ರಾಜ್ಯ

ಎಂ.ಆರ್. ದತ್ತಾತ್ರಿ ಅವರ ಕೃತಿಗೆ ‘ಬುಕ್ ಬ್ರಹ್ಮ’ ಸ್ವಾತಂತ್ರ್ಯೋತ್ಸವದ ಕಾದಂಬರಿ ಪುರಸ್ಕಾರ

ಬೆಂಗಳೂರು: ‘ಬುಕ್ ಬ್ರಹ್ಮ’ ಸ್ವಾತಂತ್ಯ್ರೋತ್ಸವ ಕಾದಂಬರಿ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭವು 2023, ಆಗಸ್ಟ್ 15, ಮಂಗಳವಾರದಂದು ಬನಶಂಕರಿಯ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಜರಗಿತು.

2023ನೇ ಸಾಲಿನ ‘ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಾದಂಬರಿ ಪುರಸ್ಕಾರಕ್ಕೆ ಎಂ.ಆರ್. ದತ್ತಾತ್ರಿ ಅವರ ಅಂಕಿತ ಪ್ರಕಾಶನದಿಂದ ಪ್ರಕಟವಾದ ‘ಒಂದೊಂದು ತಲೆಗೂ ಒಂದೊಂದು ಬೆಲೆ’ ಕೃತಿಗೆ ಲಭಿಸಿತು. ತಮಿಳು ಕಾದಂಬರಿಕಾರ ಚಾರು ನಿವೇದಿತಾ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕಾದಂಬರಿ ಪುರಸ್ಕಾರವು 1 ಲಕ್ಷ್ಮ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಇನ್ನು ಸಮಾಧಾನಕರ ಬಹುಮಾನಗಳಿಗೆ ಉಷಾ ನರಸಿಂಹನ್ ಅವರ ಅಂಕಿತ ಪ್ರಕಾಶನದ ‘ಕೆಂಡದರೊಟ್ಟಿ’, ಕಾ.ತ. ಚಿಕ್ಕಣ್ಣ ಅವರ ರಶ್ಮಿ ಪ್ರಕಾಶನದ ‘ಪುರಾಣ ಕನ್ಯೆ’, ಪೂರ್ಣಿಮಾ ಮಾಳಗಿಮನಿ ಅವರ ಸಪ್ನ ಬುಕ್ ಹೌಸ್ ಪ್ರಕಟಿಸಿದ ‘ಅಗಮ್ಯ’, ಹಾಗೂ ಎಚ್.ಎಸ್. ಅನುಪಮಾ ಅವರ ಲಡಾಯಿ ಪ್ರಕಾಶನದ ‘ಬೆಳಗಿನೊಳಗು ಮಹಾದೇವಿಯಕ್ಕ’ ಕೃತಿಗಳು ಆಯ್ಕೆಯಾಗಿದ್ದು, ಈ ನಾಲ್ಕು ಕೃತಿಗಳಿಗೆ 5,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ನೀಡಲಾಯಿತು.

ತಮಿಳು ಕಾದಂಬರಿಕಾರ ಚಾರು ನಿವೇದಿತಾ ಮಾತನಾಡಿ, “ಅನುವಾದ ಸಾಹಿತ್ಯವು ಪ್ರಸ್ತುತ ಕಾಲಘಟ್ಟದಲ್ಲಿ ಬಹು ಮುಖ್ಯವಾದ ಸಾಹಿತ್ಯವಾಗಿದೆ. ತಮಿಳುನಾಡಿನಲ್ಲಿ ಸಿನಿಮಾವೇ ದೇವರಾಗಿದೆ. ಆದರೆ ಲೇಖಕರು ಅಸ್ತಿತ್ವದಲಿಲ್ಲ. ಸಿನಿಮಾ ಬರಹಗಾರರು ತಮ್ಮನ್ನೇ ಲೇಖಕರು ಎಂದು ಗುರುತಿಸಿಕೊಳ್ಳುತ್ತಿದ್ದಾರೆ. ಆದರೆ ನಮಗೆ ಸೃಜನಶೀಲ ಬರಹಗಾರರ ಕೊರತೆಯಿದೆ. ಅಂತರಾಷ್ಟ್ರೀಯ ಮಟ್ಟದ ಕಾದಂಬರಿಗಳನ್ನು ಅನುವಾದಿಸುವ ಪರಂಪರೆ ಬದಲಾಗಿ ನಮ್ಮದೇ ಸುತ್ತಮುತ್ತಲಿನ ಬೇರೆ ಭಾಷಿಯಾ ಸಾಹಿತ್ಯದ ಅನುವಾದವು ಹೆಚ್ಚಳವಾಗಬೇಕು,” ಎಂದು ತಿಳಿಸಿದರು.

ವಿಮರ್ಶಕಿ ತಾರಿಣಿ ಶುಭದಾಯಿನಿ ಮಾತನಾಡಿ, “ಕಾದಂಬರಿ ಪುರಸ್ಕಾರಕ್ಕೆ ಬಂದಂತಹ ಕಾದಂಬರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕೆಲವೊಂದು ವಿಚಾರಗಳನ್ನು ನಾವು ಗಣನೀಯವಾಗಿ ಪರಿಗಣಿಸಿದ್ದೆವು. ವಸ್ತು ವಿಷಯ, ಪುರಾಣದ ಕುರಿತ ವಸ್ತು ವೈವಿಧ್ಯ, ಭಾಷೆಯ ಸೊಗಡು ಹೀಗೆ ಎಲ್ಲಾ ಕೇಂದ್ರಿತ ಅಂಶಗಳನ್ನು ಹಿಡಿದು ಕಾದಂಬರಿಯನ್ನು ಆಯ್ಕೆಮಾಡಲಾಯಿತು. ಕಾದಂಬರಿ ಅನ್ನುವಂತಹದ್ದು ಓದುಗನಿಗೆ ಮೊದಲು ಖುಷಿಯನ್ನು ಕೊಡಬೇಕು ಎಂದು ತಿಳಿಸಿದರು.

ಅತಿಥಿಯಾಗಿ ಆಗಮಿಸಿದ್ದ ಪ್ರೊ. ರಾಜೇಶ್ ಶೆಣೈ ಮಾತನಾಡಿ, “ಕನ್ನಡ ಸಾಹಿತ್ಯಕ್ಕೆ ಕೊಡುಗೆಯನ್ನು ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಅದ್ಭುತವಾಗಿ ಮೂಡಿದೆ ಬಂದಿದೆ. ಇಂತಹ ಸಮಾರಂಭಗಳು ಇನ್ನು ಹೆಚ್ಚಾಗಿ ನಡೆಯಬೇಕು,” ಎಂದರು.

ಕಾರ್ಯಕ್ರಮದಲ್ಲಿ ಆಯ್ಕೆ ಸಮಿತಿಯಲ್ಲಿದ್ದ ತಾರಿಣಿ ಶುಭದಾಯಿನಿ, ತೆಮಿಳು ಕಾದಂಬರಿಕಾರ ಚಾರು ನಿವೇದಿತಾ, ರಾಜೇಶ್ ಶೆಣೈ, ದೇವು ಪತ್ತಾರ ಸೇರಿದಂತೆ ಅನೇಕ ಗಣ್ಯರು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!