ಔರಾದ್ ಬರಪೀಡಿತ ಪ್ರದೇಶ ಘೋಷಣೆಗೆ ಒತ್ತಾಯ
ಔರಾದ್ : ಮುಂಗಾರು ಮಳೆ ಬಾರದ ಕಾರಣ ಬಿತ್ತಿದ್ದ ಬೆಳೆಗಳು ಒಣಗಿದ್ದು, ಔರಾದ್ ಮತ್ತು ಕಮಲನಗರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಡಾ. ಭೀಮಸೇನರಾವ ಶಿಂಧೆ ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಶನಿವಾರ ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು, ತಾಲೂಕಿನೆಲ್ಲೆಡೆ ಜುಲೈ ತಿಂಗಳಲ್ಲಿ ವಾಡಿಕೆಯಂತೆ ಮಳೆಯಾಗದ ಕಾರಣ ಖುಷ್ಕಿ ಪ್ರದೇಶಗಳಲ್ಲಿ ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾಗಿದ್ದು, ಇನ್ನೂ ಅಗಷ್ಟ ತಿಂಗಳಲ್ಲಿ ಮಳೆಯಾಗದರಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ತೊಂದರೆ ಉಂಟಾಗಿದೆ. ಬೆಳೆಗಳು ಬಹುತೇಕ ಒಣಗಿವೆ. ಈ ಸಂಬಂಧ ಅಧಿಕಾರಿಗಳು ಸರಕಾರಕ್ಕೆ ಸೂಕ್ತ ವರದಿ ಸಲ್ಲಿಸುವಂತೆ ಆಗ್ರಹಿಸಿದ್ದಾರೆ.
ರೈತರು ಸಂಕಷ್ಟಕ್ಕೀಡಾಗಿದ್ದು ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು. ಕುಡಲೇ ಸರ್ವೇ ಮಾಡುವ ಮೂಲಕ ಸರಕಾರಕ್ಕೆ ವರದಿ ಸಲ್ಲಿಸಬೇಕು ಎಂದಿದ್ದಾರೆ.
ಕಾಂಗ್ರೆಸ್ ಸರಕಾರ ದೀನ ದಲಿತರ, ಬಡವರ ಮತ್ತು ರೈತರ ಬಗ್ಗೆ ಕಾಳಜಿ ಹೊಂದಿದ್ದು, ಸಿದ್ದರಾಮಯ್ಯ ನೇತೃತ್ವದ ಸರಕಾರ ಬಡವರಿಗಾಗಿ ಅನೇಕ ಯೋಜನೆಗಳು ಜಾರಿಗೆ ತಂದಿದ್ದು, ದೇಶಕ್ಕೆ ಮಾದರಿಯಾಗಿದೆ ಎಂದರು.
ಔರಾದ್ ಮತ್ತು ಕಮಲನಗರ ತಾಲೂಕಿನ ಎಲ್ಲ ವಲಯಗಳಿಗೆ ಈಗಾಗಲೇ ಭೇಟಿ ನೀಡಿದ್ದೇನೆ. ಬೆಳೆಗಳು ಪರಿಶೀಲಿಸಿದ್ದೇನೆ. ರೈತರು ಸಂಕಷ್ಟದಲ್ಲಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವ ಮೂಲಕ ಬರಪೀಡಿತ ಪ್ರದೇಶ ಘೋಷಣೆಗೆ ಒತ್ತಾಯಿಸುತ್ತೇನೆ ಎಂದರು.
“ಮುಂಗಾರು ಮಳೆ ಕೈಕೊಟ್ಟಿದ್ದು, ಈಗಾಗಲೇ ಜುಲೈ ಮತ್ತು ಅಗಷ್ಟ ತಿಂಗಳಲ್ಲಿ ಬರಬೇಕಾಗಿದ್ದ ಮಳೆ ತಿಂಗಳಾದರೂ ಬಾರದಿರುವುದನ್ನು ಕಂಡು ರೈತರು ಕಂಗಾಲಾಗಿದ್ದಾರೆ.
ರೈತರು ಸಾಲ-ಸೂಲ ಮಾಡಿ ಬೀಜ ಗೊಬ್ಬರ ಹಾಕಿದ್ದಾರೆ. ಬೆಳೆಗೆ ಕೀಟನಾಶಕ ಔಷಧಿಯೂ ಸಿಂಪಡಣೆ ಮಾಡಿದ್ದಾರೆ.
ಸೋಯಾಬಿನ್, ಉದ್ದು, ಹೆಸರು ಹೂ ಕಾಯಿ ಬಿಡುವ ಸಮಯದಲ್ಲಿ ಮಳೆ ಬಾರದ ಕಾರಣ ಕೈಗೆ ಬಂದಿರುವ ತುತ್ತು ಬಾಯಿಗೆ ಬಾರದಂತಾಗಿದೆ.
ಸರಕಾರ ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ರೈತರು ಹೆದರಬಾರದು. ಸರಕಾರ ಮತ್ತು ನಾನು ನಿಮ್ಮೊಂದಿಗೆ ಇರುತ್ತೆವೆ. ಅಧಿಕಾರಿಗಳು ಬರಗಾಲದ ಸರ್ವೇ ವರದಿಯನ್ನು ಕುಡಲೇ ಸರಕಾರಕ್ಕೆ ಸಲ್ಲಿಸಬೇಕು. ಸರಕಾರ ಬರಪೀಡಿತ ಪ್ರದೇಶ ಘೋಷಣೆ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.