ಆಶ್ರಯ ಮನೆಗಳಲ್ಲಿ ವಾಸಿಸುವವರಿಗೆ ನೇರವಾದ ರಸ್ತೆ ಮೂಲಭೂತ ಹಕ್ಕು ಕಲ್ಪಿಸಿಕೊಡಲು ಮನವಿ.
ಅಮಲಾಪೂರ ಗ್ರಾಮ ಪಂಚಾಯತ ಅಧೀನದಲ್ಲಿ ಬರುವ ಚಿಟ್ಟಾವಾಡಿ ಸಮೀಪ ಗೋರನಳ್ಳಿ ಸರ್ವೆಯಲ್ಲಿ ಜಿಲ್ಲಾ ಆಡಳಿತದಿಂದ ನಿರಾಶ್ರಿತರಿಗೆ ಆಶ್ರಯ ಮನೆಗಳು ಓದಗಿಸಿಕೊಟ್ಟು ಮಾನವೀಯತೆ ಮೆರೆದಿರುವುದು ಗಮನಾರ್ಹ ಕಾರ್ಯ. ಅದೇ ದಾರಿಯಲ್ಲಿ ಇನ್ನು ಮುಂದೆ ಅಪ್ಪ ಇಂಜಿನೀಯರಿAಗ್ ಕಾಲೇಜು ಮತ್ತು ಪ್ರಾಥಮಿಕದಿಂದ ಪಿ.ಯು.ಸಿ. ವರೆಗೂ ಕಾಲೇಜು ಇರುವುದರಿಂದ ಈ ಭಾಗದಲ್ಲಿ ಜನರ ಓಡಾಟ ಸರ್ವೆ ಸಾಮಾನ್ಯವಾಗಿದೆ. ಆದರೆ ಅವರ ಜೀವನೋಪಾಯಕ್ಕೆ ಮುಖ್ಯವಾದ್ದು ಮೂಲಭೂತ ಹಕ್ಕು ಆಗಿರುವ ರಸ್ತೆ ಇಲ್ಲದಿರುವುದು ವಿಷಾದನೀಯ.
ಇದನ್ನು ಮನಗಂಡು ಅಮಲಾಪೂರ ಗ್ರಾಮ ಪಂಚಾಯತ ವತಿಯಿಂದ 2021-22 ನೇ ಸಾಲಿನಲ್ಲಿ ಮೆಟಲ್ ರಸ್ತೆ ನಿರ್ಮಾಣ ಮಾಡಿದೆ. ಶ್ರೀ ಕಾಶಿನಾಥ ಬೆಲ್ದಾಳೆ ಲೇ-ಔಟದಿಂದ ಅಪ್ಪ ಕಾಲೇಜು ವರೆಗೆ ಮತ್ತು ಚಿಟ್ಟಾವಾಡಿಯ ಮುಖ್ಯ ರಸ್ತೆಯಿಂದ ಈ ಆಶ್ರಯ ಮನೆಗಳಿಗೆ ಹೋಗಲು ಮುಖ್ಯ ದಾರಿಗೆ ಸಿಮೆಂಟ್ ರಸ್ತೆ ನೂರಾರು ಮೀಟರ್ ನಿರ್ಮಿಸಿದೆ. ಬೆಲ್ದಾಳೆ ಲೇ-ಔಟ ಸಮೀಪ ಖಾಸಗಿಯವರು ರಸ್ತೆಗೆ ಅನುವು ಮಾಡಿಕೊಡದೇ ಫೀನಿಶಿಂಗ್ ಮಾಡಿರುವುದರಿಂದ ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ ಎಂಬAತ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅಪ್ಪ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೂ ಆಶ್ರಯ ಮನೆಗಳಲ್ಲಿರುವ ನಿರ್ಗತಿಕರು, ಬಡವರು, ಕೂಲಿ ಕಾರ್ಮಿಕ ಜನರು ಮುಖ್ಯ ರಸ್ತೆಗೆ ಬರಲು ನೇರವಾದ ರಸ್ತೆ ಇಲ್ಲದಂತಾಗಿದೆ. ಹೀಗಾಗಿ ಇವರು ಮುಖ್ಯ ರಸ್ತೆಗೆ ಬರಲು ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ. ಕಾಲೇಜು ಸಮಯ ಸಂಜೆಗೆ ಮುಗಿಯುತ್ತದೆ. ಆದರೆ ಆಶ್ರಯ ಯೋಜನೆಯ ಜನರು ರಾತ್ರಿ ಕೆಲಸ ಮುಗಿಸಿಕೊಂಡು ಬರುವ ಅವರ ದಯನೀಯ ಸ್ಥಿತಿ ಹೇಳಲಾಗದು. ವಯೋವೃದ್ಧರು, ಮಹಿಳೆಯರು ಆಸ್ಪತ್ರೆಗೆ ಅಥವಾ ಬೇರೆ ಕೆಲಸಗಳಿಗೆ ಬರಬೇಕಾದರೆ ಕಚ್ಚಾ ರಸ್ತೆಗಳಲ್ಲಿ ಸುತ್ತಿ ಬಳಸಿ ಕತ್ತಲಲ್ಲಿ ಮೊಣಕಾಲು ನೀರಿನೊಳಗೆ ಓಡಾಡುವ ಸ್ಥಿತಿ ಇದೆ.
ಪ್ರಯುಕ್ತ ಖಾಸಗಿಯವರು ಹಾಕಿದ ಫೀನಿಶಿಂಗ್ ತೆಗೆಸಿ ನೇರವಾದ ರಸ್ತೆ ಕಲ್ಪಿಸಿಕೊಡಬೇಕಾಗಿದೆ ಮಳೆಗಾಲ ಇರುವುದರಿಂದ ಅಲ್ಲಿನ ಜನರ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಶೀರ್ಘದಲ್ಲಿ ರಸ್ತೆ ಕಲ್ಪಿಸಿಕೊಡಬೇಕೆಂದು ಬೀದರ ಜಿಲ್ಲಾ ವಿಕಾಸ ವೇದಿಕೆ ಜಿಲ್ಲಾಧ್ಯಕ್ಷರಾದ ರಮೇಶ ಬಿರಾದಾರ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ನಾಗಶೇಟ್ಟಿ ಪಾಟೀಲ್ ಸುಂಕನಾಳ, ಗೋಪಾಲರಾವ ಭೋಸ್ಲೆ, ಪ್ರದೇಪಕುಮಾರ ಕುದರೆ ಇದ್ದರು.