ಕಟ್ಟಡ ರಿಪೇರಿ ಸೇರಿ ಇನ್ನಿತರ ಸೌಲಭ್ಯ ಒದಗಿಸಲು ೨೦೦ ಕೋಟಿ ರೂ.ಅನುದಾನ : ಸಚಿವ ದಿನೇಶ್ ಗುಂಡೂರಾವ್
ಬೀದರ್: ಜಿಲ್ಲಾಸ್ಪತ್ರೆ, ತಾಲೂಕು, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ರಿಪೇರಿ ಸೇರಿ ಇನ್ನಿತರ ಸೌಲಭ್ಯ ಒದಗಿಸಲು ೨೦೦ ಕೋಟಿ ರೂ.ಅನುದಾನ ಬೇಕಾಗಿದೆ. ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಇಲ್ಲಿನ ೧೦೦ ಹಾಸಿಗೆಯ ಗುರುನಾನಕ್ ಆಸ್ಪತ್ರೆಯಲ್ಲಿ ಬುಧವಾರ ನೂತನ ವಿಭಾಗವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದ ಬಹಳಷ್ಟು ಆಸ್ಪತ್ರೆಗಳಲ್ಲಿ ಸಣ್ಣಪುಟ್ಟ ರಿಪೇರಿ ಕೆಲಸಗಳು ತುರ್ತು ಮಾಡಬೇಕಿದೆ. ಬಹಳ ಆಸ್ಪತ್ರೆಗಳಲ್ಲಿ ನಿರ್ವಹಣೆ ಸರಿಯಾಗಿಲ್ಲ ಮತ್ತು ಕಟ್ಟಡಗಳು ಸಹ ರಿಪೇರಿಗೆ ಬಂದಿವೆ. ಎಲ್ಲ ರಿಪೇರಿ ಮಾಡಿ ಆಸ್ಪತ್ರೆಗಳನ್ನು ಸ್ವಚ್ಛತೆಯಿಂದ ಮತ್ತು ಉತ್ತಮವಾಗಿ ಕಾಣುವಂತೆ ಮಾಡಲು ಅಂದಾಜು ೨೦೦ ಕೋಟಿ ರೂ. ಬೇಕಿದೆ. ಸಿಎಂ ಅವರಿಗೆ ಒಪ್ಪಿಸಿ ಆಸ್ಪತ್ರೆಗಳನ್ನು ಈ ವರ್ಷವೇ ಸುಸಜ್ಜಿತ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಡಯಾಲಸಿಸ್ ನಿರ್ವಹಣೆ ವ್ಯವಸ್ಥೆ ಸರಿ ಇಲ್ಲ. ಹೊಸದಾಗಿ ಟೆಂಡರ್ ಕರೆಯಲಾಗಿದೆ. ಈ ಹಿಂದೆ ೧೬೮ ಕೇಂದ್ರಗಳಿದ್ದು, ಇದೀಗ ಹೊಸ ಟೆಂಡರ್ ಮೂಲಕ ೨೧೯ ಹೊಸ ಕೇಂದ್ರಗಳ ಮಾಡಲಾಗುತ್ತಿದೆ. ಕೇಂದ್ರವನ್ನು ಉತ್ತಮ ನಿರ್ವಹಣೆ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡಬೇಕಾಗಿದೆ. ಎರಡ್ಮೂರು ದಿನದಲ್ಲಿ ಟೆಂಡರ್ ಫೈನಲ್ ಆಗಲಿದೆ ಎಂದು ಹೇಳಿದರು.
೧೦೮ ಆಂಬುಲೆನ್ಸ್ ಹೊಸ ವ್ಯವಸ್ಥೆ
ಆರೋಗ್ಯ ಕವಚ ೧೦೮ ಆಂಬುಲೆನ್ಸ್ ಸೇವೆಗೆ ಸರ್ಕಾರ ಪ್ರತಿ ವರ್ಷ ದೊಡ್ಡ ಮೊತ್ತದಲ್ಲಿ ಹಣ ಬಿಡುಗಡೆ ಮಾಡುತ್ತಿದೆ. ಆದರೆ ಗುಣಮಟ್ಟದ ಸೇವೆ ಲಭ್ಯವಾಗುತ್ತಿಲ್ಲ. ಬರುವ ಎರಡು ತಿಂಗಳಲ್ಲಿ ಹೊಸ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ತುರ್ತು ಆರೋಗ್ಯ ಸೇವೆ ನೀಡುವ ಆಂಬುಲೆನ್ಸ್ಗಳ ಸೇವೆ ಮಹತ್ವದ್ದಾಗಿದೆ. ಸದ್ಯ ನಮ್ಮಲ್ಲಿ ಈ ಸೇವೆ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದೆ. ಬಹಳ ವರ್ಷಗಳ ಹಿಂದೆ ಒಪ್ಪಂದ ಆಗಿದ್ದು, ಇದೀಗ ಮುಗಿದಿದೆ. ಸಿಬ್ಬಂದಿಗೆ ವೇತನ ಸರಿಯಾಗಿ ನೀಡುತ್ತಿಲ್ಲ. ಇಂಥ ನೂರೆಂಟು ಸಮಸ್ಯೆಗಳಿವೆ. ಎಲ್ಲ ಸಮಸ್ಯೆಗಳನ್ನು ನಿವಾರಿಸಬೇಕಿದೆ. ಆಧುನಿಕ ತಂತ್ರಜ್ಞಾನ ಮತ್ತು ಜಾಗತಿಕ ಗುಣಮಟ್ಟದ ನಿರ್ವಹಣಾ ಪದ್ಧತಿ ಅಳವಡಿಸಿಕೊಂಡು ಸರಿಯಾಗಿ ನಿರ್ವಹಣೆ ಮಾಡುವ ಕಂಪನಿಗಳಿಗೆ ೧೦೮ ಆಂಬುಲೆನ್ಸ್ ಸೇವೆ ಒದಗಿಸಲಾಗುವುದು. ಎಲ್ಲ ಪ್ರಕ್ರಿಯೆ ಎರಡು ತಿಂಗಳಲ್ಲಿ ಪೂರ್ಣಗೊಳಿಸಿ ಹೊಸ ಸೇವೆ ನೀಡಲಾಗುವುದು ಎಂದು ಹೇಳಿದರು.
ಮೊಬೈಲ್ ಘಟಕದಿಂದ ಆರೋಗ್ಯ ತಪಾಸಣೆ
ಆರೋಗ್ಯ ಜಾಗೃತಿ ಮೂಡಿಸಲು ಹಾಗೂ ಎಲ್ಲ ಜನರ ಆರೋಗ್ಯ ತಪಾಸಣೆ ಮಾಡುವ ನಿಟ್ಟಿನಲ್ಲಿ ೯೦ ಮೊಬೈಲ್ ಮೆಡಿಕಲ್ ಯುನಿಟ್ (ಸಂಚಾರ ವೈದ್ಯಕೀಯ ಘಟಕ) ವಾಹನಗಳನ್ನು ಖರೀದಿಗೆ ತೀರ್ಮಾನಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಚಿಕಿತ್ಸೆ ಕೊಡುವುದೊಂದೇ ನಮ್ಮ ಇಲಾಖೆ ಕೆಲಸವಲ್ಲ, ರೋಗ ಬರುವ ಮುನ್ನ ತಡೆಯುವುದು ಬಹಳ ಮುಖ್ಯ. ಹೀಗಾಗಿ ೯೦ ವೈದ್ಯಕೀಯ ಘಟಕ ಖರೀದಿಗೆ ಸರ್ಕಾರ ತೀರ್ಮಾನಿಸಿದೆ ಎಂದರು. ಘಟಕಗಳ ಮೂಲಕ ರಾಜ್ಯದ ಎಲ್ಲ ಜನರನ್ನು ತಪಾಸಣೆಗೆ ಒಳಪಡಿಸಿ ರೋಗವನ್ನು ಮೊದಲೇ ಪತ್ತೆ ಹೆಚ್ಚಿ ಚಿಕಿತ್ಸೆ ನೀಡುವ ಉದ್ದೇಶ ಹೊಂದಲಾಗಿದೆ. ಹಳ್ಳಿಗಳಲ್ಲಿ ವಿಶೇಷ ಸ್ಕ್ರೀನಿಂಗ್ ಮೂಲಕ ಆರೋಗ್ಯ ಜಾಗೃತಿ ಮೂಡಿಸಲಾಗುವುದು. ಈ ಹಿಂದೆ ಸಿದ್ದರಾಮಯ್ಯ ಆಡಳಿತ ಅವಧಿಯಲ್ಲಿ ವೈದ್ಯಕೀಯ ಘಟಕಗಳು ಇದ್ದವು. ಆದರೆ ಇದೀಗ ಸ್ಥಗಿತಗೊಂಡಿದ್ದು, ಮತ್ತೆ ಆರಂಭಿಸಲಾಗುವುದು. ಗೃಹಲಕ್ಷ್ಮೀ, ಗೃಹಜ್ಯೋತಿಯಂತೆ ಇದೀಗ ಗೃಹ ಆರೋಗ್ಯ ಭಾಗ್ಯವನ್ನು ಸಹ ನೀಡಬೇಕಾಗಿದೆ ಎಂದು ಹೇಳಿದರು.
ಜನಸಂಖ್ಯೆ ಹೆಚ್ಚಾದಂತೆ ರೋಗಗಳು ಅಧಿಕವಾಗುತ್ತವೆ. ಆರೋಗ್ಯ ಸುಧಾರಣೆಯಲ್ಲಿ ಸರ್ಕಾರ ಎಷ್ಟು ಮಾಡಿದರೂ ಸಾಲದು. ನಮ್ಮ ಜತೆಯಲ್ಲಿ ಖಾಸಗಿ ಆಸ್ಪತ್ರೆಗಳು ಕೈಜೋಡಿಸಬೇಕಿದೆ. ನಿತ್ಯ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ, ಸಂಶೋಧನೆಗಳು ನಡೆಯುತ್ತಿವೆ.
|ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ