ಎರಡು ಬಾರಿ ಬ್ಯಾನ್ ಮಾಡಬೇಕೆಂದು ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಇಲ್ಲ:ಅಧ್ಯಕ್ಷರಾದ ರಾಜೇಂದ್ರಕುಮಾರ ಮಣಗೀರೆ
ಬೀದರ್: ಏ.12:ಜಿಲ್ಲೆಯಾದ್ಯಂತ ರಾಜಾರೋಷವಾಗಿ ಯಾರ ಅಂಜಿಕೆಯಿಲ್ಲದೆ ನಡೆಯುತ್ತಿರುವ ಅನಧಿಕೃತ ಕೋಚಿಂಗ್ ಸೆಂಟರ್‍ಗಳನ್ನು ಸಂಪೂರ್ಣವಾಗಿ ಬಂದ್ ಮಾಡಬೇಕೆಂದು ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಅಡಳಿತ ಮಂಡಳಿ ಸಂಘ ಒತ್ತಾಯಿಸಿದೆ.
ಶುಕ್ರವಾರ ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ತೆರಳಿ ಬಿ.ಇ.ಒ ಟಿ.ಆರ್ ದೊಡ್ಡೆ ಅವರಿಗೆ ಲಿಖಿತ ಮನವಿ ಪತ್ರ ಸಲ್ಲಿಸಿ ಅನಧಿಕೃತ ಕೋಚಿಂಗ್ ಸೆಂಟರ್‍ಗಳ ಹಾವಳಿಯಿಂದ ಎಲ್ಲ ರೀತಿಯ ಶಾಲೆಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ, ನಮ್ಮಲ್ಲಿ ಓದುವ ಮಕ್ಕಳು ಕೋಚಿಂಗ್ ಆಸೆಗಾಗಿ ಅನಧಿಕೃತ ಸೆಂಟರ್‍ಗಳಲ್ಲಿ ಪ್ರವೇಶ ಪಡೆಯುತ್ತಿರುವುದರಿಂದ ಶಾಲೆಗಳ ಸ್ಥಿತಿ ಚಿಂತಾಜನಕವಾಗುತ್ತಿದೆ. ಈ ಸೆಂಟರ್‍ಗಳು ಹಣದ ಲಾಲಚಿಗಾಗಿ ನಿತ್ಯ ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 4 ಗಂಟೆ ಹಾಗೂ ಸಾಯಂಕಾಲ 5 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ಕೋಚಿಂಗ್ ನಡೆಸುತ್ತಿರುವುದರಿಂದ ಪಾಲಕರು ಏನು ಅರಿಯದೆ ತಮ್ಮ ಮಕ್ಕಳು ಹೆಚ್ಚೆಚ್ಚು ಓದಬೇಕೆಂಬ ಬಯಿಕೆಯಿಂದ ಅಂತಹ ಅನಧಿಕೃತ ಸೆಂಟರ್‍ಗಳತ್ತ ಮುಖ ಮಾಡುತ್ತಿರುವರು. ಇದು ನೇರಾ ನೇರ ಖಾಸಗಿ ಶಾಲೆಗಳ ಮೇಲೆ ವ್ಯಾಪಕ ಪರಿಣಾಮ ಬೀರುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಸಹ ಈ ಕುರಿತು 05/07/2024 ಹಾಗೂ 21/08/2024 ಎರಡು ಬಾರಿ ಈ ಅನಧಿಕೃತ ಕೋಚಿಂಗ್ ಸೆಂಟರ್‍ಗಳು ಬ್ಯಾನ್ ಮಾಡಬೇಕೆಂದು ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಜರುಗಿಸಿರುವುದು ನಮ್ಮ ಗಮನಕ್ಕೆ ಬಂದಿರುವುದಿಲ್ಲ ಹಾಗೇ ಯಾವುದೇ ಕೋಚಿಂಗ್ ಸೆಂಟರ್‍ಗಳು ಇಲ್ಲಿ ವರೆಗೆ ಬಂದ್ ಆಗಲಿಲ್ಲ ಬದಲಿಗೆ ಹೆಚ್ಚಿಗೆ ಆಗಿರುತ್ತವೆ.
ಈಗ ಮತ್ತೊಮ್ಮೆ ತಮಗೆ ಮನವಿ ಸಲ್ಲಿಸಿದ್ದು, ಈಗಲಾದರೂ ವಿದ್ಯಾರ್ಥಿಗಳ ಹಾಗೂ ಶಾಲೆಗಳ ಹಿತದೃಷ್ಟಿಯಿಂದ ಕೂಡಲೇ ಬೀದರ್ ಜಿಲ್ಲೆಯಲ್ಲಿ ಅನಧಿಕೃತ ಕೋಚಿಂಗ್ ಸೆಂಟರ್‍ಗಳು ಸಂಪೂರ್ಣವಾಗಿ ಬ್ಯಾನ್ ಮಾಡಬೇಕೆಂದು ಆಗ್ರಹಿಸಿದರು.
ಒಂದು ವಾರದ ಹಿಂದಷ್ಟೆ ಈ ವಿಚಾರವಾಗಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿರುವುದಾಗಿ ತಿಳಿಸಿದ ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಅಡಳಿತ ಮಂಡಳಿ ಸಂಘವು ಮುಂದಿನ ವಾರ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಸಹ ಮನವಿ ಸಲ್ಲಿಸುವುದಾಗಿ ಎಚ್ಚರಿಸಿದರು.
ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಅಡಳಿತ ಮಂಡಳಿ ಸಂಘದ ಗೌರವಾಧ್ಯಕ್ಷ ರೇವಣಸಿದ್ದಪ್ಪ ಜಲಾದೆ, ಅಧ್ಯಕ್ಷರಾದ ರಾಜೇಂದ್ರಕುಮಾರ ಮಣಗೀರೆ, ಕಾರ್ಯದರ್ಶಿ ಗುರುನಾಥರೆಡ್ಡಿ ಚಿಂತಾಕಿ, ಬೀದರ್ ತಾಲೂಕಾಧ್ಯಕ್ಷ ಸಂದೀಪ ಶಟಕಾರ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.