ಎಕರೆಗೆ 30 ಸಾವಿರ ಪರಿಹಾರ ಘೋಷಿಸಿ: ಶಾಸಕ ಪ್ರಭು ಚವ್ಹಾಣ ಆಗ್ರಹ
ಮಳೆಯಿಲ್ಲದೆ ರೈತರ ಬೆಳೆಗಳು ಒಣಗಿ ನಾಶವಾಗಿವೆ. ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು ಎಕರೆಗೆ 30 ಸಾವಿರ ಬೆಳೆ ಪರಿಹಾರ ಘೋಷಿಸಬೇಕೆಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು 15 ದಿನಗಳ ಹಿಂದೆಯೇ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮತ್ತು ಕಂದಾಯ ಇಲಾಖೆ ಸಚಿವರಾದ ಕೃಷ್ಣಭೈರೇಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿರುವ ಶಾಸಕರು, ದೂರವಾಣಿ ಮುಖಾಂತರ ಕಂದಾಯ ಸಚಿವರು ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಔರಾದ ಕ್ಷೇತ್ರದಲ್ಲಿನ ಮಳೆ ಕೊರತೆ ಮತ್ತು ಬೆಳೆಹಾನಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ತೀವ್ರ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಕೂಡಲೇ ಧಾವಿಸಬೇಕೆಂದು ತಿಳಿಸಿದ್ದಾರೆ.
ಮುಂಗಾರು ಹಂಗಾಮಿನ ಆರಂಭದಲ್ಲೇ ಮಳೆ ಕೈಕೊಟ್ಟಿದ್ದರಿಂದ ಔರಾದ(ಬಿ) ಕ್ಷೇತ್ರದ ಸಾಕಷ್ಟು ರೈತರು ಎರಡ್ಮೂರು ಬಾರಿ ಬಿತ್ತನೆ ಮಾಡಿ ಕೈಸುಟ್ಟುಕೊಂಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ಸಂಪೂರ್ಣ ಮಳೆ ಕೊರತೆಯಾಗಿದ್ದರಿಂದ ಬರಗಾಲದ ಪರಿಸ್ಥಿತಿ ಆವರಿಸಿತ್ತು. ಬಿತ್ತನೆಯಾದ ಎಲ್ಲ ಬೆಳೆಗಳು ಸುಟ್ಟು ಹೋಗಿದ್ದು, ರೈತರು ತೀವ್ರ ಆತಂಕದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಕೆಲವೊಂದು ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ಕೈಬಿಡಬಹುದೆಂಬ ಊಹಾಪೋಹಗಳು ಹರಿದಾಡುತ್ತಿರುವುದರಿಂದ ಈಗಾಗಲೇ ಆತಂಕದಲ್ಲಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೆಚ್ಚಿನ ಬೆಳೆ ನಷ್ಟ ಅನುಭವಿಸಿದ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶಗಳೆಂದು ಘೋಷಿಸಿ, ಸಂತ್ರಸ್ಥ ರೈತರಿಗೆ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.