ಬೀದರ್

ಎಲ್ಲರ ಮನೆ ಮನೆಗಳ ಮೇಲೆ ಹಾರಾಡಲಿ ಭಾರತದ ರಾಷ್ಟ್ರಧ್ವಜ- ಜಿಲ್ಲಾಧಿಕಾರಿ ಗೋವಿಂದರೆಡ್ಡಿ

ಬೀದರ, ಆಗಸ್ಟ್ 12 – ಭಾರತ ಸ್ವಾತಂತ್ರ‍್ಯದ ಅಮೃತ ಮಹೋತ್ಸವ ನಿಮಿತ್ಯ ಸರ್ಕಾರದ ಸೂಚನೆಯಂತೆ ಹರ್ ಘರ್ ತಿರಂಗಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ಆ. 13 ರಿಂದ 15 ರವರೆಗೆ ಮೂರು ದಿನಗಳ ಕಾಲ ಬೀದರ ಜಿಲ್ಲೆಯ ಪ್ರತಿಯೊಬ್ಬರ ಮನೆ ಮನೆಗಳ ಮೇಲೆ ಭಾರತದ ರಾಷ್ಟ್ರಧ್ವಜ ಹಾರಿಸುವ ಮೂಲಕ ಪ್ರತಿಯೊಬ್ಬರಲ್ಲೂ ದೇಶಪ್ರೇಮ ಮೂಡಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಮನವಿ ಮಾಡಿದ್ದಾರೆ.
ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯಾದ್ಯಂತ ಇದೇ ಆ. 13 ರಿಂದ 15 ರವರೆಗೆ ಹರ್ ಘರ್ ತಿರಂಗಾ ಅಭಿಯಾನವನ್ನು ಆಯೋಜಿಸಲಾಗಿದೆ. ಈ ಅವಧಿಯಲ್ಲಿ ಎಲ್ಲ ಸರ್ಕಾರಿ ಕಚೇರಿಗಳು, ಸಾರ್ವಜನಿಕ ಉದ್ಯಮಗಳು, ಸಾರ್ವಜನಿಕ ಸ್ಥಳಗಳು, ಸಂಘ ಸಂಸ್ಥೆಗಳಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡುವುದು ಸೇರಿದಂತೆ ಸಾರ್ವಜನಿಕರೂ ಸಹ ಸ್ವಯಂ ಪ್ರೇರಿತವಾಗಿ ಭಾಗವಹಿಸಿ, ತಮ್ಮ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ಆಗಸ್ಟ್ 13 ರಿಂದ 15 ರವರೆಗೆ ಮೂರು ದಿನ ಎಲ್ಲರ ಮನೆ ಮನೆಗಳ ಮೇಲೆ ನಿರಂತರವಾಗಿ ಹಾಗೂ ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು, ಸಾರ್ವಜನಿಕ ಸ್ಥಳಗಳಲ್ಲಿ ಧ್ವಜ ಶಿಷ್ಟಾಚಾರವನ್ನು ಚಾಚು ತಪ್ಪದೆ ಪಾಲನೆ ಮಾಡಿ, ಬೆಳಿಗ್ಗೆ 06 ರಿಂದ ಸಂಜೆ 06 ಗಂಟೆಯವರೆಗೆ ರಾಷ್ಟ್ರಧ್ವಜ ಹಾರಿಸಬೇಕು ಎಂದು ತಿಳಿಸಿದ್ದಾರೆ.
ಎಲ್ಲರಿಗೂ ಸುಲಭವಾಗಿ ರಾಷ್ಟ್ರಧ್ವಜ ಲಭ್ಯವಾಗುವಂತೆ ಮಾಡಲು ಬೀದರ ಜಿಲ್ಲೆಗೆ 30000 ರಾಷ್ಟ್ರ ಧ್ವಜಗಳನ್ನು ತರಿಸಲಾಗಿದ್ದು ಪ್ರತಿ ರಾಷ್ಟ್ರಧ್ವಜಕ್ಕೆ 25 ರೂ. 50 ರೂ. ದರ ನಿಗದಿಪಡಿಸಲಾಗಿದೆ ಇವುಗಳನ್ನು ಜಿಲ್ಲೆಯ ನಗರ ಸಭೆ ಮತ್ತು ಪುರಸಭೆಗಳಲ್ಲಿ ವಿತರಿಸಲಾಗುತ್ತಿದ್ದು ಅಲ್ಲಿಂದ ಸಾರ್ವಜನಿಕರು ಪಡೆಯಬಹುದಾಗಿದೆ. ಹರ್ ಘರ್ ತಿರಂಗಾ ಅಭಿಯಾನವು ಪ್ರತಿಯೊಬ್ಬರಲ್ಲೂ ದೇಶಪ್ರೇಮ ಮೂಡುವಲ್ಲಿ, ಅತ್ಯಂತ ಪರಿಣಾಮಕಾರಿಯಾಗಲಿದ್ದು, ಪ್ರತಿಯೊಬ್ಬರೂ ಇದರಲ್ಲಿ ಭಾಗವಹಿಸಬೇಕು. ಎಲ್ಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಅಭಿಯಾನದಲ್ಲಿ ಪಾಲ್ಗೊಂಡು ತಮ್ಮ ತಮ್ಮ ಮನೆಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಬೇಕು. ಜಿಲ್ಲೆಯಲ್ಲಿ ಈ ಅಭಿಯಾನವನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
Ghantepatrike kannada daily news Paper

Leave a Reply

error: Content is protected !!