ ಮೂಲಕ ಕಲೆ, ಸಾಹಿತ್ಯ, ಸಂಸ್ಕೃತಿ ಬೆಳೆಸುವ ಮಹತ್ವದ ಕಾರ್ಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಅಭಿನಂದನಾ ಸಮಾರಂಭಕ್ಕೆ ವಿಶೇಷ ಮಹತ್ವವಿದೆ ಎಂದು ಹೇಳಿದರು.
ಪ್ರೊ. ಹೆಬ್ಬಾಳೆ ಅವರು ಗಡಿ ಜಿಲ್ಲೆಯಲ್ಲಿ ಕನ್ನಡ ಕಟ್ಟುವ ಕೆಲಸವನ್ನು ತಪಸ್ಸಿನ ರೀತಿಯಲ್ಲಿ ಮಾಡುತ್ತಿರುವುದರಿಂದ ಅವರ ಷಷ್ಠö್ಯಬ್ದಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಖುಷಿಯಾಗುತ್ತಿದೆ ಎಂದು ಪ್ರೊ. ಬಿಳಿಮಲೆ ಹೇಳಿದರು.
ಸಮಾರಂಭವನ್ನು ಉದ್ಘಾಟಿಸಿದ ಸಂಸದ ಸಾಗರ್ ಖಂಡ್ರೆ ಮಾತನಾಡಿ, ಪ್ರೊ. ಹೆಬ್ಬಾಳೆ ಅವರ ಸಾಧನೆಯನ್ನು ಕೊಂಡಾಡಿದರು. ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕಾರ್ಯದಲ್ಲಿ ತೊಡಗಿರುವ ಹೆಬ್ಬಾಳೆ ಅವರ ಜೀವನ ಮಾದರಿಯಾಗಿದೆ. ಯುವಕರು ಹೆಬ್ಬಾಳೆ ಅವರ ಜೀವನ, ಸಾಧನೆ ತಿಳಿದುಕೊಂಡು ಪ್ರೇರಣೆ ಪಡೆಯಲು `ಧರಿಯ ಸಿರಿ’ ಅಭಿನಂದನಾ ಕೃತಿಯು ನೆರವಾಗಲಿದೆ ಎಂದು ಸಂಸದರು ಹೇಳಿದರು.
ಪೂಜ್ಯ ಡಾ.ಗಂಗಾAಬಿಕೆ ಅಕ್ಕ, ಬೀದರ ವಿವಿ ಕುಲಪತಿ ಪ್ರೊ. ಬಿ.ಎಸ್.ಬಿರಾದಾರ್, ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್, ಕಲಬುರಗಿ ಕೇಂದ್ರೀಯ ವಿವಿಯ ಭಾಷಾ ನಿಕಾಯದ ಡೀನ್ ಪ್ರೊ. ವಿಕ್ರಮ ವಿಸಾಜಿ, ಡಾ. ಸವಿತ್ರಿ ಹೆಬ್ಬಾಳೆ, ಅಪ್ಪರಾವ್ ಗುನ್ನಳ್ಳಿ, ಶಿವರಾಜ ಸೂರಿ, ಉದ್ಯಮಿ ಚಂದ್ರಶೇಖರ ಹೆಬ್ಬಾಳೆ, `ಧರಿಯ ಸಿರಿ’ ಪ್ರಧಾನ ಸಂಪಾದಕ ಡಾ. ಕಲ್ಯಾಣರಾವ್ ಪಾಟೀಲ್, ಪ್ರೊ. ಶಂಭುಲಿAಗ ಕಾಮಣ್ಣ, ಡಾ. ಅಶೋಕ ಕೋರೆ, ಡಾ.ಸುನೀತಾ ಕೂಡಿಕಲ್, ಡಾ. ಮಹಾನಂದಾ ಮಡಕಿ, ಡಾ. ರಾಜಕುಮಾರ ಹೆಬ್ಬಾಳೆ ಮತ್ತಿತರ ಗಣ್ಯರು, ಹೆಬ್ಬಾಳೆ ಪರಿವಾರದ ಆಪ್ತರು, ಸ್ನೇಹಿತರು ಪಾಲ್ಗೊಂಡಿದ್ದರು. ಬುಡಾ ಅದ್ಯಕ್ಷ ಬಸವರಾಜ ಜಾಬಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಹಾರುದ್ರ ಡಾಕುಳಗಿ ನಿರೂಪಿಸಿದರು. ಡಾ. ಸಂಜೀವಕುಮಾರ ಜುಮ್ಮಾ ಹೆಬ್ಬಾಳೆ ಅವರನ್ನು ಕುರಿತು ಮಾತನಾಡಿದರು. ಡಾ. ಮಹಾದೇವಿ ಹೆಬ್ಬಾಳೆ ಸ್ವಾಗತಿಸಿದರು. ಡಾ. ರಾಜಕುಮಾರ ಹೆಬ್ಬಾಳೆ ವಂದಿಸಿದರು.