ಕಣ್ಣಿನ ಜ್ವರ ಕುರಿತು ಜಾಗೃತಿ ಕಾರ್ಯಕ್ರಮ
ಬೀದರ ತಾಲ್ಲೂಕಿನ ಆಣದೂರ ಗ್ರಾಮದ ಸರ್ವಜ್ಞ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಗ್ರಾಮ ವಿಕಾಸ ಟ್ರಸ್ಟ್ (ರಿ), ಆಣದೂರ ವತಿಯಿಂದ ಶಾಲಾ ಮಕ್ಕಳಿಗಾಗಿ ‘ಕಣ್ಣಿನ ಜ್ವರ’ (ಕಂಜಕ್ವಿ ವೈಟಿಸ್) ರೋಗದ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಆಣದೂರ ಗ್ರಾಮ ಪಂಚಾಯತಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಶ್ರೀನಿವಾಸರೆಡ್ಡಿ ನರಸಾರೆಡ್ಡಿ ಅವರು ಪ್ರಕೃಪತಿಯಲ್ಲಾಗುವ ವೈಪರಿತ್ಯದಿಂದಾಗಿ ದೇಶದ ಹಲವೆಡೆ ಅನೇಕ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಇತ್ತೀಚೆಗೆ ಕಣ್ಣಿನ ಜ್ವರ ಹಲವೆಡೆ ಉಲ್ಬಣಗೊಂಡಿದೆ. ಈ ರೋಗ ಬಹಳ ವೇಗವಾಗಿ ಹರಡುತ್ತಿರುವುದರಿಂದ ಜನಸಾಮಾನ್ಯರು ಆತಂಕಕಿಡಾಗಿದ್ದಾರೆ. ಆತಂಕ ಪಡುವುದಕಿಂತ ಮುಂಜಾಗೃತಿ ಕ್ರಮ ವಹಿಸಬೇಕೆಂದು ಹೇಳಿರುವರು.
ಈ ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿಯಾಗಿ ಭಾಗವಹಿಸಿದ ಗ್ರಾ.ಪಂ. ಪಿ.ಡಿ.ಓ. ಶ್ರೀ ಮಲ್ಲಿಕಾರ್ಜುನ ಡೋಣೆ ಅವರು ಕಣ್ಣಿನ ಜ್ವರ ಕಣ್ಣು ಬೇನೆಯ ಸೊಂಕಿತ ವ್ಯಕ್ತಿಯ ಕಣ್ಣುಗಳನ್ನು ವೀಕ್ಷಿಸಿದರೆ ಹರಡುವುದಿಲ್ಲ. ಕೇವಲ ನೇರ ಸಂಪರ್ಕದಿಂದ ಮಾತ್ರ ಹರಡುತ್ತದೆ. ಸೊಂಕು ತಗುಲಿದವರು ಬೇರೆಯವರಿಗೆ ಹರಡದಂತೆ ಸಾಮಾಜಿಕ ಜವಾಬ್ದಾರಿ ತೋರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಗ್ರಾಮ ವಿಕಾಸ ಟ್ರಸ್ಟ್ (ರಿ) ನ ಅಧ್ಯಕ್ಷರಾದ ಶ್ರೀ ಬಸವರಾಜ ಬಶೆಟ್ಟಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಕಣ್ಣಿನ ಜ್ವರ ಇದು ವೈರಸ್ ಅಥವಾ ಬ್ಯಾಕ್ಟೀರಿಯಾದಿಂದ ನಮ್ಮ ಕಣ್ಣುಗಳ ಮೇಲೆ ಪರಿಣಾಮ ಬೀರುವ ಒಂದು ಸಾಂಕ್ರಾಮಿಕ ಕಾಯಿಲೆಯಾಗಿದೆ. ಇತ್ತೀಚಿನ ಪ್ರವಾಹ ಮತ್ತು ಹವಮಾನ ಬದಲಾವಣೆಯಿಂದ ಕಣ್ಣಿನ ಜ್ವರ ಹೆಚ್ಚಾಗುತ್ತಿದೆ. ಕಣ್ಣಿನ ಜ್ವರವು ಪಿಂಕ್ ಐ. ಮದ್ರಾಸ್ ಐ. ರೆಡ್ ಐ ಪ್ರಕಾರವಾಗಿ ಗೋಚರಿಸುತ್ತಿದೆ. ಕಣ್ಣಿನಲ್ಲಿ ಉರಿ ಹಾಗೂ ಊತ ದೃಷ್ಟಿ ಮಂಜಾಗುವುದು, ಕಣ್ಣಿನ ರೆಡ್ಡೆ ಅಂಟಿಕೊಳ್ಳುವುದು ಮುಂತಾದ ಸೊಂಕಿನ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಅಶುಚಿ ಕೈಗಳಿಂದ ಕಣ್ಣು ಮುಟ್ಟಿಕೊಳ್ಳದಿರುವುದು ಹೊರಗೆ ಹೋಗುವಾಗ ಕನ್ನಡ ಧರಿಸುವುದು ರೋಗ ಲಕ್ಷಣ ಕಾಣಿಸಿಕೊಂಡ ಕೂಡಲೇ ವೈದ್ಯರಲ್ಲಿ ಚಿಕಿತ್ಸೆ ಪಡೆಯುವುದು ಮುಂತಾದ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಈ ರೋಗವನ್ನು ತಡೆಗಟ್ಟಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯುವ ಮುಖಂಡರಾದ ಗ್ರಾದ ಪ್ರಭುಶೆಟ್ಟಿ ಪಸರ್ಗಿ, ರಾಜಕುಮಾರ ಪೋಳ್, ಮಹೇಶ ಮಡಿವಾಳ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 30 ತಿಂಗಳು ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಉತ್ತಮ ಆಡಳಿತ ನೀಡಿದ ನಿಮಿತ್ಯ ಗ್ರಾ. ಪಂ. ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಶ್ರೀನಿವಾಸರೆಡ್ಡಿ ನರಸಾರೆಡ್ಡಿ ಅವರಿಗೆ ಶಾಲೆಯಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಸುನೀತಾ ಮೇತ್ರೆ ಮಾಡಿದರೆ ಸ್ವಾಗತವನ್ನು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ದಿವ್ಯಾ ಮನೋಹರ ಮಾಡಿದರೆ, ವಂದನಾರ್ಪಣೆಯನ್ನು ಪ್ರೌಢ ಶಾಲೆಯ ಮುಖ್ಯಶಿಕ್ಷರ ಶ್ರೀ ಲಕ್ಷ್ಮಿಕಾಂತ ನೆರವೇರಿಸಿದರು.