ರಾಜ್ಯ

ಒಕ್ಕಲಿಗ ಯುವ ಬ್ರಿಗೇಡ್ ನಿಂದ ನ್ಯಾ.ಚಂದ್ರಶೇಖರಯ್ಯ ಅವರಿಗೆ ಅಭಿನಂದನೆ, ಸಾಧಕರಿಗೆ ಸನ್ಮಾನ ಸಮಾರಂಭ

ಆದಿಚುಂಚನಗಿರಿ ಶ್ರೀಮಠದಿಂದ ಬೆಂಗಳೂರಿನಲ್ಲಿ ಯುಪಿಎಸಿ ತರಬೇತಿ ಕೇಂದ್ರ ಸ್ಥಾಪನೆ- ಡಾ. ನಿರ್ಮಲಾನಂದನಾಥ ಶ್ರೀಗಳು

ಬೆಂಗಳೂರು: ಆದಿಚುಂಚನಗಿರಿ ಶ್ರೀಮಠದ ವತಿಯಿಂದ ಬೆಂಗಳೂರಿನಲ್ಲಿ ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವೆ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವನ್ನು ತೆರೆಯಲಾಗುವುದು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದ್ದಾರೆ.

ನಗರದ ಭಾರತ್ ಸ್ಕೌಟ್ಸ್‌ & ಗೈಡ್ಸ್‌ ಕೇಂದ್ರ ಕಚೇರಿ- ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ ಕರ್ನಾಟಕ ಹೈಕೋರ್ಟ್‌ ವಿಶ್ರಾಂತ ನ್ಯಾಯಾಧೀಶರು, ಮಾಜಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯನವರಿಗೆ ಜೀವಮಾನ ಸಾಧನೆಯ ಅಭಿನಂದನೆ ಹಾಗೂ ಮಣ್ಣಿನ ಮಕ್ಕಳ ಹೆಮ್ಮೆಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಶ್ರೀಗಳು ಆರ್ಶಿವಚನ ನೀಡಿದರು.

ಬೆಂಗಳೂರಿನಲ್ಲಿ ಯುಪಿಎಸ್‌ ಸಿ ತರಬೇತಿ ಕೇಂದ್ರ ಸ್ಥಾಪಿಸುವ ಕುರಿತಂತೆ ಈಗಾಗಲೇ ಕೆಲ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ರೂಪುರೇಷೆ ಕೂಡ ತಯಾರು ಮಾಡಲಾಗಿದೆ, ದೆಹಲಿಯಲ್ಲಿ ಆದಿಚುಂಚನಗಿರಿ ಮಠದಿಂದಲೇ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡುವ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದು ಶ್ರೀಗಳು ತಿಳಿಸಿದರು.

ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಡಿ ಎಂಟನೇ ತರಗತಿಯಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡಲು ಎಲ್ಲ ರೀತಿಯ ಶಿಕ್ಷಣ ನೀಡಲಾಗುತ್ತದೆ. ಮಠದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾನೂನು ಕಾಲೇಜು ಸ್ಥಾಪಿಸುವ ಕುರಿತು ರೂಪುರೇಷೆ ಮಾಡಿದ್ದು, ಸಮುದಾಯದ ನ್ಯಾಯಾಧೀಶರು, ವಕೀಲರೊಂದೊಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ಒಕ್ಕಲಿಗ ಯುವ ಬ್ರಿಗೇಡ್ ಸಮುದಾಯದ ವಿ ಸಾವಿರಾರು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಿ ಅವರನ್ನು ಉದ್ಯೋಗಕ್ಕೆ ಅಣಿಗೊಳಿಸುತ್ತಿರುವುದು ಶ್ಲಾಘನೀಯ ಎಂದರಲ್ಲದೆ, ಯುವ ಬ್ರಿಗೇಡ್‌ನ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ಅವರನ್ನುಇದೇ ವೇಳೆ ಶ್ರೀಗಳು ಪ್ರಶಂಸಿದರು.

ಅವಕಾಶಗಳ ಬಳಸಿಕೊಳ್ಳಿ
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಹೈಕೋರ್ಟ್ ನ ನ್ಯಾಯಾಧೀಶ ಟಿ.ಜೆ. ಶಿವಶಂಕರೇಗೌಡ, ಒಕ್ಕಲಿಗರು ಬರೀ ನೇಗಿಲು ನಂಬಿ ಬದುಕದೆ ಇಂದಿನ ದಿನಗಳಲ್ಲಿ ಕಷ್ಟದ ಕೆಲಸ. ಇಂದು ಸಾಕಷ್ಟು ಉಜ್ವಲ ಅವಕಾಶಗಳಿದ್ದು, ಅವುಗಳನ್ನು ಸರಿಯಾದ ರೀತಿಯಲ್ಲಿ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ಸಮುದಾಯದ ಶ್ರೀಗಳ ಹೇಳಿಕೆಗೆ ಬೆಂಬಲ
ಅಧ್ಯಕ್ಷತೆ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಮಾತನಾಡಿ, ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನ್ಯಾಯಮೂರ್ತಿ ಚಂದ್ರಶೇಖರಯ್ಯ ಅವರು ಉಪಲೋಕಾಯುಕ್ತರಾಗಿದ್ದ ಅವಧಿಯಲ್ಲಿ ತೃಪ್ತಿಕರವಾಗಿ ಕೆಲಸ ಮಾಡಿದ್ದಾರೆ. ಈ ಸಮಾಜದಲ್ಲಿ ಇದುವರೆಗೂ ಒಕ್ಕಲಿಗ ಸಮಾಜದವರೆಂದು ಹೇಳಿಕೊಳ್ಳುವ ಕೀಳರಿಮೆ ಇತ್ತು,ಆದರೆ, ಈಗ ಆ ರೀತಿ ಇಲ್ಲ ಎಂದು ಹೇಳಿದರು.

ಸಮುದಾಯದ ಸ್ವಾಮೀಜಿಯಾಗಿ ನಮ್ಮ ಸಮಾಜದವರು ಉನ್ನತ ಸ್ಥಾನ ಅಲಂಕರಿಸಬೇಕು ಎಂದು ಹೇಳುವುದು ಉತ್ತಮ ನಿದರ್ಶನವಾಗಿದೆ ಎಂದು ಪರೋಕ್ಷವಾಗಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿಯವರ ಹೇಳಿಕೆಯನ್ನು ಪರೋಕ್ಷವಾಗಿ ಬೆಂಬಲಿಸಿದರು.

ಆದಿಚುಂಚನಗಿರಿ ಮಹಾಸ್ವಾಮೀಜಿಗಳು ಸಮುದಾಯದ ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ತಮ್ಮದೇ ಕೊಡುಗೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ನಾವು ಕೀಳರಿಮೆ ಬೆಳಸಿಕೊಳ್ಳುವ ಅವಶ್ಯಕತೆ ಇಲ್ಲ, ಸಮಾಜದವರಿಗಾಗಿ ಉತ್ತಮ ಕೆಲಸ ಮಾಡಿದರೆ ಎಲ್ಲರೂ ಕೂಡ ನೆನಸಿಕೊಳ್ಳುತ್ತಾರೆ. ಐಎಎಸ್ ಪೂರೈಸಿದ ಸಮುದಾಯದ ಅಭ್ಯರ್ಥಿಗಳು ಸಮುದಾಯಕ್ಕಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಸಮಾಜದ ಋಣ ತೀರಿಸಬೇಕು
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಸಮುದಾಯದಲ್ಲಿ ನಾವು ಏಡಿಯಾಗದೇ ಏಣಅಂದರೆ ಬದುಕಬೇಕು ಅಂದರೆ ಜೀವನದಲ್ಲಿ ಇನ್ನೋಬ್ಬರಿಗೆ ಸಹಾಯ ಮಾಡಬೇಕು, ದೇವರು ಕೊಟ್ಟ ವರವನ್ನು ಸಮಾಜದಲ್ಲಿ ಋಣ ತೀರಿಸುವ ಕೆಲಸ ಮಾಡಬೇಕು, ಕಷ್ಟಪಟ್ಟು ಐಎಎಸ್ ಪಾಸ್ ಮಾಡಿದವರು ಸನ್ಮಾನಿತರು ಅವರನ್ನು ನಮ್ಮವರು ಎಂದು ಸನ್ಮಾನಿಸುವುದು ನಮ್ಮದು ಒಳ್ಳೆಯ ಕೆಲಸ ಎಂದರು.

ಅಸಂಖ್ಯಾತರಿಗೆ ಶಿಕ್ಷಣ, ಉದ್ಯೋಗದ ನೆರವು
ಪ್ರಾಸ್ತಾವಿಕವಾಗಿ ಮಾತನಾಡಿದ ಒಕ್ಕಲಿಗ ಯುವ ಬ್ರಿಗೇಡ್ ನ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ, ದೇಶ-ವಿದೇಶಗಳಲ್ಲಿ ಒಕ್ಕಲಿಗ ಸಮುದಾಯದ ಮಕ್ಕಳಿಗೆ ಶಿಕ್ಷಣ ಹಾಗೂ ಮತ್ತು ಉದ್ಯೋಗ ಕಲ್ಪಿಸುವಲ್ಲಿ ಒಕ್ಕಲಿಗ ಯುವ ಬ್ರಿಗೇಡ್ ಶ್ರಮಿಸುತ್ತಿದೆ ಎಂದು ಹೇಳಿದರು.

ರಾಜಸ್ಥಾನದ ಐಜಿಪಿ ರಾಘವೇಂದ್ರ ಸುಹಾಸ್ ಮತ್ತಿತರು ಮಾತನಾಡಿ, ಸಮುದಾಯದ ಬೆಳೆವಣೆಗೆ ಎಲ್ಲರ ಸಹಕಾರ ಅಗತ್ಯ ಎಂದರಯ.

ಹೆಮ್ಮೆಯ ಸಾಧಕರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಾಗೇಂದ್ರ ಬಾಬು, ಎನ್.ಎಂ. ಶಶಾಂತ್, ಎಚ್‌.ಕೆ. ಸುಮಾ, ಕೆ. ನವ್ಯಾ, ಬಿ.ಎಸ್.‌ ಚಂದನ್, ಡಾ.ವಿವೇಕ್, ಲೇಖನ್ ಎಂ.ರಕ್ಷತ್ ಗೌಡ ಹಾಗೂ ರಾಹುಲ್ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದೇ ವೇಳೆ ಸಮುದಾಯದ ಸಾಧಕರಾದ ಸಾಯಿ ಸನ್ನಿದಿ ವ್ಯವಸ್ಥಾಪಕ ನಿರ್ದೇಶಕ ನಯನಗೌಡ, ಕತಾರ್‌ ಕರ್ನಾಟಕ ಸಂಘದ ಅಧ್ಯಕ್ಷ ಮಹೇಶಗೌಡ ಮತ್ತಿತರ ಸಾಧಕರನ್ನು ಸನ್ಮಾನಿಸಲಾಯಿತು.

Ghantepatrike kannada daily news Paper

Leave a Reply

error: Content is protected !!